ಮಳೆ ಅನಿಶ್ಚಿತತೆ ಪರ್ಯಾಯ ಬೆಳೆ ಪದ್ದತಿ ಅಳವಡಿಸಲು ರೈತರಿಗೆ ಸಲಹೆ.

ಕೊಪ್ಪಳ ಜು. ೧೫ (ಕರ್ನಾಟಕ ವಾರ್ತೆ): ಮಳೆಯ ಅನಿಶ್ಚಿತತೆಯನ್ನು ರೈತರು ಸಮರ್ಥವಾಗಿ ಎದುರಿಸಲು ಪರ್ಯಾಯ ಬೆಳೆ ಪದ್ಧತಿ ಅಳವಡಿಸುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.  ಮಳೆ ಅನಿಶ್ಚಿತತೆಯನ್ನು ಎದುರಿಸಲು ರೈತರು ೩ ವಿಧದ ಬೆಳೆ ಯೋಜನೆಗಳಿಗೆ ಮಹತ್ವ ಕೊಡಬೇಕಾಗುತ್ತದೆ.  ೧) ಶಾಶ್ವತ ಬೆಳೆ ಯೋಜನೆ – ಅರಣ್ಯ, ತೋಟಗಾರಿಕೆ, ಮೇವಿನ ಹಾಗೂ ವಾರ್ಷಿಕ ಬೆಳೆಗಳು. ೨) ವಾರ್ಷಿಕ ಬೆಳೆ ಯೋಜನೆ – ವಾರ್ಷಿಕ ಬೆಳೆಗಳು ಮಾತ್ರ ಹಾಗೂ ೩) ಪರ್ಯಾಯ ಬೆಳೆ ಯೋಜನೆ – ಬದಲಿ ಬೆಳೆ ಪದ್ಧತಿ.
     ‘ಪರ್ಯಾಯ ಬೆಳೆ ಯೋಜನೆ’ ಎಂದರೆ ಹವಾಮಾನ ವೈಪರೀತ್ಯಕ್ಕೆ ಅನುಗುಣವಾಗಿ ಮಣ್ಣಿನಲ್ಲಿ ಲಭ್ಯವಿರುವ ತೇವಾಂಶ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಮ ಆಯ್ಕೆಯ ಬೆಳೆ ಹಾಗೂ ನಾವು ಅನುಸರಿಸುವ ಬೆಳೆ ಪದ್ಧತಿಗಳನ್ನು ಬದಲಾಯಿಸಿ ಕೈಗೊಳ್ಳಬಹುದಾದ ಯೋಜನೆಯಾಗಿದೆ.
ಪರ್ಯಾಯ ಬೆಳೆ ಯೋಜನೆಯಲ್ಲಿ ಅನುಸರಿಸಬಹುದಾದ ಬೇಸಾಯ ಕ್ರಮಗಳು ಇಂತಿದೆ. ಕಡಿಮೆ ಅವಧಿಯ ಬೆಳೆಗಳ ಮತ್ತು ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ (೬೦-೭೫ ದಿನಗಳ ಅವಧಿಯ ಬೆಳೆ/ತಳಿ).  ಬಿತ್ತನೆ ಬೀಜಕ್ಕೆ ಬರ ನಿರೋಧಕ ಶಕ್ತಿ ಒದಗಿಸಲು ಶೇ. ೨ ರ ಕ್ಯಾಲ್ಸಿಯಂ ಕ್ಲೋರೈಡ್‌ನಿಂದ ಬೀಜೋಪಚಾರ ಮಾಡುವುದು ಸೂಕ್ತ.  ಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು ಮತ್ತು ಕಡಲೆ ಬೆಳೆಗಳಲ್ಲಿ ಶೇ. ೨ ರ ಕ್ಯಾಲ್ಸಿಯಂ ಕ್ಲೋರೈಡ್ ಬಳಸಿ, ಬಿತ್ತನೆ ಬೀಜಗಳನ್ನು ೬ ರಿಂದ ೮ ಗಂಟೆಗಳ ಕಾಲ ಈ ದ್ರಾವಣದಲ್ಲಿ ನೆನೆಸಿ ಹಾಗೂ ಶೇಂಗಾ ಬೆಳೆಯಲ್ಲಿ ಶೇ. ೧ ರ ಕ್ಯಾಲ್ಸಿಯಂ ಕ್ಲೋರೈಡ್ ಬಳಸಿ ಬಿತ್ತನೆ ಬೀಜಗಳನ್ನು ೧ ರಿಂದ ೨ ಗಂಟೆಗಳ ಕಾಲ ಈ ದ್ರಾವಣದಲ್ಲಿ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು.  ಮಳೆಯಾಧಾರಿಸಿ ಸಸಿಗಳ ಸಂಖ್ಯೆಯನ್ನು ಶೇ. ೩೩ ರಿಂದ ೫೦ ರಷ್ಟು ಕಡಿಮೆ ಮಾಡಬೇಕು. ಸಾಲಿನ ಅಂತರ ಹೆಚ್ಚಿಸಿ ಸಸಿಗಳ ಮಧ್ಯದ ಅಂತರ ಕಡಿಮೆ ಮಾಡುವುದು ಸೂಕ್ತ.  ಮೆಕ್ಕೆಜೋಳ ಸಾಲುಗಳ ಅಂತರವನ್ನು ಹೆಚ್ಚಿಸಬೇಕು (೬೦-೯೦ ಸೆಂ.ಮೀ.). ಪ್ರತಿ ಎಕರೆಗೆ ೪ ಕೆ.ಜಿ ಸತುವಿನ ಸಲ್ಫೇಟನ್ನು ಕಾಂಪೋಸ್ಟನೊಂದಿಗೆ ಬೆರೆಸಿ ಮಣ್ಣಿಗೆ ಸೇರಿಸಬೇಕು. ಸೋಯಾ ಅವರೆ, ತೊಗರಿ, ಅಲಸಂದೆ ಅಥವಾ ಸೆಣಬನ್ನು ಅಂತರ ಬೆಳೆಯಾಗಿ ಬೆಳೆಯುವುದು ಉತ್ತಮ.  ತೊಗರಿಯನ್ನು ಸೋಯಾ ಅವರೆ, ಮೆಕ್ಕೆಜೋಳ ಮತ್ತು ಸಜ್ಜೆಯೊಂದಿಗೆ ಅಂತರ ಬೆಳೆಯಾಗಿ ಬೆಳೆಯುವುದು ಮತ್ತು ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ ೮ ಕೆ. ಜಿ ಗಂಧಕ ಬಳಸಬೇಕು.  ಶೇಂಗಾವನ್ನು ಜುಲೈ ಎರಡನೇ ಪಾಕ್ಷಿಕದಲ್ಲಿ ಬಿತ್ತನೆ ಮಾಡುವುದುದಾದರೆ ಗೆಜ್ಜೆ ಶೇಂಗಾದ ಬದಲಾಗಿ ಹಬ್ಬು ಶೇಂಗಾ ಬೆಳೆಯುವುದು. ಹಾಗೂ ಪ್ರತಿ ಎಕರೆಗೆ ೨೦೦ ಕೆ. ಜಿ ಯಂತೆ ಜಿಪ್ಸಂನ ಬಳಕೆ. ಮೆಕ್ಕೆಜೋಳ ಮತ್ತು ಹತ್ತಿಯೊಂದಿಗೆ ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ.
      ಔಡಲ ಬಹು ಮುಖ್ಯ ಮತ್ತು ಅತ್ಯುತ್ತಮ ಪರ್ಯಾಯ ಬೆಳೆ ಎಲ್ಲಾ ರೀತಿಯ ಕೃಷಿ ಪದ್ಧತಿಗಳಲ್ಲೂ ಅಳವಡಿಸಬಹುದು. ಹಿಂಗಾರಿನಲ್ಲಿ ಬೆಳೆಯುವುದರಿಂದ ಕೀಟ ಬಾದೆಯಿಂದ ತಪ್ಪಿಸಿಕೊಳ್ಳಬಹುದು. ಹೆಚ್ಚು ಸಾಲಿನ ಅಂತರದಲ್ಲಿ ಬೆಳೆದು ಅಂತರ ಬೇಸಾಯಕ್ಕೆ ಅನುಕೂಲ ಮಾಡಿಕೊಳ್ಳಬಹುದು. ತೊಗರಿಯೊಂದಿಗೆ ೧:೧ ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆಯುವುದು ಉತ್ತಮ. ತಡವಾದ ಮುಂಗಾರಿಗೆ ಹುರುಳಿ, ಸೆಣಬು ಮತ್ತು ಕಿರು ಧಾನ್ಯಗಳನ್ನು ಬೆಳೆಯುವುದು. ಬರ ತಡೆಯುವ ತರಕಾರಿ ಬೆಳೆಗಳು ಚವಳಿಕಾಯಿ (ಪಿ.ಎನ್.ಬಿ.), ಅವರೆ (ಹೆಬ್ಬಾಳ ಅವರೆ), ಟೊಮೆಟೊ (ಮೇಘ, ಆರ್ಕಾ ಮೇಘಲಿ), ಸವತೆ (ಬೆಳಗಾಂ ಲೋಕಲ್), ಹೀರೇಕಾಯಿ (ಜೈಪುರ ಲಾಂಗ್ ಮತ್ತು ಮಾಲಾಪುರ ಲೋಕಲ್), ಸೋರೆಕಾಯಿ (ಆರ್ಕಾ ಬಾಹರ್), ನುಗ್ಗೆಕಾಯಿ (ಧನರಾಜ್), ಪುಂಡಿ, ಈರುಳ್ಳಿ (ಬಳ್ಳಾರಿ ರೆಡ್) ಬೆಳೆಯಬಹುದು. 
     ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಮತ್ತು ಪೂರ್ತಿ ಗೊಬ್ಬರವನ್ನು ಮೂಲ ಗೊಬ್ಬರವಾಗಿ ಕೊಡುವುದು ಒಳ್ಳೆಯದು.  ರಾಸಾಯನಿಕ ಗೊಬ್ಬರಗಳ ಬದಲಾಗಿ ಲಭ್ಯವಿರುವೆಡೆ ಸ್ವತ: ತಯಾರಿಸಲ್ಪಟ್ಟ ಸಾವಯವ ಗೊಬ್ಬರಗಳ ಬಳಕೆಯಿಂದ ದೀರ್ಘಕಾಲದವರೆಗೆ ತೇವಾಂಶ ಕಾಯ್ದುಕೊಳ್ಳಬಹುದು.  ತೇವಾಂಶ ಕಾಯ್ದುಕೊಳ್ಳಲು ಪದೇ ಪದೇ (ಕನಿಷ್ಟ ೧೫ ದಿನಗಳಿಗೊಮ್ಮೆ) ಎಡೆ ಕುಂಟೆ ಹೊಡೆಯುವುದು ಉತ್ತಮ.  ಸೂರ್ಯಕಾಂತಿ ಮತ್ತು ಶೇಂಗಾ (೧೨ ಇಂಚಿನ ಕೂರಿಗೆ ಬಳಕೆ ಮತ್ತು ಒಂದು ಹುಸಿ ಸಾಲು) ಬೆಳೆಗಳಲ್ಲಿ ಜೋಡು ಸಾಲು ಪದ್ಧತಿ ಅನುಸರಿಸಬೇಕು.  ಬೆಳವಣಿಗೆ ತಡೆಯುವ, ಬಾಷ್ಪೀಭವನ ನಿಯಂತ್ರಿಸುವ ವಸ್ತುಗಳ ಬಳಕೆ. ಬಿತ್ತನೆಯಾದ ೪೫ ದಿನಗಳ ನಂತರ ೧೫ ದಿನಗಳ ಅಂತರದಲ್ಲಿ ಶೇ. ೮ ರ ಕೆಯೋಲಿನ್‌ನನ್ನು ಸಿಂಪಡಿಸಬಹುದು.  ಕಪ್ಪು ಮಣ್ಣು ಮತ್ತು ಆಳವಾದ ಕೆಂಪು ಮಣ್ಣಿನ ಜಮೀನುಗಳಲ್ಲಿ ದಪ್ಪ ಮರಳಿನ ಅಥವಾ ಸಣ್ಣ ಕಲ್ಲುಗಳ ಹೊದಿಕೆ, ಚೌಕುಮಡಿ, ಸಂರಕ್ಷಣಾ ಬೋದುಸಾಲು ಮಾಡುವುದು, ಬೋದು ಮತ್ತು ಹರಿ, ಕುಣಿ ಮಾಡುವುದು, ಇಳುಕಲಿಗೆ ಅಡ್ಡಲಾಗಿ ಸಾಗುವಳಿ ಮಾಡುವುದರಿಂದ ಮಣ್ಣು ಮತ್ತು ನೀರನ್ನು ಸಂರಕ್ಷಿಸಬಹುದು.  ಶುಷ್ಕ ಪರಿಸ್ಥಿತಿ ಮುಂದುವರೆದಲ್ಲಿ ನಿಶಕ್ತ ಹಾಗೂ ಬಾಧೆಗೊಳಗಾದ ಸಸಿಗಳನ್ನು ಕಿತ್ತು ಭೂಮಿಯಲ್ಲಿ ಹರಡುವುದು.  ಬೆಳೆಗಳ ಕೂಳೆ ಮತ್ತು ಇತರೆ ಸಾವಯವ ವಸ್ತುಗಳನ್ನು ಭೂಮಿಯ ಮೇಲೆ ಹರಡಬೇಕು.  ತೇವಾಂಶದ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾಳಾಗುವಂತಿದ್ದರೆ, ಸಾಧ್ಯವಿದ್ದಲ್ಲಿ ನೀರನ್ನು ಒದಗಿಸಿ ಅಥವಾ ಬೆಳೆಗಳನ್ನು ಮೇವಿಗಾಗಿ ಕೊಯ್ಲು ಮಾಡಬಹುದು.  ಬೆಳೆಗಳು ಪೂರ್ತಿ ಹಾಳಾದಲ್ಲಿ ಹರಗಿ ಮುಂದೆ ಮಳೆ ಬಂದಾಗ ಸೂಕ್ತ ಬೆಳೆ ಅಥವಾ ಮೇವಿನ ಬೆಳೆ ಬೆಳೆಯುವುದು ಸೂಕ್ತ.  ಒಂದು ವೇಳೆ ಬೆಳೆ ಅವಧಿಯಲ್ಲಿ ಸಕಾಲಕ್ಕೆ ಮಳೆ ಬಂದರೆ ಖುಷ್ಕಿ ಬೆಳೆಗಳಿಗೂ ಕೂಡ ಮೇಲು ಗೊಬ್ಬರ ಕೊಡುವುದು ಮತ್ತು ಯೂರಿಯಾ ಗೊಬ್ಬರದ ಸಿಂಪರಣೆಯನ್ನು ಅನುಸರಿಸುವುದು ಸೂಕ್ತ.
      ಪರ್ಯಾಯ ಬೆಳೆ ಯೋಜನೆಯ ಅಂಶಗಳನ್ನು ರೈತ ಬಾಂಧವರು ಅನುಸರಿಸಲು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ ಪಾಟೀಲ- ೦೮೫೩೯-೨೨೦೨೦೫ ಹಾಗೂ ವಿಷಯ ತಜ್ಞರನ್ನು ಸಂಪರ್ಕಿಸುವಂತೆ ತಿಳಿಸಿದೆ.

Related posts

Leave a Comment