ಸೇನೆ ಬಂಡಾಯಕ್ಕೆ ಯತ್ನಿಸಿತ್ತೇ?

ಜ.16ರಂದು ಸೂಚನೆಯಿಲ್ಲದೆ ದಿಲ್ಲಿಗೆ ಸಾಗಿದ್ದ ಸೇನಾ ತುಕಡಿ! : ಸಂದೇಹಾಸ್ಪದವಾದ ಸೇನೆಯ ನಡೆ 
ವರದಿಯನ್ನು ನಿರಾಕರಿಸಿದ ಪ್ರಧಾನಿ ಸಿಂಗ್
ಹೊಸದಿಲ್ಲಿ, ಎ.4: ಭೂ ಸೇನೆಯ ಎರಡು ತುಕಡಿಗಳು ಕಳೆದ ಜನವರಿಯಲ್ಲಿ ಪೂರ್ವ ಸೂಚನೆಯಿಲ್ಲದೆ ದಿಲ್ಲಿಯ ಕಡೆಗೆ ಬಂದಿದ್ದವೆಂಬ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಪ್ರಶ್ನಿಸಿದ್ದಾರೆ. ಈ ವರದಿಯು ‘ಗುಲ್ಲೆಬ್ಬಿಸುವಂತಹದು’ ಎಂದಿರುವ ಅವರು, ಅದನ್ನು ಗಂಭೀರವಾಗಿ ಸ್ವೀಕರಿಸಲಾಗದು ಎಂದಿದ್ದಾರೆ. ಭೂ ಸೇನಾ ದಂಡನಾಯಕನ ಕಚೇರಿಯು ಒಂದು ಘನತೆಯುಳ್ಳ ಕಚೇರಿಯಾಗಿದೆ. ಅದರ ಘನತೆಯನ್ನು ಕುಂದಿಸದಿರುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಪ್ರಧಾನಿ ರಾಜಭವನದಲ್ಲಿ ಇಂದು ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ನೇಪಥ್ಯದಲ್ಲಿ ಹೇಳಿದರು.
ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಕೂಡ ಈ ವರದಿಯನ್ನು ತಳ್ಳಿ ಹಾಕಿದ್ದು, ಅದು ಸಂಪೂರ್ಣ ನಿರಾಧಾರ ಎಂದಿದ್ದಾರೆ.
ವಿಶಾಖಪಟ್ಟಣದಲ್ಲಿ ‘ಐಎನ್‌ಎಸ್ ಚಕ್ರ’ ಸಮರ ನೌಕೆಯನ್ನು ಜಲ ಸೇನೆಗೆ ಸಮರ್ಪಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಪತ್ರಿಕಾ ವರದಿ ಆಧಾರ ರಹಿತ ಹಾಗೂ ಸೇನೆಯ ಚಲನೆ ಮಾಮೂಲು ಸಂಗತಿ ಎಂದರು. ಸೇನೆಯ ದೇಶಭಕ್ತಿಯನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಭಾರತೀಯ ಪ್ರಜಾಸತ್ತೆಯನ್ನೇ ಅವಮಾನಿಸಿದಂತಾದೀತು. ಭಾರತೀಯ ಭೂ, ಜಲ ಹಾಗೂ ವಾಯು ಸೇನೆಗಳ ಬಗ್ಗೆ ತನಗೆ ಹೆಮ್ಮೆಯಿದೆಯೆಂದು ಆ್ಯಂಟನಿ ಹೇಳಿದರು.
ಜನವರಿ 16ರ ತಡ ರಾತ್ರಿ, ಹಿಸಾರ್ ನೆಲೆಯ(ಹರ್ಯಾಣ) ಯಾಂತ್ರೀಕೃತ ಪದಾತಿ ದಳದ ಪ್ರಮುಖ ತುಕಡಿಯೊಂದರ ಅನಿರೀಕ್ಷಿತ ಹಾಗೂ ಪೂರ್ವ ಸೂಚನೆಯಿಲ್ಲದ ಚಲನ ವಲನದ ಬಗ್ಗೆ ಕೇಂದ್ರೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದವೆಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿತ್ತು. ಅದು ಭೂಸೇನಾ ವರಿಷ್ಠ ಜ ವಿ.ಕೆ. ಸಿಂಗ್ ತನ್ನ ಜನ್ಮ ದಿನಾಂಕ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ ದಿನವಾಗಿತ್ತು. ಮಾಮೂಲು ಕ್ರಮದಂತೆ ನಿಗಾವಣೆ ವ್ಯವಸ್ಥೆಯನ್ನು ಎಚ್ಚರಿಸಲಾಯಿತು. ಇದು ‘ನೀಲಿ ನಕ್ಷತ್ರ’ ಕಾರ್ಯಾಚರಣೆಯ ಬಳಿಕ ಸಿಖ್ ಗುಂಪುಗಳ ಕೆಲವು ದಂಗೆಕೋರರು 1984ರ ಜೂನ್‌ನಲ್ಲಿ ರಾಷ್ಟ್ರ ರಾಜಧಾನಿಯ ಕಡೆಗೆ ಸಾಗಿದ ವೇಳೆ ಜಾರಿಗೊಳಿಸಲಾಗಿದ್ದ ಶಿಷ್ಟಾಚಾರದ ಒಂದು ಭಾಗವಾಗಿತ್ತೆಂದು ಪತ್ರಿಕೆ ವರದಿ ಮಾಡಿತ್ತು. ಸಾಕಷ್ಟು ದೊಡ್ಡ ಪ್ರಮಾಣದ ಸೇನಾ ತುಕಡಿಯ ಚಲನೆಯನ್ನು ನಿಗಾವಣೆಯು ದೃಢಪಡಿಸಿತ್ತೆಂದು ಅದು ಹೇಳಿದೆ.
ಅದು 48 ಟ್ಯಾಂಕ್ ವಾಹಕಗಳಲ್ಲಿ ಹೊರಿಸಲಾದ ರಶ್ಯ ನಿರ್ಮಿತ ಸಶಸ್ತ್ರ ಸಮರ ವಾಹನಗಳೊಂದಿಗೆ ಯಾಂತ್ರೀಕೃತ ಪದಾತಿ ದಳದ ಇಡೀ ತುಕಡಿಯೆಂಬುದನ್ನು ಶೀಘ್ರವೇ ಗುರುತಿಸಲಾಯಿತು. ಅನಂತರ ಸೇನಾ ಚಲನೆಯ ಸೂಚನೆಯಿಲ್ಲದುದರಿಂದ ಕಳವಳ ಉಂಟಾಯಿತು. ಅಲ್ಲದೆ ಭೂ ಸೇನಾ ದಿನಾಚರಣೆ ಜ.15ರಂದೇ ಮುಕ್ತಾಯವಾಗಿತ್ತು. ದಿಲ್ಲಿಯ ಕಡೆಗೆ ಇನ್ನೊಂದು ಸೇನಾ ಚಲನೆಯ ವರದಿ ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರತಿಪಾದಿಸಿತ್ತು. ಆ ತುಕಡಿಯನ್ನು ಆಗ್ರಾ ನೆಲೆಯ 50 ಛಾಯಾ ಸೇನೆಯ ಬೃಹತ್ ಘಟಕವೆಂದು ಗುರುತಿಸಲಾಯಿತು.
ದಕ್ಷಿಣ ದಿಲ್ಲಿಯಲ್ಲೂ ನಿಗಾವಣೆಯನ್ನು ಸಕ್ರಿಯಗೊಳಿಸಲಾಯಿತು ಹಾಗೂ ತುಕಡಿಯನ್ನು ಗುರುತಿಸಲಾಯಿತು. ಈ ಹೊತ್ತಿಗೆ ಎರಡೂ ತುಕಡಿಗಳನ್ನು ಪತ್ತೆ ಹಚ್ಚಿ ನಿಗಾ ಇರಿಸಲಾಯಿತು ಎಂದು ವರದಿ ವಿವರಿಸಿದೆ.
ರಕ್ಷಣಾ ಸಚಿವರಿಗೆ ಈ ವಿಚಾರವನ್ನು ತಿಳಸಲಾಯಿತು ಹಾಗೂ ಕೇಂದ್ರ ಸರಕಾರವು ಅಂತಹ ಕ್ರಮವನ್ನು ವಿಳಂಬಿಸಲು ಕೇಂದ್ರವು ಹಳೆಯದಾದ ಆಪತ್ಕಾಲೀನ ಯೋಜನೆಯನ್ನು ಕಾರ್ಯಗತಗೊಳಿಸಿತು. ವಾಹನಗಳ ಸಂಚಾರವನ್ನು ನಿಧಾನಗೊಳಿಸುವುದಕ್ಕಾಗಿ ದಿಲ್ಲಿಗೆ ಬರುವ ಹೆದ್ದಾರಿಯಲ್ಲಿ ಎಲ್ಲ ವಾಹನಗಳನ್ನು ತಪಾಸಣೆಗೊಳಿಸುವಂತೆ ಪೊಲೀಸರಿಗೆ ಎಚ್ಚರಿಕೆಯ ಸೂಚನೆ ನೀಡಲಾಯಿತು.
ಪ್ರಧಾನಿಗೆ ಈ ಬೆಳವಣಿಗೆಯ ಕುರಿತು ಜ.17ರ ನಸುಕಿನಲ್ಲಿ ಮಾಹಿತಿ ನೀಡಲಾಯಿತು ಎಂದು ವರದಿ ತಿಳಿಸಿದೆ.
ರಕ್ಷಣಾ ಕಾರ್ಯದರ್ಶಿ ಶಶಿಕಾಂತ ಶರ್ಮರಿಗೆ ತನ್ನ ಮಲೇಶ್ಯ ಪ್ರವಾಸವನ್ನು ಮೊಟಕುಗೊಳಿಸುವಂತೆ ಸೂಚಿಸಲಾಯಿತು.
ರಕ್ಷಣಾ ಕಾರ್ಯದರ್ಶಿ ತಡರಾತ್ರಿ ತನ್ನ ಕಚೇರಿಯನ್ನು ತೆರೆದರು ಹಾಗೂ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ ಲೆ ಜ ಎ.ಕೆ. ಚೌಧುರಿಯವರಿಂದ ವಿವರಣೆಯೊಂದನ್ನು ಕೇಳಿದರು.
ಲೆ ಜ ಚೌಧುರಿ, ಅದೊಂದು ಮಾಮೂಲು ಸೇನಾ ಕವಾಯತು ಎಂದರು. ಮಂಜು ಮುಸುಕಿನ ವೇಳೆ ಪ್ರಧಾನ ತುಕಡಿಗಳನ್ನು ತುರ್ತಾಗಿ ನಿಯೋಜಿಸುವ ಸಾಮರ್ಥ್ಯದ ತಪಾಸಣೆಯನ್ನು ತಾನು ನಡೆಸುತ್ತಿರುವುದಾಗಿ ಸೇನೆ ವಿವರಿಸಿತು.
ಎರಡೂ ತುಕಡಿಗಳನ್ನು ಕೂಡಲೇ ಹಿಂದಿರುಗಿಸುವಂತೆ ಡಿಜಿಎಂಒಗೆ ಸೂಚಿಸಲಾಯಿತು. ಇದೊಂದು ಮಂಜಿನ ಕಾಲದ ಸರಳ ಕವಾಯತೆಂದು ಸೇನೆ ನೀಡಿದ ವಿವರಣೆಯನ್ನು ಉನ್ನತ ಮಟ್ಟದಲ್ಲಿ ಸಂದೇಹಾಸ್ಪದವಾಗಿ ಪರಿಭಾವಿಸಲಾಯಿತು ಎಂದು ಪತ್ರಿಕೆ ವಿವರಿಸಿದೆ. ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಸೇನೆ ಹಾಗೂ ಸರಕಾರದ ನಡುವೆ ವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆಂದು ಟೀಕಿಸಿದೆ. ಈ ವಿಷಯದ ಕುರಿತಾದ ಸಂಶಯವನ್ನು ಪ್ರಧಾನಿ ಪರಿಹರಿಸಬೇಕೆಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ‘ಟ್ವೀಟಿಸಿ’ದ್ದಾರೆ.
ಭೂ ಸೇನಾ ದಂಡನಾಯಕನ ಕಚೇರಿಯು ಒಂದು ಘನತೆಯುಳ್ಳ ಕಚೇರಿಯಾಗಿದೆ. ಅದರ ಘನತೆಯನ್ನು ಕುಂದಿಸದಿರುವ ಹೊಣೆ ನಮ್ಮೆಲ್ಲರ ಮೇಲಿದೆ.              – ಮನಮೋಹನ್ ಸಿಂಗ್, ಪ್ರಧಾನಿ
ಸೇನೆಯ ದೇಶಭಕ್ತಿಯನ್ನು ಪ್ರಶ್ನಿಸು ವಂತಿಲ್ಲ. ಪ್ರಶ್ನಿಸಿದರೆ ಭಾರತೀಯ ಪ್ರಜಾಸತ್ತೆಯನ್ನೇ ಅವಮಾನಿಸಿದಂತಾದೀತು. ಭಾರತೀಯ ಭೂ, ಜಲ ಹಾಗೂ ವಾಯು ಸೇನೆಗಳ ಬಗ್ಗೆ ತನಗೆ ಹೆಮ್ಮೆಯಿದೆ.     – ಎ.ಕೆ. ಆಯಂಟನಿ, ರಕ್ಷಣಾ ಸಚಿವ
Please follow and like us:
error