ಪ್ರವಾಸಿ ಟ್ಯಾಕ್ಸಿ ಯೋಜನೆ ಪರಿಶಿಷ್ಟ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಕೊಪ್ಪಳ,
ಜ.೦೨ (ಕ ವಾ) ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಇವರ
ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾವಂತ
ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ
ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
    
ಯೋಜನೆಯಡಿ ಆಯ್ಕೆಗೊಳ್ಳುವ ಫಲಾನುಭವಿಗಳಿಗೆ ತಲಾ ೨ ಲಕ್ಷ ರೂ.ಗಳನ್ನು ಸಹಾಯಧನ
ರೂಪದಲ್ಲಿ ನೀಡಲಾಗುತ್ತಿದ್ದು, ವಾಹನದ ಬೆಲೆಯ ಶೇಕಡಾ ೫ ರಷ್ಟು ಮೊತ್ತವನ್ನು ಆಯ್ಕೆಯಾದ
ಫಲಾನುಭವಿಗಳು ಭರಿಸಬೇಕಾಗುತ್ತದೆ. ಅಲ್ಲದೇ, ಉಳಿದ ಮೊತ್ತವನ್ನು ರಾಷ್ಟ್ರೀಕೃತ ಅಥವಾ
ವಾಣಿಜ್ಯ ಬ್ಯಾಂಕ್ ಮೂಲಕ ಸಾಲವನ್ನು ಫಲಾನುಭವಿಯೇ ಪಡೆದುಕೊಳ್ಳಬೇಕಾಗುತ್ತದೆ. ಜನಸಂಖ್ಯೆ
ಹಾಗೂ ಪ್ರವಾಸಿ ತಾಣಗಳ ಸಂಖ್ಯೆಯನ್ನು ಮಾನದಂಡವಾಗಿಟ್ಟುಕೊಂಡು ಕೊಪ್ಪಳ ಜಿಲ್ಲೆಯ
ಪರಿಶಿಷ್ಟ ಜಾತಿಗೆ ಸೇರಿದ ಫಲಾನುಭವಿಗಳಿಗೆ ೧೦ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ
ಫಲಾನುಭವಿಗಳಿಗೆ ೦೨ ಸೇರಿದಂತೆ ಒಟ್ಟು ೧೨ ಪ್ರವಾಸಿ ಟ್ಯಾಕ್ಸಿಗಳ ಗುರಿ ಹಂಚಿಕೆ
ಮಾಡಲಾಗಿದೆ. ಅಲ್ಲದೆ, ೨೦೧೩-೧೪ನೇ ಸಾಲಿನಲ್ಲಿ ಉಳಿದಿರುವ ಹಿಂಬಾಕಿ ೨೧ ಪ್ರವಾಸಿ
ಟ್ಯಾಕ್ಸಿಗಳಿಗೆ ಹಾಗೂ ೨೦೧೪-೧೫ನೇ ಸಾಲಿನ ಪರಿಶಿಷ್ಟ ಪಂಗಡದ ೦೪ ಪ್ರವಾಸಿ ಟ್ಯಾಕ್ಸಿಗಳ
ವಿತರಣೆಗೂ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವ
ಅಭ್ಯರ್ಥಿಗಳು ಕಡ್ಡಾಯವಾಗಿ ಕೊಪ್ಪಳ ಜಿಲ್ಲೆಯವರಾಗಿರಬೇಕು. ೨೦ ರಿಂದ ೪೫ ವರ್ಷದೊಳಗಿನ
ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಕ್ಕೆ
ಸೇರಿದವರಾಗಿರಬೇಕು. ಕನಿಷ್ಟ ೧೦ನೇ ತರಗತಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ
ಪರವಾನಗಿ ಪಡೆದು ಕನಿಷ್ಟ ಒಂದು ವರ್ಷವಾಗಿರಬೇಕು ಮತ್ತು ಎಲ್.ಎಮ್.ವಿ ಬ್ಯಾಡ್ಜ್
ಕಡ್ಡಾಯವಾಗಿ ಹೊಂದಿರಬೇಕು, ಕುಟುಂಬದಲ್ಲಿ ಯಾರು ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ
ಮಂಡಳಿಗಳಲ್ಲಿ ನೌಕರಿಯಲ್ಲಿರಬಾರದು. ಅರ್ಜಿಯೊಂದಿಗೆ ಸಲ್ಲಿಸಲಾಗಿರುವ ವರಮಾನ ಪತ್ರದ
ಪ್ರಕಾರ ಅರ್ಜಿಗಳನ್ನು ಕ್ರೋಢೀಕರಿಸಿ ಅತಿ ಕಡಿಮೆ ವರಮಾನ ಹೊಂದಿರುವ ಕಡು ಬಡವರನ್ನು
ಆಯ್ಕೆ ಮಾಡಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು
ಅವಕಾಶವಿರುತ್ತದೆ.
     ಅರ್ಜಿಗಳನ್ನು ಜ.೦೧ ರಿಂದ ಜ.೨೫ ರವರೆಗೆ ಜಿಲ್ಲಾಡಳಿತ
ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯಾಲಯದಲ್ಲಿ ಹೆಸರನ್ನು ನಮೂದಿಸಿ, ೨೫ ರೂ.
ಪಾವತಿಸಿ ಪಡೆಯಬಹುದಾಗಿದೆ. ಅರ್ಜಿಯನ್ನು ಖುದಾಗಿ ಅಭ್ಯರ್ಥಿಗಳು ಪಡೆದುಕೊಂಡು,
ದ್ವಿಪ್ರತಿಯಲ್ಲಿ ಭರ್ತಿ ಮಾಡಿ, ಅರ್ಜಿಯೊಂದಿಗೆ ಇತ್ತೀಚಿನ ೦೨ ಭಾವಚಿತ್ರ ಹಾಗೂ
ಗೆಜೆಟೆಡ್ ಅಧಿಕಾರಿಗಳಿಂದ ಎಲ್ಲಾ ದಾಖಲಾತಿಗಳನ್ನು ದೃಢೀಕರಿಸಿ ಲಗತ್ತಿಸಿ, ಎ೪ ಗಾತ್ರದ
ಲಕೋಟೆಯಲ್ಲಿ ಚೆಕ್ ಲಿಸ್ಟ್ ಪ್ರಕಾರ ತುಂಬಿ ಸೀಲು ಮಾಡಿದ ಲಕೋಟೆಯೊಂದಿಗೆ ಜ.೨೫ ರಿಂದ
ಜ.೩೦ ರ ಸಂಜೆ ೦೪.೩೦ ರೊಳಗಾಗಿ ಸಲ್ಲಿಸಿ, ಸ್ವೀಕೃತಿ ಪಡೆಯಬಹುದಾಗಿದೆ.
    
ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿ, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿ
ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ
ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
Please follow and like us:
error