fbpx

ಕುಪ್ಪಳಿ ಕವಿಮನೆಯಲ್ಲೊಂದು ದಿನ

ಕನ್ನಡದ ಮೇಸ್ಟ್ರು ರಾಷ್ಟ್ರಕವಿ ಕುವೆಂಪುರವರ ಪದ್ಯಗಳನ್ನ ವರ್ಣಮಯವಾಗಿ ವಿಮರ್ಶಿಸಿ , ವಿಶ್ಲೇಷಿಸಿ ಹೇಳುತ್ತಿದ್ದಾಗ  ಕುವೆಂಪುರವರನ್ನ ಒಮ್ಮೆ ಕಣ್ಣಾರೆ ಕಾಣುವ ಆಸೆಯಿತ್ತು, ಆದರೆ ಆ ಆಸೆ ಆಸೆಯಾಗಿಯೇ ಉಳಿಯಿತ್ತು, ಅವರು ಹುಟ್ಟಿ ಬೆಳೆದು ಬಾಲ್ಯವನ್ನು ಕಳೆದ ಕುಪ್ಪಳಿಯಲ್ಲಿರುವ ಅವರ ’ಕವಿಮನೆ’ಗೆ ಈಚೆಗೆ ಭೇಟಿ ಕೊಟ್ಟಾಗ  ಕಳೆದು ಕೊಂಡ ವಸ್ತುವೊಂದು ದೊರಕಿದ ಅನುಭವ ನನಗಾಯಿತು.
ನಿಸರ್ಗದತ್ತವಾದ ಪ್ರಕೃತಿ ಸೌಂದರ್ಯದ ’ಕುಪ್ಪಳಿ’ ಎನ್ನುವ ಕುಗ್ರಾಮ ಇಂದು ಇಡೀ ವಿಶ್ವಪಟದ ಶಾಶ್ವತ ಆಕರ್ಷಣೆಯ ಸ್ಥಾನವನ್ನ ಅಲಂಕರಿಸಿ ’ಮಾನವನನ್ನು ವಿಶ್ವ ಮಾನವ’ನ್ನಾಗಿಸಿದ ಪುಣ್ಯದ ಬೀಡು. ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ ’ರಾಷ್ಟ್ರಕವಿ ಕುವೆಂಪುರ ಜನ್ಮ ಭೂಮಿಗೆ ಭೇಟಿ ನೀಡುವ ಸುವರ್ಣಾವಕಾಶವೊಂದು  ಒದಗಿ ಬಂದಿದ್ದು ಆಕಸ್ಮಿಕ. ಎಷ್ಟೋ ಭಾರಿ ಅದೇ ಮಾರ್ಗ ವಾಗಿ ಪಯಣಿಸಿದ್ದರು ಆ ದಿವ್ಯ ನೆಲವನ್ನು ಸ್ಪರ್ಶಿಸುವ ಅವಕಾಶ ಸಿಕ್ಕಿರಲಿಲ್ಲ, ’ಎಲ್ಲದಕ್ಕೂ ಕಾಲ ಕೂಡಿ ಬರಬೇಕು’ ಎನ್ನುವ  ಹಾಗೆ  ಸ್ನೇಹಿತರಾದ ಶೋಭಾ ಶಂಕರಾನಂದ್   ಅವರ ಕುಟುಂಬದ ಕೃಪೆಯಿಂದ ಪುಣ್ಯ ಭೂಮಿಯ ದರ್ಶನ ಪಡೆಯುವ ಭಾಗ್ಯ ಒದಗಿ ಬಂದಿತು. 
’ಕವಿ ಮನೆ’ 
ರಾಷ್ಟ್ರಕವಿ ಕುವೆಂಪುರ ಹುಟ್ಟು ಹಾಗೂ ಬಾಲ್ಯದ ರಸಜೀವನಕ್ಕೆ ಸಾಕ್ಷಿ ಯಾದ ’ಕವಿಮನೆ’  ಕನ್ನಡ ಸಾಹಿತ್ಯಾಭಿಮಾನಿಗಳ ಪುಣ್ಯ ಕ್ಷೇತ್ರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ೧೫ ಕಿಮೀ ಎಡಕ್ಕೆ ಕುಪ್ಪಳಿಗೆ ಹೋಗುವ ಮಾರ್ಗದಲ್ಲಿ  ಒಂದು ಕಿಮೀ ದೂರ ಕ್ರಮಿಸಿದರೆ ’ಕವಿಮನೆ’ ಯ ದರ್ಶನವಾಗುವುದು.
  ದಟ್ಟ ಅಡವಿ, ಬೆಳೆದು ನಿಂತ ಮರ,ಗಿಡ,ಪೊಟರೆಗಳು, ಕಣ್ಣು ಹಾಯಿಸಿದಷ್ಟು ಹಸಿರುಕಾನನ, ಊರೆಂದರೆ ಮನೆಗಳ ಗುಂಪಲ್ಲ,  ಊರಿಗೊಂದೆ ಮನೆ ಅದೇ ಮಲೆನಾಡಿನ ವೈಶಿಷ್ಠ,  ಅದೇ ’ಕವಿಮನೆ’ಯ ವಿಶಿಷ್ಠ, ಪ್ರವೇಶ ದ್ವಾರದಲ್ಲಿಯೇ  ’ನನ್ನ ಮನೆ’ ಕವನವು ಸ್ವಾಗತಿಸಿ ಕುವೆಂಪು ಅವರಿಗಿದ್ದ ಆ ಮನೆಯ ಮೇಲಿನ ಪ್ರೀತಿ ಭಾವನಾತ್ಮಕ ಸಂಬಂಧವನ್ನು ಅನಾವರಣ ಗೊಳಿಸುವುದು, ಕವನದ  ಆಯ್ದ ಸಾಲುಗಳಿವು
ಮನೆ ಮನೆ ಮುದ್ದು ಮನೆ 
ಮನೆ ಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಎತ್ತಿಕೊಂಡ ಮನೆ
 ನಾನು ನುಡಿಯ ಕಲಿತ ಮನೆ 
ನಾನು ನಡಿಗೆಯರಿತ ಮನೆ
ನಾನು ಬಿದ್ದು ಎದ್ದ ಮನೆ
ಮೊದಲು ಬೆಳಕು ಕಂಡ ಮನೆ:
ತಂಗಿ ತಮ್ಮರೊಡನೆ ಹಿಟ್ಟು ತಿಂದು ಬೆಳೆದ ನನ್ನ ಮನೆ
 ಮೊದಲ ಮಿಂಚು ಹೊಳೆದ ಮನೆ ಮೊದಲ ಗುಡುಗು ಕೇಳ್ದ ಮನೆ
ಮೊದಲ ಮಳೆಯು ಕರೆದು ಕರೆದು ಹೆಂಚ ಮೇಲೆ ಸದ್ದು ಹರಿದು ಮಾಡಿನಿಂದ ನೀರು ಸುರಿದು ಬೆರಗನಿತ್ತ ನನ್ನ ಮನೆ
ಕವನ ಓದಿದಾಕ್ಷಣ ಭಾವನ ಲೋಕದಲ್ಲಿ ವಿಹರಿಸಿ ಮಂತ್ರ ಮುಗ್ಧಳನ್ನಾಗಿಸಿತು.
ಕವಿಮನೆಯ ಸುತ್ತೆಲ್ಲ್ಲಾ ಅಡಿಕೆ ತೋಟಗಳು, ಸರಾಸರಿ ೨೦೦ ವರ್ಷಗಳಷ್ಟು ಹಳೆಯದಾದ ಕುವೆಂಪು   ಪೂರ್ವ ಜನರು ಕಟ್ಟಿಸಿದ್ದ ತೊಟ್ಟಿ ಮನೆಯನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ನವೀಕರಿಸಿ ಸ್ವಚ್ಚವಾಗಿ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ,  ಪೂರ್ವಕ್ಕೆ ಮುಖ್ಯ ದ್ವಾರವಿದ್ದು ಮನೆಯನ್ನು ಪ್ರವೇಶಿಸಿದಾಕ್ಷಣ ಮಲೆನಾಡಿನ ಶೈಲಿಯ ಸೊಬಗು ಕಣ್ಮನ ಸೆಳೆಯುವುದು, ಸುಂದರ ಕೆತ್ತನೆಗಳ ಬೃಹತ್ ಗಾತ್ರದ ಕಂಬ ಗಳು ಇಡೀ ಮನೆಯ ಆಧಾರ ಸ್ತಂಭಗಳಾಗಿವೆ,  ವಿಶಾಲವಾದ ಹೊರಾಂಡದಲ್ಲಿ  ’ಕುವೆಂಪು-ಹೇಮಾವತಿ’ ಮದುವೆಯಾದ ಮಂಟಪ, ಲಗ್ನಪತ್ರಿಕೆ   ಇಂದಿಗೂ ನವನವೀನವಾಗಿ ಕಂಗೊಳಿಸುವದು., ಮಧ್ಯೆದಲ್ಲಿ  ತುಳಸಿ ಕಟ್ಟೆ  , ಹಜಾರದಲ್ಲಿ ಪುತ್ರ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸಂಗ್ರಹಿಸಿದ ಕುವೆಂಪು ಅವರ ಚಿಕ್ಕ ವಯಸ್ಸಿನ ಪೋಟೋಗಳು, ಮಕ್ಕಳಾದ ಇಂದುಕಲಾ, ತಾರಿಣಿ, ಕೋಕಿಲೋದಯ ಚೈತ್ರ, ಪೂರ್ಣಚಂದ್ರ ತೇಜಸ್ವಿ,  ಮೊಮ್ಮಕ್ಕಳಾದ ಸುಸ್ಮಿತಾ ಈಶಾನ್ಯೆ, ಸ್ಮಯ, ಪ್ರಾರ್ಥನಾ ನಿಮೋನ್, ಶಾದ್ವಲಾ ಇನ್ನು ಮುಂತಾದ  ಬಂಧುಗಳನ್ನು ಒಳಗೊಂಡ ಕುವೆಂಪು ಅವರ ಬದುಕಿನ  ಅವಿಸ್ಮರಣೀಯ ಘಳಿಗೆಗಳ ಛಾಯಾ ಚಿತ್ರಗಳಿವೆ, ನಡುಮನೆಯ  ಎಡಬಾಗದ ಕೋಣೆಯಲ್ಲಿ ಮಂಚ, ಬಿದಿರಿನ ಹಾಗೂ ಕಬ್ಬಿಣದ ತೊಟ್ಟಿಲ್ಲಿರುವ ಬಾಣಂತಿ ಕೋಣೆ, ಅದಕ್ಕೆ ಹೊಂದಿರುವ ಅಡಿಗೆ ಮತ್ತು ಊಟದ ಕೋಣೆ, ಅಲ್ಲಿ ದಿನನಿತ್ಯ ಬಳಸುತ್ತಿದ್ದ ಪಾತ್ರೆಗಳು, ಹಿಟ್ಟು ನಾದುತ್ತಿದ್ದ ದೊಡ್ಡ ದೊಡ್ಡ ಹರಿವಾಣಗಳು, ಸೌಟ್, ಇಡ್ಲಿ ಪಾತ್ರೆ, ಮಣ್ಣಿನ ಗಡಿಗೆ, ಬಳಪದ ಕಲ್ಲಿನ ಕಾವಲಿ, ತಟ್ಟೆ, ಅಡಿಕೆ ಕತ್ತರಿ, ಈಳಿಗೆಮಣಿ  ಇತ್ಯಾದಿ ವಸ್ತುಗಳೊಂದಿಗೆ  ವ್ಯವಸಾಯದ ಸಲಕರಣೆಗಳು ಕಾಣ ಸಿಗುತ್ತವೆ.  ಮಹಡಿಯ ಮೇಲಿನ ಕೋಣೆಯಲ್ಲಿ ಕುವೆಂಪು ಅವರು ಬಳಸುತ್ತಿದ್ದ ವಸ್ತುಗಳಾದ ಚಪ್ಪಲಿ, ವಾಕಿಂಗ್ ಸ್ಟಿಕ್, ಕನ್ನಡಕ, ಪೆನ್ನು, ಸ್ವೇಟರ್, ಧರಿಸುತ್ತಿದ್ದ ಬಟ್ಟೆ,  ಕೋಟ್, ಕಂಬಳಿ,  ಅವರಿಗೆ ಸಂದಾಯವಾದ ಅತ್ಯುನ್ನತ  ಪ್ರಶಸ್ತಿ ಪದಕ ಪತ್ರಗಳು, ಡಾಕ್ಟರೇಟ್ ಪದವಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ.  ಶ್ರೀರಾಮಾಯಣ ದರ್ಶನಂ’ ಹಸ್ತಾಕ್ಷರದ ಪ್ರತಿಯು  ಪ್ರಮುಖ ಆಕರ್ಷಣೆಗಳಲ್ಲಿ ಒಂದು,  ಪುಸ್ತಕಗಳ ಮೊದಲ ಆವೃತ್ತಿಗಳಲ್ಲಿವೆ. ಇಡೀ ಮನೆಯಲ್ಲಿ ಎಲ್ಲೇ ಹೋದರು ಕುವೆಂಪುರವರ ಕವಿತೆಗಳ ಧ್ವನಿ ಸುರಳಿಗಳ ನೀನಾದ  ಕೇಳುಗನನ್ನು ಹಿಂಬಾ ಲಿಸುವುದು.
’ಕವಿಶೈಲ’
ಕುವೆಂಪುರವರ ಸ್ಪೂರ್ತಿಯ ತಾಣ, ಮಾನವ ನನ್ನು ವಿಶ್ವಮಾನವನ್ನಾಗಿ ಸೃಷ್ಟಿಸಿದ ಕವಿಶೈಲವು ಕುಪ್ಪಳಿಯ ಹೃದಯಭಾಗ, ’ಕವಿಮನೆ’ಯ ದಕ್ಷಿಣ ದಿಕ್ಕಿಗೆ ಹೊಂದಿಕೊಂಡ ಬೆಟ್ಟವೇ ಕವಿಶೈಲ, ಆ ಬಂಡೆಗೆ ಹೀಗೆಂದು ನಾಮಕರಣ ಮಾಡಿ ದವರು ಸ್ವತಃ ಕುವೆಂಪುರವರೆ, ಅಲ್ಲಿಗೆ ಹೋಗಲು ಮನೆಯ ಪಕ್ಕದಲ್ಲಿಯೇ ಕಾಲು ದಾರಿ ಯಿದೆ, ವಾಹನಗಳಲ್ಲಿಯೂ ತಲುಪಬಹುದು. ಬೃಹತ್ ಗಾತ್ರದ ಬಂಡೆ ಅದರ ಸುತ್ತ ಕವಲು ನಿಂತಂತಿರುವ ಗಿಡ ಮರಗಳು, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಎಚ್ಚರಿಕೆಯನ್ನು ಸ್ವತಃ ಕವಿಗಳೆ ನೀಡಿರುವ ಕವಿತೆ ಸಾಲುಗಳಿವು. 
ಮಿತ್ರರಿರ ಮಾತಿಲ್ಲಿ ಮೈಲಿಗೆ ! ಸುಮ್ಮನಿರಿ,
ಮೌನವೇ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ
ಕವಿಶೈಲದ ಮುತ್ತಿಬಹ ಸಂಜೆಗತ್ತಲಲ್ಲಿ 
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಾಗಿರಿ, 
ಕವಿಶೈಲದ ಬಂಡೆಯ ಮೇಲೆ ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್. ವೆಂ ಎಂಬ ಅಕ್ಷರಗಳ ರುಜು ಗಳು ಇಲ್ಲಿವೆ.
ಬಾಲ್ಯದ ಒಡನಾಡಿಯಾಗಿ ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ ಕುವೆಂಪುರವ ಸಮಾಧಿಯಿದೆ ಆ ಪ್ರದೇಶಕ್ಕೆ ಪ್ರವೇಶಿದಾಕ್ಷಣ ನೀರವ ಮೌನ ಆವರಿಸಿ ಧ್ಯಾನದಲ್ಲಿ ಲೀನವಾಗುವ ಅನುಭವ  ನನಗೆ ಮೂಡಿತು.
ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನ ದ ಆವರಣದಲ್ಲಿ ಕಲಾನಿಕೇತನ ವಿದ್ದು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಪ್ರಸಿದ್ಧ ಛಾಯಾಗ್ರಾಹಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ವನ್ಯ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವುಗಳಿಗೆ ಇಂಬು ಕೊಡುವ ಕುವೆಂಪು ಸಾಹಿತ್ಯಾ ಧಾರಿತ ಕವನಗಳ ಸಾಲುಗಳು ಚಿತ್ರಗಳನ್ನು ಇನ್ನೊಷ್ಟು ಅರ್ಥಪೂರ್ಣವಾಗಿಸಿವೆ.
ಕೊಪ್ಪದ ಮಾರ್ಗವಾಗಿ ಸುಮಾರು ಐದು ನಿಮಿಷ ಪಯಣಿಸಿದರೆ  ಹಂಪಿ ಕನ್ನಡ ವಿವಿಯ ಕುವೆಂಪು ಅಧ್ಯಯನ ಕೇಂದ್ರವಿದ್ದು  ಬುಡಕಟ್ಟು, ಆದಿ ವಾಸಿ ಹಾಗೂ ಜನಪದ ಜೀವನ ಶೈಲಿಯನ್ನು ಬಿಂಬಿಸುವ ಚಿಕ್ಕ  ವಸ್ತು ಸಂಗ್ರಹಾಲಯವಿದೆ ಒಟ್ಟಿನಲ್ಲಿ ಸುಂದರ ಪ್ರಕೃತಿ ಮಡಿಲಿನಲಿ, ಕವಿ ಪುಂಗವರ ನಾಡಿನಲೊಂದಿಷ್ಟು ಕಳೆದ ಸಮಯ ಜೀವನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿತು. 
   -ಕೆ.ಎಂ.ರೇಖಾಪ್ರಕಾಶ್
 ಹೊಸಪೇಟೆ.
Please follow and like us:
error

Leave a Reply

error: Content is protected !!