fbpx

ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದವರು ಅಂಬಿಗರ ಚೌಡಯ್ಯ – ಕೆ. ರಾಘವೇಂದ್ರ ಹಿಟ್ನಾಳ್

 ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ.  ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಮಾನತೆಗೆ ಶ್ರಮಿಸಿದವರು ಅಂಬಿಗರ ಚೌಡಯ್ಯ ಅವರು. ಹಸಿದವನಿಗೆ ಅನ್ನವನಿಕ್ಕುವ ಮೂಲಕ ಕೈಲಾಸ ಕಾಣಬೇಕು ಎಂಬ ಶರಣರ ತತ್ವದಂತೆ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು.  ಬಡವರು ಸಂತೃಪ್ತ ಜೀವನ ನಡೆಸುವಂತೆ ಮಾಡಿದೆ. ಗಂಗಾಮತ ಸಮುದಾಯ ಈಗಲೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು.  ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
  ವಿಶೇಷ ಉಪನ್ಯಾಸ ನೀಡಿದ  ಬಾಗಲಕೋಟೆ ಕಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶಾಸ್ತ್ರಿಯವರು, ಅಂಬಿಗರ ಚೌಡಯ್ಯ ಅವರು ಮಾನವ ಕಲ್ಯಾಣದ ಹರಿಕಾರರಾಗಿದ್ದರು.  ೧೨ ನೇ ಶತಮಾನ ಎಂಬುದು, ಇಡೀ ವಿಶ್ವವೇ ಕಂಡ ಅದ್ಭುತ ಶತಮಾನ.  ಮೌಢ್ಯತೆಯಿಂದ ಕಂಗಾಲಾಗಿದ್ದ ಸಮಾಜಕ್ಕೆ ಹೊಸ ಸಂಚಲನ ಮೂಡಿಸಿದ ಬಹುತೇಕ ವಚನಕಾರರು ಇದೇ ಶತಮಾನದಲ್ಲಿ ಬಂದವರು. ಮುಖಸ್ತುತಿ ಹಾಗೂ ಹೊಗಳುವಿಕೆಯನ್ನು ಗದಿಗಿಟ್ಟು ನಿಷ್ಠುರವಾಗಿ ವಾದಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು. ಸಮಾಜದಲ್ಲಿ ಮನೆಮಾಡಿದ್ದ ಮೂಢನಂಬಿಕೆಗಳು, ಕಂದಾಚಾರಗಳನ್ನು ನಿರ್ಮೂಲನೆ ಮಾಡಲು ಅನೇಕ ಮಹನೀಯರು ಜನ್ಮತಳೆದು ಸಮಾಜ ಸುಧಾರಿಸಿದ್ದಾರೆ.  ಗಂಗಾ ಮತ ಜನಾಂಗವು ದ್ವಾಪರ ಯುಗದಲ್ಲಿಯೇ ಅಸ್ತಿತ್ವದಲ್ಲಿತ್ತು.  ದ್ವಾಪರ ಯುಗದಿಂದ ಕಲಿಯುಗಕ್ಕೆ ಈ ಸಮುದಾಯದ ಕೈಂಕರ್ಯ ಮುಂದುವರೆದಿದೆ ಅಷ್ಟೆ.  ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿದಾಗ ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಬಸವಣ್ಣ, ಅಂಬಿಗರ ಚೌಡಯ್ಯನಂತಹ ಅನೇಕ ಮಹನೀಯರು ಅವತರಿಸಿದ್ದಾರೆ.  ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು ಎಂದರು.
  ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಸಮಾರಂಭ ಕುರಿತು ಮಾತನಾಡಿದರು.  ಜಿಲಾಧಿಕಾರಿ ಆರ್.ಆರ್. ಜನ್ನು, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ, ಗಣ್ಯರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಕಪ್ಪತಪ್ಪ ಸೇರಿದಂತೆ ನಗರಸಭೆಯ ವಿವಿಧ ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
  ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.
Please follow and like us:
error

Leave a Reply

error: Content is protected !!