ಮಡೆಸ್ನಾನ, ಸಂವಿಧಾನ ಮತ್ತು ಮತಾಂತರ

– ವೈ.ಮರಿಸ್ವಾಮಿ 
ಮಾನವ ಕುಲಕ್ಕೆ ಕಳಂಕಪ್ರಾಯವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ನಿಷೇಧಿಸುವಂತೆ ಕಳೆದ ವರ್ಷ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ತೀವ್ರ ರೀತಿಯ ಒತ್ತಾಯ ಕೇಳಿ ಬಂದಿತ್ತು. ಈ ಬಾರಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಶಿವರಾಮ್‌ರವರ ನೇತೃತ್ವದಲ್ಲಿ, ಯಾವುದೇ ಕಾರಣಕ್ಕೂ ಸರಕಾರ ಮಡೆಸ್ನಾನ ಪದ್ಧತಿಗೆ ಅವಕಾಶ ನೀಡಬಾರದೆಂದು ಆರಂಭದಲ್ಲೇ ಪ್ರತಿಭಟನಾತ್ಮಕ ಎಚ್ಚರಿಕೆಯನ್ನು ಕೊಡಲಾಗಿತ್ತು.ಈ ಆಗ್ರಹಕ್ಕೆ ಪೂರಕವಾಗಿ ಸ್ಥಳೀಯ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಚನ್ನಪ್ಪಗೌಡರು ಮಡೆಸ್ನಾನ ನಿಷೇಧಿಸಿ ಆಜ್ಞೆ ಹೊರಡಿಸಿದ್ದರು.ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮದಿಂದ ಕಂಗಾಲಾದ ದೇವಸ್ಥಾನದ ಆಡಳಿತ ಮಂಡಳಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ರಾಜ್ಯ ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯರ ಮೂಲಕ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ, ನಿಷೇಧವನ್ನು ಹಿಂಪಡೆಯುವಂತೆ ಮಾಡಿದರು.ಇದರಿಂದ 3 ದಿನಗಳ ಕಾಲ ಬ್ರಾಹ್ಮಣರು ತಿಂದುಂಡು ಉಳಿಸಿದ ಬಾಳೆ ಎಲೆ ಎಂಜಲಿನ ಮೇಲೆ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಸಹಸ್ರಾರು ಜನ ಉರುಳು ಸೇವೆ ಮಾಡಿದರು. ಅದರಲ್ಲೂ ಎಳೆ ಮಕ್ಕಳನ್ನು ಬಲವಂತದಿಂದ ತಾಯಂದಿರು ಅವರ ಇಷ್ಟಕ್ಕೆ ವಿರುದ್ಧವಾಗಿ ಕೈ ಕಾಲು ಕಟ್ಟಿ ಪಶುಗಳಂತೆ ಉರುಳಿಸಲು ಪ್ರಯತ್ನಿಸುತ್ತಿದ್ದ ಘಟನೆಗಳು ಹೃದಯ ವಿದ್ರಾವಕವಾಗಿದ್ದವು.
ಮೂಲತಃ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನವಾಗಿದ್ದು, ಮುಜರಾಯಿ ಸಚಿವರಾದ ಆಚಾರ್ಯರು ಮಡೆಸ್ನಾನವನ್ನು ಸ್ಥಳೀಯರ ಭಾವನೆ, ಧಾರ್ಮಿಕ ನಂಬಿಕೆ ಮತ್ತು ಪರಂಪರೆಯ ಹೆಸರಿನಲ್ಲಿ ಸಮರ್ಥಿಸಿಕೊಂಡಿರುವುದು ಹಾಗೂ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮ್‌ರವರ ಮೇಲೆ ದೇವಾಲಯದ ಗೂಂಡಾ ಸಿಬ್ಬಂದಿ ಹಲ್ಲೆ ಮಾಡಿರುವುದು, ಮಡೆಸ್ನಾನ ಪದ್ಧತಿ ಸರಕಾರಿ ಪ್ರಾಯೋಜಿತ ಜಾತಿ ಪದ್ಧತಿಯ ಆಚರಣೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಸ್ವತಃ ‘ಡಾಕ್ಟರ್’ ಎನ್ನುವ ಬಿರುದಾಂಕಿತರಾಗಿರುವ ಡಾ.ವಿ.ಎಸ್. ಆಚಾರ್ಯರವರು, ಮಡೆಸ್ನಾನಕ್ಕೆ ಚರ್ಮರೋಗ, ಇತ್ಯಾದಿ ಅಗೋಚರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದಿರುವುದು, ಇವರ ‘ಡಾಕ್ಟರಿಕೆ’ಯ ಕುರಿತು ಅನುಮಾನ ಹುಟ್ಟಿಸುತ್ತದೆ. ವಾದಿರಾಜರ ‘ಸ್ಕಂದ’ ಪುರಾಣದಲ್ಲಿಯೇ (15ನೆ ಶತಮಾನ) ಮಡೆಸ್ನಾನದ ಬಗ್ಗೆ ಉಲ್ಲೇಖವಿದೆ ಎಂಬ ಅವರ ವಾದವನ್ನು ಗಮನಿಸಿದಾಗ, ಸಮಾನತೆಯ ತಳಹದಿಯನ್ನೇ ಉಸಿರಾಗಿಸಿಕೊಂಡಿರುವ ಸಂವಿಧಾನ ದಡಿಯಲ್ಲಿ ಇವರು ಸಚಿವರಾಗಿ ಕಾರ್ಯ ನಿರ್ವಹಿಸುವುದಕ್ಕಿಂತಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಚಾರ್ಯ ಹುದ್ದೆಗೆ ಸೂಕ್ತ ವ್ಯಕ್ತಿ ಎಂದೆನಿಸುತ್ತದೆ!
ವಿಧಾನ ಪರಿಷತ್‌ನ ಬಿಜೆಪಿಯ ಸಭಾ ನಾಯಕರಾಗಿರುವ ಆಚಾರ್ಯರು,ಶತಮಾನಗಳಿಂದಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು,ಇದನ್ನು ಬಲತ್ಕಾರದಿಂದ ನಿಷೇಧಿಸಲು ಸಾಧ್ಯವಿಲ್ಲ.ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ,ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಸ್ಥಳೀಯ ಪ್ರಮುಖರ ಜೊತೆ ಚರ್ಚಿಸಿ,ನಂತರ ಈ ಪದ್ಧತಿಯನ್ನು ಅನುಸರಿಸುತ್ತಿರುವ ಜನರ ಮನವೊಲಿಸಲು ಸರಕಾರ ಪ್ರಯತ್ನ ನಡೆಸಲಿದೆ ಎಂದು ಹೇಳುತ್ತಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸಿದಾಗ ಬಹಳ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ, ರಾಜ್ಯ ಬಿಜೆಪಿ ಸರಕಾರ ಹಾಗೂ ಸಂಘ ಪರಿವಾರಕ್ಕೆ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವ ಇಚ್ಛಾಶಕ್ತಿ ಇಲ್ಲ.
ಭಾರತದ ಸಂವಿಧಾನ ಮತ್ತು ಈ ನೆಲದ ಕಾನೂನಿಗಿಂತ ಈ ಪ್ರತಿಗಾಮಿ ಶಕ್ತಿಗಳಿಗೆ ವಿಶ್ವೇಶ ತೀರ್ಥರಂತಹ ವೈದಿಕ ವೌಲ್ಯಗಳ ಪ್ರತಿಪಾದಕರೇ ಪರಮೋಚ್ಚರು. ನಂಬಿಕೆ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಮಲೆಕುಡಿಯ ಜನಾಂಗದಂತಹ ತಳಸಮುದಾಯಗಳನ್ನು ಹಿಂದುತ್ವದ ಗುಲಾಮಗಿರಿಯ ಕತ್ತಲೆ ಕೂಪದಲ್ಲಿ ಅದುಮಿಡುವ ಪ್ರಯತ್ನ ಈ ಮನುವಾದಿಗಳಿಂದ ನಡೆಯುತ್ತಿದೆ.
ಅಸ್ಪಶತೆಯ ಆಚರಣೆ, ಸತಿಸಹಗಮನ ಪದ್ಧತಿ, ಜೀತದಾಳು ಪದ್ಧತಿ, ದೇವದಾಸಿ ಪದ್ಧತಿ ಹಾಗೂ ಇತ್ತೀಚೆಗೆ ನಿಷೇಧಿಸಲ್ಪಟ್ಟ ಅಜಲು ಪದ್ಧತಿ ಕೂಡ ನಂಬಿಕೆ,ಸಂಪ್ರದಾಯದ ಭಾಗವೇ ಆಗಿದ್ದಂಥವುಗಳು. ಇಂದು ಮಡೆಸ್ನಾನ ಪದ್ಧತಿಯನ್ನು ಸಮರ್ಥಿಸುವ ಪ್ರತಿಗಾಮಿಗಳಿರುವಂತೆ, ಅಂದು ಕೂಡ ಆ ಎಲ್ಲಾ ಅಮಾನವೀಯ ಪದ್ಧತಿಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಶೋಷಕ ಧ್ವನಿಗಳಿದ್ದವು. ಅಂದಿನ ಸರಕಾರಗಳ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಕಾಲ ಕಾಲಕ್ಕೆ ಸೂಕ್ತ ಕಾನೂನುಗಳನ್ನು ತರುವುದರ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಕೈಂಕರ್ಯ ನಡೆದುಕೊಂಡು ಬಂದಿದೆ.
ಮಡೆಸ್ನಾನ ಪದ್ಧತಿಯನ್ನು ಅನುಸರಿಸುತ್ತಿರುವವರಲ್ಲಿ ಬಹುಸಂಖ್ಯಾತರು ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು ಎನ್ನುವುದರ ಆಧಾರದ ಮೇಲೆ, ಈ ಅವೈಜ್ಞಾನಿಕ ಪದ್ಧತಿಯನ್ನು ಘೋಷಣೆ ಮಾಡಿ ಕೊಂಡು ಬರುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಯ ವಿರುದ್ಧ, ಅದನ್ನು ಸಮರ್ಥಿಸುವ ಸಚಿವರು ಹಾಗೂ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ಸಂವಿಧಾನದ ಪರಿಚ್ಛೇದ17-ಅಸ್ಪಶತೆಯ ಆಚರಣೆಯನ್ನು ನಿಷೇಧಿಸಿದ್ದು, ಜಾತಿಯ ಆಧಾರದ ಮೇಲೆ ಅರ್ಚಕ ಹುದ್ದೆಯಿಂದ ಹಿಡಿದು ಪೌರ ಕಾರ್ಮಿಕ ಹುದ್ದೆಯ ತನಕ ಯಾವುದನ್ನು ತಾರತಮ್ಯದ ಆಧಾರದ ಮೇಲೆ ನಿಗದಿ ಮಾಡುವುದು ಕೂಡ ಸಂವಿಧಾನದ ಪರಿಚ್ಛೇದ 17ರ ಉಲ್ಲಂಘನೆಯಾಗಿದೆ.
ಧರ್ಮ,ವರ್ಣ,ಜಾತಿ,ಅಥವಾ ಜನ್ಮಸ್ಥಳದ ಆಧಾರದ ಮೇಲಿನ ತಾರತಮ್ಯ ನಿಷೇಧಿಸಿರುವ ಪರಿಚ್ಛೇದ 15ರ ಉಲ್ಲಂಘನೆಯೂ ಆಗಿದೆ.ಈ ಸರಕಾರಿ ಪ್ರಾಯೋಜಿತ ಅಸ್ಪಶತೆಯ ಆಚರಣೆ ವಿರುದ್ಧ ಕೆಲವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸದರು, ಶಾಸಕರು, ಸಚಿವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೇಂದ್ರ ಮತ್ತು ರಾಜ್ಯ ಆಯೋಗಗಳ ಅಧ್ಯಕ್ಷರು ಮುಗುಮ್ಮಾಗಿರುವುದು, ಅವರ ಅವಕಾಶವಾದಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕನ್ನಡದ ಅನೇಕ ಹೆಸರಾಂತ ಸಾಹಿತಿಗಳು, ಜ್ಞಾನಪೀಠ ಪುರಷ್ಕೃತರು, ಭ್ರಷ್ಟಾಚಾರದ ವಿರುದ್ಧ ಏಕಪಕ್ಷೀಯವಾಗಿ ಆಂದೋಲನಕ್ಕಿಳಿ ಯುವವರು ಇಂದಿಗೂ ತಮ್ಮ ವೌನ ಸಮ್ಮತಿಯ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ!
ಪ್ರಸ್ತುತ ಸನ್ನಿವೇಶದಲ್ಲಿ ಮಡೆಸ್ನಾನ ನಿಷೇಧಕ್ಕಾಗಿ ಹೋರಾಟ ಮಾಡುವುದರ ಜೊತೆಗೆ ಶ್ರೇಣೀಕೃತ ಜಾತಿಪದ್ಧತಿ, ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಸಂಪೂರ್ಣವಾಗಿ ವಿಮುಖರಾಗಲು ಹಿಂದೂ ಧರ್ಮವನ್ನು ಧಿಕ್ಕರಿಸುವ ತಾರ್ಕಿಕ ಮತ್ತು ಸೈದ್ಧಾಂತಿಕ ಚಳುವಳಿ ನಡೆಯಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಕೋನದಲ್ಲಿ ಮತಾಂತರವೊಂದೇ ಸ್ವಾತಂತ್ರದ ಸೂಕ್ತ ಮಾರ್ಗ. ಧಾರ್ಮಿಕ ಬದಲಾವಣೆಯು (ಮತಾಂತರವು) ಒಂದು ಹೊಸ ಅಸ್ತಿತ್ವವನ್ನು (ಐಡೆಂಟಿಟಿ) ಕೊಡುವುದರ ಮುಖಾಂತರ ಅಂತಿಮವಾಗಿ ಸಮಾನತೆಯೆಡೆಗೇ ಮುನ್ನಡೆಸುತ್ತದೆ. ಮತಾಂತರ ಪಲಾಯನದ ಮಾರ್ಗವಲ್ಲ, ಹೇಡಿತನದ ಮಾರ್ಗವೂ ಅಲ್ಲ, ಅದು ವಿಮೋಚನಾ ಮಾರ್ಗ, ಜ್ಞಾನದ ಮಾರ್ಗ.    – ವಾರ್ತಾಭಾರತಿ ಅಂಕಣ
Please follow and like us:
error