ಬಾಲ್ಯ ವಿವಾಹ ಪ್ರಕರಣ : ದೂರು ದಾಖಲು

 ಗಂಗಾವತಿ ತಾಲೂಕು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಬರಗೂರು ಎಂಬಲ್ಲಿ ಬಾಲ್ಯ ವಿವಾಹ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ವರ, ವರನ ತಂದೆ ಮತ್ತು ವಧುವಿನ ತಂದೆ ಹಾಗೂ ವಿವಾಹ ಜರುಗಿಸಿದ ಪೂಜಾರಿಯ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
  ಕಳೆದ ಆ. ೧೨ ರಂದು ಗಂಗಾವತಿ ತಾಲ್ಲೂಕಿನ ಸಿದ್ಧಾಪುರ ಗ್ರಾಮ ಪಂಚಾಯಿತಿಯ ಬರಗೂರು ಎಂಬಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಮಾಡಿದ ಕರೆಯನ್ವಯ ಆ. ೧೦ ರಂದು ಮಕ್ಕಳ ರಕ್ಷಣಾ ಯೋಜನೆಯ ಗಂಗಾವತಿ ತಾಲ್ಲೂಕಿನ ಸಂಯೋಜಕರು, ಸಮುದಾಯ ಸಂಘಟಕರು ಹಾಗೂ ಕಾರಟಗಿ ಠಾಣೆಯ ಸಿಬ್ಬಂದಿಗಳು ಬರಗೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ ಬರಗೂರು ಗ್ರಾಮದ ಈಶ್ವರ ಹಾಗೂ ನಂದಿ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಅಂಗವಾಗಿ ಆ. ೧೨ ರಂದು ಆಯೋಜಿಸಲಾಗಿದ್ದ ಸಾಮೂಹಿಕ ಮದುವೆಯಲ್ಲಿ ಯಾವುದೇ ಬಾಲ್ಯವಿವಾಹ ನಡೆಸದಂತೆ ಮತ್ತು ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಲ್ಲಿನ ಸಮಿತಿಯ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಮನವರಿಕೆ ಮಾಡಿಕೊಡಲಾಗಿತ್ತು.  ಆದಾಗ್ಯೂ ಆ. ೧೨ ರಂದು ಬರಗೂರಿನಲ್ಲಿ ನಡೆದ ವಿವಾಹದಲ್ಲಿ ರಾಮಪ್ಪ ತಂ. ವಿರೂಪಣ್ಣ ಸಾ|| ಬರಗೂರು ತಾ|| ಗಂಗಾವತಿ ಇವರ ವಿವಾಹವು ಅಪ್ರಾಪ್ತ ವಯಸ್ಸಿನ ಕು. ಉಮಾದೇವಿ ತಂ. ಅಮರಪ್ಪ ತಾಯಿ ಮಲ್ಲಮ್ಮ ಕುರುಬರ ಎಂಬುವವರೊಂದಿಗೆ ನಡೆದಿದೆ. ಶಾಲಾ ದೃಢೀಕರಣದನ್ವಯ ಕು. ಉಮಾದೇವಿಯ ಜನ್ಮ ದಿನಾಂಕವು ೧೦.೦೫.೧೯೯೭ ಆಗಿದ್ದು ಆಕೆಗೆ ಪ್ರಸ್ತುತ ೧೬ ವರ್ಷ ೩ ತಿಂಗಳು ಆಗುತ್ತದೆ.  ಆದ್ದರಿಂದ ಅಪ್ರಾಪ್ತ ವಯಸ್ಸಿನ ಕು. ಉಮಾದೇವಿಯ ಬಾಲ್ಯ ವಿವಾಹವನ್ನು ನಡೆಸಿದ ಆಕೆಯ ತಂದೆ ಅಮರಪ್ಪ ತಂ. ಹನುಮಂತಪ್ಪ ಸಾ|| ಉದ್ಬಾಳ ಜೆ. ತಾ|| ಸಿಂಧನೂರು ಜಿ|| ರಾಯಚೂರು, ಕು. ಉಮಾದೇವಿಯನ್ನು ವಿವಾಹವಾದ ಆಕೆಯ ಪತಿ ರಾಮಪ್ಪ ತಂ. ವಿರೂಪಣ್ಣ ಸಾ|| ಬರಗೂರು, ರಾಮಪ್ಪನ ತಂದೆ ವಿರೂಪಣ್ಣ ಸಾ|| ಬರಗೂರು ತಾ|| ಗಂಗಾವತಿ ಹಾಗೂ ಈ ಬಾಲ್ಯವಿವಾಹ ನೆರವೇರಿಸಿದ ಪೂಜಾರಿ ಇವರುಗಳ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ. ೧೨೫/೨೦೧೩ ದಿನಾಂಕ: ೧೩.೦೮.೨೦೧೩ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ   ತಿಳಿಸಿದ್ದಾರೆ.  

Leave a Reply