ಸೆ. ೨೮ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

ಕೊಪ್ಪಳ ಸೆ.  ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ ಸೆ. ೨೮ ರಿಂದ ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ ೬ ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
  ಶ್ರೀ ಹುಲಿಗೆಮ್ಮ ದೇವಿಯ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ ಸೆ. ೨೮ ರಂದು ಸಾಯಂಕಾಲ ೬.೩೦ ಗಂಟೆಗೆ ಹುಲಿಗಿಯಲ್ಲಿ ನಡೆಯಲಿದೆ.  ಗದಗ-ಬಿಜಾಪುರ-ಬಾಗಲಕೋಟೆಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಹಿಸುವರಲ್ಲದೆ, ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ದಸರಾ ಮಹೋತ್ಸವದ ಅಂಗವಾಗಿ ಸೆಪ್ಟಂಬರ್ ೨೮ ರಿಂದ ಅಕ್ಟೋಬರ್ ೬ ರವರೆಗೆ ಸಂಜೆ ೬-೩೦ ಗಂಟೆಗೆ ಹಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ಸೆ. ೨೮ ರಂದು ಸಂಜೆ ೬-೩೦ ಗಂಟೆಗೆ ಹಾವೇರಿ ಜಿಲ್ಲೆ ಬಸವರಾಜ ಹೆಡಿಗೊಂಡ ಅವರಿಂದ ಶಹನಾಯಿ ವಾದನ, ಸೆ. ೨೯ ರಂದು ಬೆಂಗಳೂರಿನ ವಿಜಯ ಹಾವನೂರು ಅವರಿಂದ ಭಕ್ತಿ ಸಂಗೀತ, ಸೆ. ೩೦ ರಂದು ಗುಲಬರ್ಗಾ ಜಿಲ್ಲೆಯ ಗಿರಿಜಾ ಕರ್ಪೂರ ಅವರಿಂದ ಭಾವಗೀತೆ ಗಾಯನ, ಅಕ್ಟೋಬರ್ ೦೧ ರಂದು ತುಮಕೂರು ಜಿಲ್ಲೆಯ ಹುಲಿಕಲ್ ನಾಗರಾಜ ಅವರಿಂದ ಕಥಾ ಕೀರ್ತನ, ಅ. ೨ ರಂದು ದಾರವಾಡ ಜಿಲ್ಲೆಯ ಸೀತಾ ಛಪ್ಪರ್ ಮತ್ತು ತಂಡದಿಂದ ನೃತ್ಯ ರೂಪಕ, ಅ. ೦೩ ರಂದು ಹುಲಿಗಿಯ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆ ಮಕ್ಕಳಿಂದ ಮತ್ತು ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಅ. ೦೪ ರಂದು ಬೆಂಗಳೂರಿನ ಸ್ವರ್ಣಲತಾ ಮತ್ತು ತಂಡದಿಂದ ಸುಗಮ ಸಂಗೀತ, ಅ. ೦೫ ರಂದು ಬೆಂಗಳೂರಿನ ಸಿದ್ದಯ್ಯ ಮತ್ತು ಸಂಗಡಿಗರಿಂದ ಜಾನಪದ ಗೀತೆಗಳು ಕಾರ್ಯಕ್ರಮ ಜರುಗಲಿವೆ.  ಅಕ್ಟೋಬರ್ ೦೬ ರಂದು ಗುರುವಾರ ವಿಜಯದಶಮಿ ನಿಮಿತ್ಯ ಮಧ್ಯಾಹ್ನ ೩ ರಿಂದ ಹುಲಿಗೆಮ್ಮ ದೇವಿಯ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ, ಶಮಿ ಪೂಜೆ ತೊಟ್ಟಿಲು ಸೇವೆ, ಮಹಾ ಮಂಗಳಾರತಿ ಮಂತ್ರ ಪುಷ್ಟದೊಂದಿಗೆ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.  ದಸರಾ ಮಹೋತ್ಸವದ ಅಂಗವಾಗಿ ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮ ದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾ ನೈವೇದ್ಯಗಳು ಜರುಗಲಿವೆ.  ಅಲ್ಲದೆ ಪ್ರತಿ ದಿನ ರಾತ್ರಿ ಹೊಸಪೇಟೆಯ ನಾಗಭೂಷಣಂ ಅವರು ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಮಾಡುವರು.  

Leave a Reply