You are here
Home > Koppal News > ಕೊಪ್ಪಳ ನಗರದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ- ಡಾ. ಸುರೇಶ್ ಇಟ್ನಾಳ್

ಕೊಪ್ಪಳ ನಗರದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ- ಡಾ. ಸುರೇಶ್ ಇಟ್ನಾಳ್

  ಕೊಪ್ಪಳ ನಗರದಲ್ಲಿ ನಗರ ಸಾರಿಗೆ ಪ್ರಾರಂಭವಾಗಿ, ಜನಮನ್ನಣೆಗೆ ಪಾತ್ರವಾಗಿದ್ದು, ನಗರಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಭಿಪ್ರಾಯಪಟ್ಟರು.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಣಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೊಪ್ಪಳ ನಗರ ವ್ಯಾಪಕವಾಗಿ ವಿಸ್ತಾರವಾಗುತ್ತಿದ್ದು, ಇದೀಗ, ಕೊಪ್ಪಳದಲ್ಲಿ ನಗರಸಾರಿಗೆಯನ್ನೂ ಸಹ ಪ್ರಾರಂಭಿಸಲಾಗಿದೆ.  ನಗರ ಸಾರಿಗೆ ಸೌಲಭ್ಯ ಜನಮನ್ನಣೆಯನ್ನು ಗಳಿಸಿದ್ದು, ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರು ನಗರದ ಒಂದು ಸ್ಥಳದಿಂದ ಇನ್ನೊಂದೆಡೆ ಪ್ರಯಾಣಿಸಬಹುದಾಗಿದೆ.  ನಗರಸಾರಿಗೆ ಪ್ರಯಾಣ ಮಾಡಬಯಸುವವರಿಗೆ ಬೇಸಿಗೆಯ ಬಿಸಿಲು ಮತ್ತು ಮಳೆಗಾಲದಲ್ಲಿ ಮಳೆಯಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಲು, ನಗರದ ಪ್ರಮುಖ ಸ್ಥಳಗಳಲ್ಲಿ ಆಕರ್ಷಕ ಬಸ್ ಮಿನಿ ತಂಗುದಾಣ ನಿರ್ಮಿಸುವುದು ಅಗತ್ಯವಾಗಿದೆ.  ಬಸ್ ತಂಗುದಾಣ ನಿರ್ಮಾಣಕ್ಕೆ ಆಸಕ್ತ ಕೈಗಾರಿಕೆ, ಉದ್ಯಮ, ವಿಮಾ ಕಂಪನಿ, ಮೊಬೈಲ್ ಕಂಪನಿಗಳನ್ನು ಆಹ್ವಾನಿಸಿ, ಅಗತ್ಯವಿದ್ದಲ್ಲಿ, ಅಂತಹ ಕಂಪನಿಗಳು ಬಸ್ ತಂಗುದಾಣದಲ್ಲಿ ತಮ್ಮ ಕಂಪನಿಯ ಪ್ರಚಾರ ಮಾಹಿತಿಯನ್ನು ಅಳವಡಿಸಿಕೊಳ್ಳಬಹುದಾಗಿದ್ದು, ಕಂಪನಿಗಳ ಪ್ರಚಾರ ಕಾರ್ಯಕ್ಕೆ ಉತ್ತಮ ಅವಕಾಶವಾಗಲಿದೆ.  ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆಸಕ್ತ ಕಂಪನಿಗಳನ್ನು ಸಂಪರ್ಕಿಸಿ ಚರ್ಚೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
ಗಂಗಾವತಿಯಲ್ಲೂ ಸಿಗ್ನಲ್ ಅಳವಡಿಸಿ : ಜಿಲ್ಲೆಯಲ್ಲಿ ಕೊಪ್ಪಳ ನಗರದಲ್ಲಿನ ವಾಹನ ಸಂಚಾರ ದಟ್ಟಣೆಯನ್ನು ಪರಿಗಣಿಸಿ ಅಶೋಕ ವೃತ್ತ ಮತ್ತು ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.  ಇದೇ ಮಾದರಿಯಲ್ಲಿ ಗಂಗಾವತಿ ನಗರದಲ್ಲಿಯೂ ಕೆಲ ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆಯಿಂದ ತೊಂದರೆ ಇದ್ದು, ಇಂತಹ ಸ್ಥಳಗಳನ್ನು ಗುರುತಿಸಿ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುರಕ್ಷಿತ ಪ್ರಯಾಣಕ್ಕೆ ಕ್ರಮ : ಕೊಪ್ಪಳ ಜಿಲ್ಲೆಯ ವಿವಿಧೆಡೆ ವಾಹನ ಚಾಲನಾ ಪರವಾನಗಿ ಹೊಂದದೇ ಇರುವ ಚಾಲಕರು ಟಂಟಂ, ಟಾಟಾ ಏಸ್ ಮುಂತಾದ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಸಂಚರಿಸುತ್ತಿರುವುದು ಕಂಡುಬಂದಿದೆ.  ಇದರಿಂದಾಗಿ ಅನೇಕ ಅಪಘಾತ ಸಂಭವಿಸಿ, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.  ಈ ಕುರಿತಂತೆ ಸಾರಿಗೆ ಇಲಾಖೆಯವರು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.  ಇನ್ನಾದರೂ, ಸಾರಿಗೆ ಇಲಾಖೆಯು ಮೋಟಾರು ವಾಹನ ನಿರೀಕ್ಷಕರಿಂದ ಸೂಕ್ತ ತಪಾಸಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.   ಪ್ರತಿ ತಾಲೂಕಿನಲ್ಲಿ ತಿಂಗಳಿಗೆ ಕನಿಷ್ಟ ಇಂತಹ ೧೦ ಪ್ರಕರಣಗಳನ್ನಾದರೂ ಪತ್ತೆ ಹಚ್ಚುವ ಗುರಿಯನ್ನು ನಿಗದಿಪಡಿಸಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಜಿ. ಪಾರ್ಥಸಾರಥಿ ಅವರು ಮಾತನಾಡಿ, ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ ಅಭಿವೃದ್ಧಿಗೆ ಈಗಾಗಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಈಗಾಗಲೆ ಟೆಂಡರ್ ಕರೆಯಲಾಗಿದೆ.  ಅಲ್ಲದೆ ಬಸ್ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಿ, ಅಭಿವೃದ್ಧಿಪಡಿಸಲು ಸಹ ಕ್ರಮ ಜರುಗಿಸಲಾಗಿದೆ ಎಂದರು.
  ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ, ಸಮಿತಿಯ ಸದಸ್ಯರುಗಳಾದ ಡಿವೈಎಸ್‌ಪಿ ರಾಜೀವ್, ನಗರಸಭೆ ಪೌರಾಯುಕ್ತ ರುದ್ರಮುನಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಸೇರಿದಂತೆ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Top