fbpx

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಿ- ದ್ರಾಕ್ಷಾಯಿಣಿ ಬಸವರಾಜ್

ಪ್ರತಿಯೊಂದು ಮಕ್ಕಳಲ್ಲೂ ಒಂದಿಲ್ಲ ಒಂದು ಪ್ರತಿಭೆ ಅಡಗಿದ್ದು, ಸೂಕ್ತ ಸಮಯದಲ್ಲಿ ಅದನ್ನು ಗುರುತಿಸಿ, ಪ್ರತಿಭೆ ಅನಾವರಣಕ್ಕೆ ಸಮರ್ಪಕ ವೇದಿಕೆ ಕಲ್ಪಿಸಿಕೊಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದ್ರಾಕ್ಷಾಯಿಣಿ ಬಸವರಾಜ್ ಅವರು ಕರೆನೀಡಿದರು.

  ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯಭವನದಲ್ಲಿ ಶನಿವಾರ ಏರ್ಪಡಿಸಲಾದ ಜಿಲ್ಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪ್ರತಿಯೊಂದು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ.  ಅದು ಕಲೆ, ಸಾಹಿತ್ಯ ಅಥವಾ ಸಂಸ್ಕೃತಿಯಂತಹ ವಿವಿಧ ಪ್ರಕಾರದಲ್ಲಿ ಇರುವ ಸಾಧ್ಯತೆಗಳಿದ್ದು, ಇಂತಹ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ದೊರೆಯುವಂತೆ ಮಾಡುವ ಹೊಣೆಗಾರಿಕೆ ಕೇವಲ ಮಕ್ಕಳ ಪಾಲಕರಿಗಷ್ಟೇ ಅಲ್ಲ ಶಿಕ್ಷಕರು, ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮೇಲಿದೆ.  ಪ್ರತಿಭೆಗಳನ್ನು ಗ್ರಾಮೀಣ  ಮಟ್ಟದಿಂದ ತಾಲೂಕು, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಕರೆತರುವ ಕಾರ್ಯದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಹತ್ವದ ಪಾತ್ರ ವಹಿಸಲಿದೆ.  ಗ್ರಾಮೀಣ ಮಕ್ಕಳಲ್ಲಿನ ಕಲೆ ಗುರುತಿಸುವುದು ಹಾಗೂ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಅಕಾಡೆಮಿ ಹಮ್ಮಿಕೊಂಡಿದೆ.  ಜೊತೆಗೆ ಮಕ್ಕಳಲ್ಲಿ ಉನ್ನತ ಪರೀಕ್ಷೆಗಳ ಬಗ್ಗೆ ಹೊಂದಿರುವ ಭಯವನ್ನು ಹೋಗಲಾಡಿಸಿ, ಸುಗಮವಾಗಿ ಪರೀಕ್ಷೆಯನ್ನು ಎದುರಿಸಲು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.  ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ಎರಡು ಸಾವಿರ ರೂ.ಗಳ ಅನುದಾನ ನೀಡಲು ಕ್ರಮ ಕೈಗೊಂಡಿದೆ ಅಲ್ಲದೆ ಪ್ರತಿ ಜಿಲ್ಲೆಯಲ್ಲೂ ಅಕಾಡೆಮಿಗೆ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಗೆ ಅಕಾಡೆಮಿ ಚಾಲನೆ ನೀಡಿದೆ. ಮಕ್ಕಳಿಗೆ ಕೇವಲ ವಿದ್ಯೆ ಕಲಿಸಿದರಷ್ಟೇ ಸಾಲದು, ಉತ್ತಮ ನಡೆ, ನುಡಿ ಜೊತೆಗೆ ಒಳ್ಳೆಯ ಸಂಸ್ಕಾರ ಕಲಿಸುವತ್ತ ಪಾಲಕರು, ಶಿಕ್ಷಕರು ಗಮನ ಹರಿಸಬೇಕು.  ಮಕ್ಕಳ ಉತ್ತಮ ಕಲೆಗೆ ಪ್ರೋತ್ಸಾಹ ಹಾಗೂ ಪ್ರಶಂಸೆಗಳು ಟಾನಿಕ್ ಇದ್ದಹಾಗೆ, ಆದರೆ ಇತರೆ ಮಕ್ಕಳೊಂದಿಗೆ ಹೋಲಿಸಿ, ಅವರನ್ನು ನಿಂದಿಸುವಂತಹ ಕಾರ್ಯ ಆಗಬಾರದು ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದ್ರಾಕ್ಷಾಯಿಣಿ ಬಸವರಾಜ್ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಈ ಸಂದರ್ಭದಲ್ಲಿ ಮಾತನಾಡಿ, ಇಂದಿನ ಮಕ್ಕಳೆ ಭವ್ಯ ಭಾರತದ ಸಂಪತ್ತು.  ಮಕ್ಕಳಲ್ಲಿ ಒಳ್ಳೆಯ ಪ್ರತಿಭೆ ಇರುತ್ತದೆ.  ಆದರೆ ಇದಕ್ಕೆ ಪೂರಕವಾಗುವಂತಹ ಪರಿಸರ ನಿರ್ಮಾಣವಾಗಬೇಕು.  ವಿವೇಕಾನಂದರು, ಸುಭಾಶ್ಚಂದ್ರಭೋಸ್, ಅಬ್ದುಲ್ ಕಲಾಂ ನಂತಹ ಮಹನೀಯರಾಗುವ ಪ್ರತಿಭೆಗಳು ಅನೇಕ ಮಕ್ಕಳಲ್ಲಿವೆ, ಆದರೆ, ಸಕಾಲದಲ್ಲಿ, ಸೂಕ್ತ ರೀತಯಲ್ಲಿ ನಮ್ಮ ಸಮಾಜ ಗುರುತಿಸುವಲ್ಲಿ ವಿಫಲವಾಗುತ್ತಿದೆಯೇನೋ ಎನಿಸುತ್ತದೆ.  ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ವಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಹೊರೆಯಾಗದಂತೆ, ಎಚ್ಚರಿಕೆಯಿಂದ, ಅವರ ಮನಸ್ಸು ಹಾಗೂ ಕಲೆ ಅರಳುವಂತೆ ನೋಡಿಕೊಳ್ಳುವ ಹೊಣೆ ಸಮಾಜ, ಶಿಕ್ಷಕವೃಂದ ಹಾಗೂ ಪಾಲಕರ ಮೇಲಿದೆ ಎಂದರು.
  ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಸಾವಿತ್ರಿ ಮುಜುಂದಾರ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯೆ ಅರುಣಾ, ಗಣ್ಯರಾದ ಶಿವಾನಂದ ಹೊದ್ಲೂರ, ಗವಿಸಿದ್ದಪ್ಪ, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸ್ವಾಗತಿಸಿದರು, ಮುನಿರಾಜು ಅವರು ವಂದಿಸಿದರು.  ಜಿಲ್ಲಾ ಮಕ್ಕಳ ಹಬ್ಬ ಅಂಗವಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಹೊರತಟ್ನಾಳ ಗ್ರಾಮದ ಶಾಲಾ ಮಕ್ಕಳಿಂದ ಡೊಳ್ಳು ಕುಣಿತ, ತೇಜಸ್ವಿನಿ ಅಳವಂಡಿ ಅವರಿಂದ ಭರತನಾಟ್ಯ, ಮೈನಳ್ಳಿ ಗ್ರಾಮದ ಮಕ್ಕಳಿಂದ ಜಾನಪದ ನೃತ್ಯ ಹಾಗೂ ಜಂಪ್‌ರೋಪ್ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.
Please follow and like us:
error

Leave a Reply

error: Content is protected !!