ದಮನಿತ ವರ್ಗಗಳಿಗೆ ಮಠಾಧೀಶರು ಬೇಕೆ?

ಸನತ್ ಕುಮಾರ್ ಬೆಳಗಲಿ- 
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಎಂದು ಸ್ಥಾವರವನ್ನು ನಿರಾಕರಿಸಿದ ಬಸವಣ್ಣನ ಹೆಸರು ಹೇಳಿಕೊಳ್ಳುವವರು ಕರ್ನಾಟಕದಲ್ಲಿ ಮಾಡುತ್ತಿರುವ ಅನಾಚಾರಗಳನ್ನು ವಿವರಿಸಬೇಕಾಗಿಲ್ಲ. ಮನುವಾದಿ ಸಂಘ ಪರಿವಾರಕ್ಕೆ ರಾಜ್ಯದಲ್ಲಿ ಕಾಲೂರಲು ಅವಕಾಶ ದೊರೆತಿದ್ದೇ ಈ ಮಠಾಧೀಶರಿಂದ. ಸ್ವಜಾತಿಯ, ಸ್ವಕೋಮಿನ ಮಂತ್ರಿಗಳು ಏನೇ ಪಾತಕ ಮಾಡಿದರೂ ಜಾತಿಕಾರಣಕ್ಕಾಗಿ ಅವರನ್ನು ಸಮರ್ಥಿಸುವ ಹೀನಾಯ ಮಟ್ಟಕ್ಕೆ ಈ ಕಾವಿಧಾರಿಗಳು ಕೆಳಗಿಳಿದರು. ಪ್ರಗತಿಪರ ಎಂದು ಕರೆದುಕೊಳ್ಳುವ ಶರಣರೂ ಭ್ರಷ್ಟರ ಬೆಂಬಲಕ್ಕೆ ನಿಂತರು.ಜಾಗತೀಕರಣದ ಈ ದಿನಗಳಲ್ಲಿ ರಾಜಕಾರಣ, ಶಿಕ್ಷಣ ಕ್ಷೇತ್ರಗಳಂತೆ ಧರ್ಮವೂ ಒಂದು ಉದ್ಯಮವಾಗಿದೆ. ನೈಜ ಧಾರ್ಮಿಕತೆಯ ಅಂತಃಸತ್ವ ಬತ್ತಿ ಹೋಗಿ ವ್ಯಾಪಾರ ಮಾಡುವವರು ಪೀಠಾಧಿಪತಿಗಳಾಗಿದ್ದಾರೆ. ಈಗ ಮೇಲ್ಜಾತಿ ಮಠಾಧಿಪತಿಗಳೊಂದಿಗೆ ಹಿಂದುಳಿದ ವರ್ಗದ ಪೀಠಗಳ ಅಧಿಪತಿಗಳು ಪೈಪೋಟಿಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸದಾನಂದ ಗೌಡರನ್ನು ಭೇಟಿ ಮಾಡಿ ತಮ್ಮ ಮಠಗಳಿಗೂ ಅನುದಾನಕ್ಕಾಗಿ ಕೈಚಾಚುತ್ತಿದ್ದಾರೆ. ಇದಕ್ಕಾಗಿ ದನದ ಮಾಂಸ ತಿನ್ನುವ ದಲಿತರು ಮತ್ತು ಮುಸ್ಲಿಮರ ನಾಲಿಗೆಯನ್ನು ಕತ್ತರಿಸಿ ಹಾಕಬೇಕೆಂದು ಹೇಳಿದ ಈಶ್ವರಪ್ಪನನ್ನು ಓಲೈಸಲು ಹೊರಟಿದ್ದಾರೆ.
ದಲಿತ ಹಿಂದುಳಿದವರ ಮೀಸಲಾತಿಯನ್ನು ವಿರೋಧಿಸುತ್ತ ಬಂದ ಸಂಘ ಪರಿವಾರದ ಮುಖ್ಯಮಂತ್ರಿ ಬಳಿ ಹೋಗಿ ಕೈಯೊಡ್ಡಲು ಈ ಮಠಾಧಿಪತಿಗಳಿಗೆ ಸಂಕೋಚವಾಗಲಿಲ್ಲವೇ? ಉಚ್ಚ ಜಾತಿಯ ಮಠಗಳಲ್ಲಿ ನಡೆಯುವ ಪಂಕ್ತಿಭೇದ, ಮಡೆಸ್ನಾನಗಳನ್ನು ವಿರೋಧಿಸ ಲಿಲ್ಲದ ಈ ಸ್ವಾಮಿಗಳು ಅಸಮಾನತೆ ವಿರುದ್ಧ ಹೋರಾಡಬೇಕಾದ ದಮನಿತ ಜನರನ್ನು ಜಾತಿ ಹೆಸರಿನಲ್ಲಿ ವಿಭಜಿಸುತ್ತಿದ್ದಾರೆ. ಈ ಐಡೆಂಟಿಟಿ ರಾಜಕಾರಣದ ಹಿಂದೆ ಸಾಮ್ರಾಜ್ಯಶಾಹಿ ಹುನ್ನಾರವಿದೆ. ದೇಶದ ಜನರನ್ನು ನಿಜವಾಗಿ ಬಾಧಿಸುತ್ತಿರುವ ಮೂಲಭೂತ ಸಮಸ್ಯೆಗಳಿಂದ ಆ ಜನರನ್ನು ವಿಮುಖರನ್ನಾಗಿ ಮಾಡುವ ಸಂಚು ನಡೆದಿದೆ.
ಮಠಾಧೀಶರು ದಾರಿ ತಪ್ಪಿದ ಕರ್ನಾಟಕದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಗಳು ಮಡೆಸ್ನಾನ-ಪಂಕ್ತಿಭೇದದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸಿ ಯಶಸ್ವಿಯಾದರು. ರಾಜ್ಯದ 120 ಮಠಾಧೀಶರನ್ನು ಒಂದೆಡೆ ಸೇರಿಸಿ ಮಾನವ ಘನತೆಗೆ ಅಪಚಾರ ಎಸಗುವ ನೀಚತನದ ವಿರುದ್ಧ ಇವರು ನಡೆಸಿರುವ ಹೋರಾಟ ಶ್ಲಾಘನೀಯವಾಗಿದೆ. ಈ ಹೋರಾಟದಲ್ಲಿ ಕರ್ನಾಟಕದ ದಲಿತ ಸಂಘಟನೆಯ ಎಲ್ಲ ಬಣಗಳು, ಎಡಪ್ರಗತಿಪರ ಸಂಘಟನೆಗಳು ಪಾಲ್ಗೊಂಡಿದ್ದವು.
ನಿಡುಮಾಮಿಡಿ ಸ್ವಾಮಿಗಳ ಹೋರಾಟವನ್ನು ಬೆಂಬಲಿಸುತ್ತಲೇ ಹಿಂದುಳಿದ ಜನ ವರ್ಗಗಳಿಗೆ ಮಠಾಧೀಶರ ಆವಶ್ಯಕತೆ ಇದೆಯೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಕರ್ನಾಟಕ ರಾಜಕಾರಣದಲ್ಲಿ ಎಪ್ಪತ್ತರ ದಶಕದ ವರೆಗೆ ಇದ್ದ ಆಸ್ತಿಯುಳ್ಳ ಬಲಿಷ್ಠ ಜಾತಿಗಳ ಹಿಡಿತವನ್ನು ತಪ್ಪಿಸಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ವರ್ಗಗಳಲ್ಲಿ ಹೊಸ ಹುಮ್ಮಸ್ಸು ತಂದ ದೇವರಾಜ ಅರಸು ಯಾವ ಮಠಾಧೀಶರನ್ನು ಓಲೈಸದೆ ರಾಜಕೀಯ ಮಾಡಿದರು. ರಾಜಕೀಯ ನಾಯಕತ್ವದ ಮುಂಚೂಣಿಗೆ ಖರ್ಗೆ, ಧರ್ಮಸಿಂಗ್, ವೀರಪ್ಪ ಮೊಯ್ಲಿ, ಮೊಯಿದ್ದೀನ್ ಅಂಥವರನ್ನು ತಂದರು.
ಜಾಗತೀಕರಣದ ಪರಿಣಾಮವಾಗಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಉದ್ಯೋಗದಿಂದ ವಂಚಿತರಾಗುತ್ತಿರುವ ಅಸಮಾನತೆಯ ಬೇಗುದಿಯಲ್ಲಿ ಬೇಯುತ್ತಿರುವ ಹಿಂದುಳಿದ, ದಮನಿತ ವರ್ಗಗಳಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯಬೇಕಾಗಿದೆ. ಮಠಾಧೀಶರ ಅಗತ್ಯ ಈ ಜನವರ್ಗಗಳಿಗಿಲ್ಲ. ಆದರೆ ಕೆಲ ಸ್ವಾರ್ಥ ಸಾಧಕರಿಗೆ ಈ ಜನವರ್ಗಗಳನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಉದ್ದೇಶವಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಜನರನ್ನು ಮಠ-ಪೀಠಗಳ ಹೆಸರಿನಲ್ಲಿ ದಾರಿತಪ್ಪಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. 
ದಲಿತ ಹಿಂದುಳಿದ ವರ್ಗಗಳ ಪರ್ಯಾಯ ರಾಜಕಾರಣದ ಬಗ್ಗೆ ಚರ್ಚೆ ನಡೆದಾಗೆಲ್ಲ ಇಡಿ ಭೂಮಂಡಲವನ್ನೋ ಆಕ್ರಮಿಸಿ ಭಾರತವನ್ನು ಕಬಳಿಸಲು ಹೊರಟಿರುವ ಜಾಗತೀಕರಣದ ಬಗ್ಗೆ ಯಾಕೆ ಪ್ರಸ್ತಾಪವಾಗುವುದಿಲ್ಲ? ಅಮೆರಿಕನ್ ಸಾಮ್ರಾಜ್ಯಶಾಹಿ ಪ್ರಚೋದಿತ ಆರ್ಥಿಕ ಸುಧಾರಣ ಕ್ರಮಗಳಿಂದ ಸರಕಾರಿ ರಂಗ ಕ್ಷೀಣಿಸಿ ಮೀಸಲಾತಿಯ ಅವಕಾಶಗಳೇ ಕ್ರಮೇಣ ಇಲ್ಲವಾಗುತ್ತಿರುವಗಲೂ ಆ ಬಗ್ಗೆ ಹಿಂದುಳಿದವರ ಹೆಸರು ಹೇಳುವ ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ ಯಾಕೆ ಮಾತಾನಾಡುವುದಿಲ್ಲ? ಗಣಿಗಾರಿಕೆಯಿಂದ ಇಡಿ ನಾಡಿನ ಸಂಪತ್ತು ಲೂಟಿಯಾಗುತ್ತಿರುವಾಗಲೂ ಯಾಕೆ ಪ್ರತಿಭಟಿಸಲಿಲ್ಲ?
ಅಹಿಂದ ಎಂಬ ಸಂಘಟನೆಯೂ ಈಗ ಒಂದಾಗಿ ಉಳಿದಿಲ್ಲ. ಸಿದ್ದರಾಮಯ್ಯನವರೊಬ್ಬರೇ ಅದರ ನಾಯಕರೂ ಅಲ್ಲ. ವರ್ಣಾಶ್ರಮ ಪದ್ಧತಿಯಲ್ಲಿ ನಂಬಿಕೆ ಇರುವ ಸಂಘ ಪರಿವಾರದ ಸ್ವಯಂ ಸೇವಕ ಈಶ್ವರಪ್ಪನವರೂ ಅಹಿಂದ ರಾಜಕಾರಣ ಬಳಸಿಕೊಳ್ಳುತ್ತಿದ್ದಾರೆ. ಮಂತ್ರಿ ವರ್ತೂರು ಪ್ರಕಾಶರಿಗೂ ತನ್ನ ರಾಜಕಾರಣದ ಪದೋನ್ನತಿಗೆ ಅಹಿಂದ ರಾಜಕಾರಣ ಮೆಟ್ಟಿಲಾಗಬೇಕು. ಗಣಿಗಾರಿಕೆಯಿಂದ ಕೊಳ್ಳೆ ಹೊಡೆದ ಶ್ರೀರಾಮುಲುಗೂ ಈಗ ತುರ್ತಾಗಿ ಅಹಿಂದದ ರಕ್ಷಣೆ ಬೇಕಾಗಿದೆ. ಇಂಥವರು ತಮ್ಮನ್ನು ಆಶೀರ್ವದಿಸಬಲ್ಲ ಮಠಾಧೀಶರನ್ನು ಸೃಷ್ಟಿಸಿಕೊಂಡಿದ್ದಾರೆ.
ಹಿಂದುಳಿದ ವರ್ಗಗಳೂ ಈಗ ಅಖಂಡವಾಗಿ ಏಕಶಿಲೆಯಾಗಿ ಉಳಿದಿಲ್ಲ. ಅಲ್ಲೂ ಕೋಟ್ಯಧಿಪತಿಗಳು ಮತ್ತು ಕಡು ಬಡವರು ಇದ್ದಾರೆ. ಈಶ್ವರಪ್ಪ, ಪಾಲೆಮಾರ್, ಶ್ರೀರಾಮುಲು ಧನಾಢ್ಯರಾಗಿದ್ದಾರೆ. ಉತ್ತರ ಕರ್ನಾಟಕದಿಂದ ಗೋವಾ, ಮುಂಬೈ, ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗುವವರಲ್ಲಿ ಶೇ.90ರಷ್ಟು ಜನ ದಲಿತ, ಹಿಂದುಳಿದ ಸಮುದಾಯಗಳಿಗೆ ಸೇರಿದವರು. ಇಂಥವರನ್ನು ಕಡೆಗಣಿಸಿ ಬರೀ ಜಾತಿ ಹೆಸರಿನಲ್ಲಿ ಮಾಡುವ ಸಂಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಿಂಹಾಸನಾರೋಹಣದ ಎಣಿಯಾಗಬಹುದಷ್ಟೆ. 
ದಲಿತರು, ಹಿಂದುಳಿದವರು, ಮುಸಲ್ಮಾನರು, ಕ್ರೈಸ್ತರು ಒಗ್ಗೂಡಿ ಹೋರಾಡಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ, ಈ ಒಗ್ಗಟ್ಟು ಯಾವ ಗುರಿ ಸಾಧನೆಗಾಗಿ? ಇವರೆಲ್ಲರಿಗೂ ಸಮಾನ ಶತ್ರು ಯಾರು? ತಲುಪುವ ಸಮಾನ ಗುರಿ ಯಾವುದು? ಈ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಉತ್ತರ ಹಿಂದುಳಿದವರ ಹೆಸರಿನಲ್ಲಿ ಧರ್ಮಕಾರಣ ಮಾಡುವ ಮಠಾಧೀಶರ ಬಳಿ ಸಿಗುವುದಿಲ್ಲ. ಅವರು ಕೇಳುತ್ತಿರುವುದು ತಮ್ಮ ಪೀಠಗಳಿಗೆ ಅನುದಾನವನ್ನು ಮಾತ್ರ. ಸಾಮಾಜಿಕ ನ್ಯಾಯವನ್ನಲ್ಲ. ಆದರೆ ಅಹಿಂದ ವರ್ಗಗಳ ನೈಜ ಗುರಿ ಯಾರ ಸಮಾನತೆಯ ಭಾರತದ ಕನಸನ್ನು ಕೊಲ್ಲಲು ಎಂದೂ ಅವಕಾಶ ನೀಡಬಾರದು.
ಈ ಸಮಾನತೆಯ ಗುರಿ ಸಾಧನೆಗೆ ಮುಖ್ಯ ಅಡ್ಡಿಯಾಗಿರುವುದು ಹಿಂದುತ್ವ ಕೋಮುವಾದ ಮತ್ತು ಜಾಗತೀಕರಣ. ಹಿಂದು ರಾಷ್ಟ್ರ ಕಟ್ಟುವ ಮೂಲಕ ಅಂಬೇಡ್ಕರ್‌ರ ಕನಸುಗಳ ಮೇಲೆ ಚಪ್ಪಡಿ ಕಲ್ಲು ಎಳೆಯುವ ಭಾರೀ ಮಸಲತ್ತು ಈ ದೇಶದಲ್ಲಿ ನಡೆದಿದೆ. ಅದಕ್ಕೆ ಪೂರಕವಾಗಿ ಜಾಗತೀಕರಣ ಬಂದಿದೆ. ಇವರೆಡು ಶತ್ರುಗಳ ವಿರುದ್ಧ ಜನ ಹೋರಾಟವನ್ನು ಕಟ್ಟಬೇಕಾಗಿದೆ.
ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನೇ ಬದಲಿಸುವ ಹುನ್ನಾರಗಳು ಅತ್ಯಂತ ವ್ಯವಸ್ಥಿತವಾಗಿ ಈ ನೆಲದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಸ್ವಾಮಿ ಎಂಬ ಚಡ್ಡಿವಿಪ್ರ ಈಗಾಗಲೇ ಅದರ ಸುಳಿವು ನೀಡಿದ್ದಾನೆ. ಇಂಥ ಸನ್ನಿವೇಶದಲ್ಲಿ ಅಹಿಂದ ವರ್ಗಗಳಿಗೆ ಈಗಿರುವ ಅವಕಾಶಗಳನ್ನು ಕಸಿದುಕೊಳ್ಳುವ ಆತಂಕ ಎದುರಾಗಿದೆ. ಇದನ್ನು ತಡೆಯುವುದು ಯಾವುದೇ ಮಠಾಧೀಶರಿಂದ ಸಾಧ್ಯವಿಲ್ಲ.ಗದುಗಿನ ತೋಂಟದಾರ್ಯಶ್ರೀಗಳು, ನಿಡುಮಾಮಿಡಿ ಸ್ವಾಮಿಗಳಂಥ ಪ್ರಗತಿಪರ ಸ್ವಾಮೀಜಿಗಳ ಮಡೆಸ್ನಾನ ವಿರೋಧಿ ಹೋರಾಟವನ್ನು ಬೆಂಬಲಿಸುತ್ತಲೇ ಜಾಗತೀಕರಣ ಮತ್ತು ಕೋಮುವಾದವನ್ನು ವಿರೋಧಿಸಿ ಸಮಾನತೆಯ ಭಾರತವನ್ನು ಕಟ್ಟಲು ಅಹಿಂದ ವರ್ಗಗಳು ಮುನ್ನಡೆಯಬೇಕಾಗಿದೆ. ಇದೊಂದು ಸುದೀರ್ಘ ಹೋರಾಟ ಎಂಬುದನ್ನು ಮರೆಯಬಾರದು.   ಕೃಪೆ  : ವಾರ್ತಾಭಾರತಿ
Please follow and like us:
error