fbpx

ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಿ- ಅಮರೇಶ್ ಕುಳಗಿ ಮನವಿ


ಕೊಪ್ಪಳ ಜ.   ಕೊಪ್ಪಳ ಜಿಲ್ಲೆಯನ್ನು 2015 ರ ಒಳಗಾಗಿ ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿಸಲು, ವಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿಯಾಗಬೇಕು.  ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರು, ಅಧಿಕಾರಿಗಳು ಜೊತೆಗೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಅವರು ಮನವಿ ಮಾಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 54 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೊಪ್ಪಳ ಜಿಲ್ಲೆ ಇಡೀ ರಾಜ್ಯದಲ್ಲಿ ಮೊದಲನೆ ಸ್ಥಾನಗಳಿಸಿತ್ತು.  ಅಲ್ಲದೆ ಇಡೀ ರಾಷ್ಟ್ರವೇ ಜಿಲ್ಲೆಯತ್ತ ಗಮನ ಹರಿಸುವಂತಾಗಿತ್ತು.  ಈ ವರ್ಷವೂ ಶೌಚಾಲಯ ನಿರ್ಮಾಣ ಅದೇ ವೇಗದಲ್ಲಿ ಸಾಗಿದ್ದು, ಈ ವರ್ಷ 46 ಸಾವಿರ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ.  ಈಗಾಗಲೆ ಜಿಲ್ಲೆಯಲ್ಲಿ ಸುಮಾರು 37 ಸಾವಿರ ಶೌಚಾಲಯ ನಿರ್ಮಾಣ ಪೂರ್ಣಗೊಂಡಿದ್ದು, ಇದೇ ಜ. 30 ರ ಒಳಗಾಗಿ ಒಟ್ಟಾರೆ ಒಂದು ಲಕ್ಷ ಶೌಚಾಲಯ ಪೂರ್ಣಗೊಂಡು, ಜ. 30 ರಂದು ಒಂದು ಲಕ್ಷದ ಒಂದನೇ ಶೌಚಾಲಯದ ಉದ್ಘಾಟನೆಯನ್ನು ನೆರವೇರಿಸಲು ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರೆಸುವ ಪ್ರಯತ್ನ ನಡೆದಿದೆ.  ಇಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ.  ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ಪಾವತಿ ಕುರಿತು ಈ ಹಿಂದೆ ತೊಂದರೆ ಇತ್ತು.  ಆದರೆ ಇದೀಗ ಈ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ಸಹಾಯಧನದ ಸಂಪೂರ್ಣ ಮೊತ್ತವನ್ನು ಸ್ವಚ್ಛ ಭಾರತ ಅಭಿಯಾನದಡಿ ನೀಡಲಾಗುತ್ತಿದೆ.  ಎಲ್ಲ ಫಲಾನುಭವಿಗಳಿಗೆ 12 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 15 ಸಾವಿರ ರೂ. ಅನುದಾನ ನಿಗದಿಪಡಿಸಲಾಗಿದ್ದು, ಈ ಅನುದಾನದಲ್ಲಿ ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಗಣರಾಜ್ಯೋತ್ಸವ ದಿನವಾದ ಜ. 26 ರಂದು ಜಿಲ್ಲೆಯ 100 ಗ್ರಾಮಗಳನ್ನು ಬಯಲು ಮಲವಿಸರ್ಜನೆ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು 100 ಗ್ರಾಮಗಳ ಆಯ್ಕೆ ಮಾಡಲಾಗಿದೆ ಅಲ್ಲದೆ ಈ ಗ್ರಾಮಗಳಲ್ಲಿನ ತಿಪ್ಪೆಗುಂಡಿಗಳ ನಿರ್ವಹಣೆಗೆ ಜೈವಿಕ ಗೊಬ್ಬರ ವಿಧಾನವನ್ನು ಅನುಷ್ಠಾನಗೊಳಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. 
     ಜಿಲ್ಲೆಯಲ್ಲಿ ಅರಣ್ಯೀಕರಣ ಅಭಿಯಾನ ಜಾರಿಯಲ್ಲಿದ್ದು, ಎಲ್ಲ ಶಾಲೆಗಳ ಆವರಣದಲ್ಲಿ ಗಿಡಗಳನ್ನು ನೆಡಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಇದುವರೆಗೂ ಕುಡಿಯುವ ನೀರು ಪೂರೈಕೆ ಹಾಗೂ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೇ ಇರುವ ಶಾಲೆಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು.  ಕಾಂಪೌಂಡ್ ಹೊಂದದೇ ಇರುವ ಶಾಲೆಗಳ ಪಟ್ಟಿ ಮಾಡಿ, ಅಂತಹ ಶಾಲೆಗಳಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕಂಪೌಂಡ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಸೂಚನೆ ನೀಡಿದರು.
ಸಮವಸ್ತ್ರ ಪೂರೈಕೆ : ಜಿಲ್ಲೆಯ ಶಾಲಾ ಮಕ್ಕಳಿಗೆ ಎರಡನೆ ಹಂತದ ಸಮವಸ್ತ್ರ ಪೂರೈಕೆಗೆ ಈ ಹಿಂದೆಯೇ ಆದೇಶ ನೀಡಲಾಗಿದ್ದರೂ, ಇದುವರೆಗೂ ಬಹಳಷ್ಟು ಶಾಲೆಗಳಲ್ಲಿ ಸಮವಸ್ತ್ರ ಪೂರೈಕೆಯಾಗಿಲ್ಲ ಎಂದು ಜಿ.ಪಂ. ಸದಸ್ಯೆ ವನಿತಾ ಗಡಾದ್ ಸಭೆಯ ಗಮನಕ್ಕೆ ತಂದರು.  ಇದಕ್ಕೆ ಉತ್ತರಿಸಿದ ಡಿಡಿಪಿಐ ಶ್ಯಾಮಸುಂದರ್ ಅವರು, ಪ.ಜಾತಿ, ಪ.ವರ್ಗ ಮತ್ತು ಪ್ರವರ್ಗ-1 ಹಾಗೂ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಪೂರೈಕೆಗೆ ಅನುದಾನ ಬಿಡುಗಡೆಯಾಗಿದೆ.  ಉಳಿದ ವಿದ್ಯಾರ್ಥಿಗಳ ಸಮವಸ್ತ್ರ ಪೂರೈಕೆಗೆ ಅನುದಾನ ಬಿಡುಗಡೆಯಾಗಿಲ್ಲ.  ಆದರೂ ಕೂಡಲೆ ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಮಾಡಲು ಅಗತ್ಯ ಸೂಚನೆ ನೀಡಲಾಗುವುದು ಎಂದರು.
ಲೈಂಗಿಕ ದೌರ್ಜನ್ಯ-ಮೊಕದ್ದಮೆ ದಾಖಲು : ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿ ಒಂದು ವಾರ ಕಳೆದರೂ, ಇದುವರೆಗೂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಲ್ಲ.  ಡಿಡಿಪಿಐ ಅವರು ಇದುವರೆಗೂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ.  ಎಲ್ಲ ಶಾಲೆಗಳಲ್ಲಿ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸುವಂತೆ ಆದೇಶ ಜಾರಿಗೊಳಿಸಲಾಗಿದ್ದರೂ ಇದುವರೆಗೂ ಇದು ಪಾಲನೆಯಾಗಿಲ್ಲ ಎಂದು ಜಿ.ಪಂ. ಸದಸ್ಯ ವೀರೇಶ್ ಸಾಲೋಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ಕೂಡಲೆ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ಇದಕ್ಕೆ ಉತ್ತರಿಸಿದ ಗಂಗಾವತಿ ಬಿಇಓ ಅವರು, ಜ. 14 ರಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ.  ಆದರೆ ಕಠಿಣ ಶಿಕ್ಷೆಗೆ ಹೆದರಿ ಶಿಕ್ಷಕ, ಶಾಲಾ ಮುಖ್ಯೋಪಾಧ್ಯಾಯರಿಗೆ ರಾಜೀನಾಮೆ ನೀಡಿ ಹೋಗಿದ್ದಾನೆ ಎಂದರು.   ಡಿಡಿಪಿಐ ಶ್ಯಾಮಸುಂದರ್ ಅವರು ಉತ್ತರ ನೀಡಿ, ಜಿಲ್ಲೆಯಲ್ಲಿ ಒಟ್ಟು 352 ಖಾಸಗಿ ಶಾಲೆಗಳ ಪೈಕಿ 68 ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದರು.  ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು, ಡಿಡಿಪಿಐ ಅವರಿಗೆ ಸಭೆಯಿಂದ ನಿರ್ಗಮಿಸುವಂತೆ ಸೂಚನೆ ನೀಡಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ನಿರ್ದೇಶನ ನೀಡಿದರು.
ಉಪಗುತ್ತಿಗೆ ವ್ಯವಸ್ಥೆ ಬೇಡ : ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ ಅವರು ಮಾತನಾಡಿ, ಜಿಲ್ಲೆಯಲ್ಲಿನ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದಂತಹ ಕಾಮಗಾರಿಗಳನ್ನು ಗುತ್ತಿಗೆ ಪಡೆಯುವವರು, ಕಾಮಗಾರಿ ನಡೆಸಲು ಇತರೆ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡುತ್ತಿರುವುದು ಕಂಡುಬಂದಿದೆ.  ಇದರಿಂದಾಗಿ ಕಳಪೆ ಕಾಮಗಾರಿಯಾಗುತ್ತಿದೆ.  ಜಿಲ್ಲೆಯ ಎಲ್ಲ ಗುತ್ತಿಗೆದಾರರ ಸಭೆ ಕರೆದು, ಜಿಲ್ಲಾ ಪಂಚಾಯತಿ ಕಾಮಗಾರಿಗಳನ್ನು ಯಾವುದೇ ವ್ಯಕ್ತಿಗಳಿಗೆ ಉಪಗುತ್ತಿಗೆ ವಹಿಸದಂತೆ ಸೂಚನೆ ನೀಡಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.  ಸಭೆಯ ಆರಂಭಕ್ಕೂ ಮುನ್ನ ಜಿ.ಪಂ. ಸದಸ್ಯರಾಗಿದ್ದ ಗಂಗಣ್ಣ ಸಮಗಂಡಿ ಅವರು ಇತ್ತೀಚೆಗೆ ನಿಧನರಾದ ಪ್ರಯುಕ್ತ, ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Please follow and like us:
error

Leave a Reply

error: Content is protected !!