ಸಂಸ್ಕೃತಿ ವಕ್ತಾರರ ಮನಸ್ಥಿತಿಗೆ ಕನ್ನಡಿ ಹಿಡಿದ ಬಿಬಿಸಿ ಸಾಕ್ಷ ಚಿತ್ರ

2012  ರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ, ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಚರ್ಚೆಗೊಳಗಾಗಿದೆ. ಆ ಅತ್ಯಾಚಾರದ ಕುರಿತಂತೆ ಬಿಬಿಸಿಯ ವಿವಾದಾತ್ಮಕ ಸಾಕ್ಷ ಚಿತ್ರವೇ ಚರ್ಚೆಗೆ ಮುಖ್ಯ ಕಾರಣ. ಈ ಸಾಕ್ಷಚಿತ್ರದಲ್ಲಿ ಅತ್ಯಾಚಾರಗೈದ ಪ್ರಮುಖ ಅಪರಾಧಿಯೊಬ್ಬನ ಸಂದರ್ಶನವಿದೆ. ಸಂದರ್ಶಕರು ಜೈಲಿಗೆ ಭೇಟಿ ನೀಡಿ ಆತನ ಸಂದರ್ಶನವನ್ನು ತೆಗೆದುಕೊಂಡಿದ್ದಾರೆ. ಇಲ್ಲಿ ಸಮಸ್ಯೆ, ಅತ್ಯಾಚಾರ ಆರೋಪಿಯನ್ನು ಭೇಟಿ ಮಾಡಲು ಸಂದರ್ಶಕರಿಗೆ ಹೇಗೆ ಅನುಮತಿ ಸಿಕ್ಕಿತು ಎನ್ನುವುದಲ್ಲ. 
‘ಅತ್ಯಾಚಾರಿ ಸಂದರ್ಶನದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಮಾತುಗಳಿವೆ’ ಎನ್ನುವುದು ಭಾರೀ ಟೀಕೆಗಳಿಗೆ ಕಾರಣವಾಗಿದೆ. ‘‘ಸಭ್ಯ ಹುಡುಗಿಯರು ರಾತ್ರಿ 9 ಗಂಟೆಯನಂತರ ಹೊರಗಡೆ ಸುತ್ತುವುದಿಲ್ಲ. ಅತ್ಯಾಚಾರದ ಸಂದರ್ಭದಲ್ಲಿ ಅವಳು ಸುಮ್ಮಗೆ ಇರುತ್ತಿದ್ದರೆ ಬದುಕುತ್ತಿದ್ದಳು. ಪ್ರತಿಭಟಿಸಿದುದೇ ಅವಳ ಸಾವಿಗೆ ಕಾರಣ’’ ಎಂಬಿತ್ಯಾದಿ ಮಾತುಗಳನ್ನು ಆತ ಸಂದರ್ಶಕರ ಮುಂದೆ ಆಡಿದ್ದಾನೆ. ಅಷ್ಟೇ ಅಲ್ಲ, ಸಾಕ್ಷ ಚಿತ್ರದಲ್ಲಿ ತನ್ನ ಕೃತ್ಯವನ್ನು ಆತ ಸಮರ್ಥಿಸಿಕೊಂಡಿದ್ದಾನೆ. ವಿಪರ್ಯಾಸವೆಂದರೆ, ಕಂಠ ಪೂರ್ತಿ ಕುಡಿದು, ಒಂದು ಹೆಣ್ಣನ್ನು ತನ್ನ ಸಹವರ್ತಿಗಳ ಜೊತೆಗೆ ಬರ್ಬರವಾಗಿ ಅತ್ಯಾಚಾರಗೈದು, ಕೊಂದು ಹಾಕಿದ ಆತ ಸಮಾಜ, ಸಂಸ್ಕೃತಿ, ಹೆಣ್ಣಿನ ಸಭ್ಯತೆಯ ಕುರಿತಂತೆ ಹೇಳಿಕೆ ನೀಡಿದ್ದಾನೆ. ಸಹಜವಾಗಿಯೇ ಇದು ಮಹಿಳೆಯರು ಸೇರಿದಂತೆ ಒಂದು ವರ್ಗವನ್ನು ಕೆರಳಿಸಿದೆ ಮತ್ತು ಆ ಸಂದರ್ಶನದ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡಿದೆ. ಆರೋಪಿಯನ್ನು ಜೈಲಿನಲ್ಲಿ ಭೇಟಿ ಮಾಡಲು ಅನುಮತಿ ಕೊಟ್ಟವರ ಮೇಲೆ ಪ್ರತಿಭಟನಕಾರರ ಆಕ್ರೋಶ ತಿರುಗಿದೆ. ಸರಕಾರ ಹೇಳಿಕೆಗಳ ಮೂಲಕ ಜಾರಿಕೊಳ್ಳಲು ಯತ್ನಿಸುತ್ತಿದೆ. ಸಾಕ್ಷಚಿತ್ರವನ್ನೇ ನಿಷೇಧ ಮಾಡುವ ಸಾಹಸಕ್ಕೂ ಅದು ಹೊರಟಿದೆ.
   ಆದರೆ, ಪ್ರತಿಭಟನಕಾರರ ಆಕ್ರೋಶ, ಗದ್ದಲಗಳಲ್ಲಿ, ಸಾಕ್ಷಚಿತ್ರ ತನ್ಮೂಲಕ ಎತ್ತಿರುವ ಕೆಲವು ಮುಖ್ಯ ಪ್ರಶ್ನೆಗಳು ಯಾರಿಗೂ ಕೇಳಿಸದಂತಾಗಿವೆ. ಸಾಕ್ಷ ಚಿತ್ರವನ್ನು ನಿಷೇಧಿಸಿದಾಕ್ಷಣ, ಆ ಚಿತ್ರ ವಿಶ್ವದ ಮುಂದಿಟ್ಟ ಭಾರತೀಯ ಮನಸ್ಥಿತಿಯ ಸೋಗಲಾಡಿತನಗಳನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಇಷ್ಟಕ್ಕೂ ಆ ಸಾಕ್ಷ ಚಿತ್ರದಲ್ಲಿರುವುದು ಕೇವಲ ಅಪರಾಧಿಯ ಸಂದರ್ಶನ ಮಾತ್ರವಲ್ಲ. ನಿರ್ಭಯಾ ಅತ್ಯಾಚಾರದ ಕುರಿತ ಇಡೀ ಸಾಕ್ಷ ಚಿತ್ರದ ಭಾಗವಾಗಿ ಆ ಸಂದರ್ಶನವನ್ನು ಮಾಡಲಾಗಿದೆ. ಈ ಸಾಕ್ಷಚಿತ್ರ ನಿರ್ಭಯಾ ತನ್ನ ವಿದ್ಯಾಭ್ಯಾಸಕ್ಕಾಗಿ ನಡೆಸಿದ ಸಂಘರ್ಷವನ್ನೂ ಹೇಳುತ್ತದೆ. ಜೊತೆ ಜೊತೆಗೇ ಹೆಣ್ಣಿನ ಕುರಿತಂತೆ ಭಾರತೀಯ ಮನಸ್ಥಿತಿಯನ್ನೂ ಚರ್ಚಿಸುತ್ತದೆ. ಇಲ್ಲಿ ಅಪರಾಧಿ ಮುಖೇಶ್ ಜೊತೆಗೆ ಇನ್ನೂ ಕೆಲವು ವಿದ್ಯಾವಂತರನ್ನು ಸಂದರ್ಶಿಸಲಾಗಿದೆ ಮತ್ತು ಅವರ ಮಾತುಗಳು ಅಪರಾಧಿ ಮುಖೇಶ್‌ನ ಮಾತುಗಳಿಗಿಂತ ವಿಕಾರವಾಗಿವೆ. ಮುಖೇಶ್‌ನ ಪರ ವಕೀಲ ಅಥವಾ ಪ್ರತಿವಾದಿ ವಕೀಲ ಹೆಣ್ಣಿನ ಕುರಿತಂತೆ ಸಾಕ್ಷಚಿತ್ರದಲ್ಲಿ ಮಂಡಿಸುವ ವಾದ, ಭಾರತದ ಸಂಸ್ಕೃತಿ ವಕ್ತಾರರೆನಿಸಿಕೊಂಡವರ ಮನಸ್ಥಿತಿ ಹೆಣ್ಣನ್ನು ಯಾವ ರೀತಿಯಲ್ಲಿ ನೋಡುತ್ತಿದೆ ಎನ್ನುವುದನ್ನು ತೆರೆದಿಡುತ್ತದೆ. ಮುಖೇಶ್ ಎನ್ನುವಾತ ಅನಕ್ಷರಸ್ಥ. ನಾಗರಿಕರೆಂದು ಕರೆಸಿಕೊಳ್ಳುವ ಸಮಾಜದಲ್ಲಿ ಆತ ಯಾವುದೇ ಜವಾಬ್ದಾರಿಯುತ ಸ್ಥಾನಮಾನವನ್ನು ಹೊಂದಿದವನಲ್ಲ. ಕಂಠ ಪೂರ್ತಿ ಕುಡಿದು ಬೇಕಾಬಿಟ್ಟಿ ಬಸ್ ಓಡಿಸುವ ಚಾಲಕ. ಆದರೂ ಈ ದೇಶದ ಸಂಸ್ಕೃತಿಯ ಕುರಿತಂತೆ ಆತನಿಗೆ ಕಾಳಜಿಯಿದೆ. ಈ ಕಟು ವ್ಯಂಗ್ಯವನ್ನು ಭಾರತದ ಎದೆಗೆ ಇರಿಯುವಂತೆ ನಿರೂಪಿಸುತ್ತದೆ ಈ ಸಾಕ್ಷ ಚಿ
 ತ್ರ. ವಿಪರ್ಯಾಸವೆಂದರೆ ಈ ಸಾಕ್ಷಚಿತ್ರದಲ್ಲಿನ ಮುಖೇಶ್ ಎಂಬ ಅಪರಾಧಿಯ ಮಾತುಗಳಿಗಷ್ಟೇ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಆತನ ವಕೀಲ ಹೇಳುವ ಮಾತುಗಳು ಅಪರಾಧಿಯ ಮಾತುಗಳಿಗಿಂತಲೂ ಹೆಚ್ಚು ಕ್ರೂರವಾಗಿವೆ. ಇದನ್ನು ಯಾರೂ ಚರ್ಚಿಸುತ್ತಿಲ್ಲ. ಈ ಹಿರಿಯ ವಕೀಲನ ಪ್ರಕಾರ ‘‘ಹೆಣ್ಣು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಒಂದು ಹೂವು. ಆ ಹೂವು ಬೀದಿಗೆ ಬಂದರೆ ಅದು ಕಂಡವರ ಪಾಲಾಗುತ್ತದೆ. ದೇವಸ್ಥಾನದಲ್ಲಿದ್ದರೆ ಪೂಜೆಗೆ ಅರ್ಹವಾಗುತ್ತದೆ’’ ಈತ ಮುಂದುವರಿದು ಹೇಳುತ್ತಾನೆ ‘‘ಹೆಣ್ಣಿಗೆ ಭಾರತೀಯ ಸಂಸ್ಕೃತಿಯಲ್ಲಿ ರತ್ನದ ಸ್ಥಾನವನ್ನು ನೀಡಿದ್ದೇವೆ. ಆ ಹೆಣ್ಣು ರಾತ್ರಿ ಹೊರಗೆ ಬಂದರೆ ಅದು ನಾಯಿಗಳ ಪಾಲಾಗುವುದು ಸಹಜ’’. ನಾವು ಚರ್ಚಿಸಬೇಕಾದುದು ವಿದ್ಯಾವಂತ, ಸಂವಿಧಾನವನ್ನು ಅಧ್ಯಯನ ಮಾಡಿದ ಈತನ ಮಾತುಗಳನ್ನು. ಹಾಗೆ ನೋಡಿದರೆ ಈ ಸಾಕ್ಷ ಚಿತ್ರದಲ್ಲಿ ಹೊಸತೇನೂ ಇಲ್ಲ. ಅಪರಾಧಿ ಮುಖೇಶ್, ಆತನ ವಕೀಲ ಆಡಿದಂತಹ ವಿಕೃತ ಮನಸ್ಥಿತಿಯ ಮಾತುಗಳನ್ನು ಈ ಹಿಂದೆ ಅತ್ಯಾಚಾರ ನಡೆದ ಸಂದರ್ಭದಲ್ಲೇ ಈ ದೇಶದ ಸಂಸ್ಕೃತಿಯ ವಕ್ತಾರರು ಆಡಿದ್ದಾರೆ. ಅಸಾರಾಂ ಬಾಪು ಎಂಬ ಸ್ವಾಮೀಜಿ ಅತ್ಯಾಚಾರಕ್ಕೆ ಪ್ರತಿಕ್ರಿಯಿಸುತ್ತಾ ‘‘ಆಕೆ ಅತ್ಯಾಚಾರದ ಸಂದರ್ಭದಲ್ಲಿ ಅಣ್ಣಾ ಎಂದು ಅಪರಾಧಿಯ ಮುಂದೆ ಗೋಗರೆಯಬೇಕಾಗಿತ್ತು’’ ಎಂದು ಹೇಳುತ್ತಾನೆ. ಹೀಗೆಂದು ಹೇಳಿದ ಸ್ವಾಮೀಜಿ ಕೆಲವೇ ದಿನಗಳಲ್ಲಿ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ. ಹಿಂದೂ ಸಂಸ್ಕೃತಿಯ ಗುತ್ತಿಗೆದಾರರ ಮಾತುಗಳ ವಿರೋಧಾಭಾಸಗಳನ್ನು ಕಟ್ಟಿಕೊಡಲು ಇದೇ ಸಾಕು. ಆರೆಸ್ಸೆಸ್‌ನ ಮುಖಂಡ ಭಾಗವತ್ ಈ ಸಂದರ್ಭದಲ್ಲಿ ಹೇಳಿಕೆ ನೀಡಿ ‘‘ಭಾರತದಲ್ಲಿ ಅತ್ಯಾಚಾರ ನಡೆಯುವುದಿಲ್ಲ. ಇಂಡಿಯಾದಲ್ಲಿ ಮಾತ್ರ ಅತ್ಯಾಚಾರ ನಡೆಯುತ್ತದೆ’’ ಎಂದು ಹೇಳುವ ಮೂಲಕ, ಹೆಣ್ಣನ್ನೇ ಅತ್ಯಾಚಾರಕ್ಕೆ ಹೊಣೆಗಾರಳನ್ನಾಗಿ ಮಾಡಿದರು. ಮುಖೇಶ್‌ಗಿಂತ ಇವರ ಮಾತುಗಳು ಯಾವ ರೀತಿಯಲ್ಲಿ ಭಿನ್ನ? ಬಾಬಾ ರಾಮ್‌ದೇವ್ ಸೇರಿದಂತೆ ಹಲವು ಸ್ವಾಮೀಜಿಗಳು, ಆರೆಸ್ಸೆಸ್ ನಾಯಕರು ಪರೋಕ್ಷವಾಗಿ ಹೆಣ್ಣನ್ನೇ ಅತ್ಯಾಚಾರಕ್ಕೆ ಹೊಣೆಗಾರಳನ್ನಾಗಿ ಮಾಡಿರುವುದನ್ನು ನಾವು ಮಾಧ್ಯಮಗಳಲ್ಲಿ ಓದಿದ್ದೇವೆ. ಇವರ ಹೇಳಿಕೆಗಿಂತ ಮುಖೇಶ್‌ನ ಹೇಳಿಕೆ ಬರ್ಬರವಾಗಿದೆಯಾದರೆ ಅದು ಯಾವ ರೀತಿ ಎನ್ನುವುದನ್ನೂ ವಿವರಿಸಬೇಕಾಗುತ್ತದೆ. ಗಾಂಧಿಯನ್ನು ಕೊಂದ ಗೋಡ್ಸೆ ಅಂತಿಮವಾಗಿ ‘ನಾನೇಕೇ ಗಾಂಧಿಯನ್ನು ಕೊಂದೆ?’ ಎನ್ನುವುದನ್ನು ಸಾರ್ವಜನಿಕವಾಗಿ ಹೆಮ್ಮೆಯಿಂದ ಆಡಿಕೊಳ್ಳುತ್ತಾನೆ ಮತ್ತು ಆ ಮಾತುಗಳನ್ನು ದೇಶಭಕ್ತನೊಬ್ಬನ ಆಣಿಮುತ್ತು ಎಂಬಂತೆ ಆರೆಸ್ಸೆಸ್‌ನಂತಹ ಸಂಘಟನೆಗಳು ದೇಶದ ಯುವಕರಿಗೆ ಕಲಿಸಿಕೊಡುತ್ತವೆ. ಇಂತಹ ಸಮಾಜದಲ್ಲಿ ಮುಖೇಶ್‌ನಂತಹ ವಿಕಾರ ಮನಸ್ಸುಗಳು ಹುಟ್ಟವುದರಲ್ಲಿ ಅಚ್ಚರಿಯೇನೂ ಇಲ್ಲ. ಈ ವಿಕಾರಕ್ಕೆ ಬಿಬಿಸಿಯ ಸಾಕ್ಷ ಚಿತ್ರ ಕನ್ನಡಿ ಹಿಡಿದಿದೆ. ಇದೀಗ ನಾವು ಕನ್ನಡಿಯನ್ನು ಒಡೆಯುವುದರ ಮೂಲಕ ನಮ್ಮ ಮುಖದ ವಿಕಾರವನ್ನು ಮುಚ್ಚಿ ಹಾಕಲು ಹೊರಟಿ ದ್ದೇವಷ್ಟೇ. ಒಂದು ಅತ್ಯಾಚಾರ, ಅದಕ್ಕೆ ಕಾರಣವಾದ ಭಾರತೀಯ ಮನಸ್ಥಿತಿ, ಮತ್ತು ಅದರ ವಿರುದ್ಧ ದೇಶದ ಪ್ರಜ್ಞಾವಂತರು ನಡೆಸಿದ ಹೋರಾಟಗಳ ದಾಖಲೆಗಳಿರುವ ಬಿಬಿಸಿ ಸಾಕ್ಷ ವಿಶಾಲ ಒಳನೋಟಗಳನ್ನು ನಮಗೆ ನೀಡುತ್ತದೆ. ಸಕಲ ಭಾರತೀಯರನ್ನು ಎದೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುವ ಬಿಬಿಸಿಯ ಈ ಚಿತ್ರಕ್ಕೆ ಯಾವ ರೀತಿಯಲ್ಲೂ ನಿಷೇಧ ಹೇರಬಾರದು.
-ವಾರ್ತಾಭಾರತಿ  ಸಂಪಾದಕೀಯ
Please follow and like us:
error

Related posts

Leave a Comment