ಭಾಷೆ ಬಗ್ಗೆ ಅಭಿಮಾನವಿರಲಿ, ದುರಭಿಮಾನ ಬೇಡ : ಡಾ.ಸುರೇಶ ಬಿ.ಇಟ್ನಾಳ

 ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕಾದುದು ಅತ್ಯಂತ ಅವಶ್ಯಕವಾಗಿದ್ದು, ಮಾತೃ ಭಾಷೆಯ ಮೆಲೆ ಅಭಿಮಾನ ಇರಲಿ ಆದರೆ ದುರಭಿಮಾನ ಬೇಡ, ಭಾಷಾ ದುರಭಿಮಾನದಿಂದ ಭಾಷಾ ಸೌಹಾರ್ಧತೆಗೆ ಧಕ್ಕೆಯುಂಟಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡಿಗರು ವಿಶಾಲ ಮನೋಭಾವವನ್ನು ಹೊಂದಿದ್ದು, ಅನ್ಯ ಭಾಷಿಕರು ಸಹ ಈ ಮನೋಭಾವವನ್ನು ಹೊಂದಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಕರೆ ನೀಡಿದರು.
ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನದ ಅಂಗವಾಗಿ ಏರ್ಪಡಿಸಿದ್ದ ಭಾಷಾ ಸೌಹಾರ್ದತಾ ದಿನದ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನದನ್ವಯ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಈ ದಿಸೆಯಲ್ಲಿ ಭಾಷಾ ಸಾಮರಸ್ಯವು ಅತ್ಯಂತ ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದರು.
  ಭಾಷಾ ಸೌಹಾರ್ಧತೆ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ವಿಠ್ಠಪ್ಪ ಗೋರಂಟ್ಲಯವರು ಮಾತನಾಡಿ, ಅನೇಕತೆಯಲ್ಲಿ ಏಕತೆಯನ್ನು ಹೊಂದಿ ನಾವೆಲ್ಲರೂ ಒಂದು ಎನ್ನುವುದನ್ನು ಬಿಂಬಿಸಬೇಕು. ಬೇರೆ ಭಾಷೆಯಲ್ಲಿನ ಒಳ್ಳೆಯ ಅಂಶಗಳನ್ನು ನಮ್ಮ ಭಾಷೆಗೆ ತೆಗೆದುಕೊಂಡು ಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಪರಸ್ಪರರ ಭಾಷೆಗಳಿಗೆ ಗೌರವವನ್ನು ನೀಡಿ ಸಾಮರಸ್ಯವನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು. ಭಾಷಾ ಸೌಹಾರ್ಧತಾ ದಿನದ ಅಂಗವಾಗಿ ಕವಿಗೋಷ್ಠಿಯನ್ನು  ಏರ್ಪಡಿಸಲಾಗಿತ್ತು.  ಇದರಲ್ಲಿ ಕವಿಗಳಾದ ಅನ್ವರ ಹುಸೇನ್, ಕೆ.ಎಂ.ಆಲಿ, ಸಿರಾಜ್ ಬಿಸರಳ್ಳಿ, ಖದೀರ ಅಹ್ಮದರವರುಗಳು ಉರ್ದುಕವನಗಳನ್ನು, ಹಾಗೂ  ವಿ.ಬಿ.ರಡ್ಡೇರ್,  ವಿಠ್ಠಪ್ಪ ಗೋರಂಟ್ಲಿರವರುಗಳು ಕನ್ನಡ ಕವನಗಳನ್ನು ವಾಚಿಸಿದರು. ರಾಮಚಂದ್ರಪ್ಪ ಉಪ್ಪಾರ ಸಂಗೀತ ಕಾರ್ಯಕ್ರಮ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ಬಿ.ರಡ್ಡೇರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಟಿ.ಕೊಟ್ರಪ್ಪ ಅವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. 
Please follow and like us:
error