ಕುಮಾರರಾಮ ಮೂರ್ತಿ ಕಳ್ಳತನ ವಿಷಾದ

ಕೊಪ್ಪಳ, ಮೇ. ೨೨. ಹೈದರಾಬಾದ ಕರ್ನಾಟಕದ ದೈವಿ ಕ್ಷೇತ್ರ ಜಬ್ಬಲಗುಡ್ಡದ ಬಳಿಯ ಗಂಡುಗಲಿ ಕುಮಾರರಾಮನ ಮೂರ್ತಿ ಹಾಗೂ ಘಂಟೆ ಕಳ್ಳತನವನ್ನು ಮಂಜುನಾಥ ಜಿ. ಗೊಂಡಬಾಳ ತೀವ್ರವಾಗಿ ಖಂಡಿಸಿ ವಿಷಾಧಿಸಿದ್ದಾರೆ. 
 ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಗೊಂಡಬಾಳ, ಬಹಳ ದಿನಗಳ ನಿರಂತರ  ಹೋರಾಟ ಮಾಡುತ್ತ ಬಂದಿದ್ದರೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕನಸು ಕಂಡು ಹಕಕಬುಕ್ಕರ ಮೂಲಕ ಯಶಸ್ಸು ಕಂಡ ಕುಮಾರರಾಮನ ಕರ್ಮಭೂಮಿ ಕುಮ್ಮಟದುರ್ಗ ಅಭಿವೃದ್ಧಿ ಕಾಣುತ್ತಿಲ್ಲ, ಕಾರಣ ಈ ಕ್ಷೇತ್ರದ ಶಾಸಕರು ಬೇರೆ ಮತ್ತು ಸಂಬಂಧಿಸಿದ ತಾಲೂಕ ಬೇರೆಯಾಗಿದೆ.         ೨೦೦೭ ರಿಂದ ಮೂರು ವರ್ಷ ಸತತವಾಗಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕುಮ್ಮಟದುರ್ಗೋತ್ಸವ ಆಚರಿಸಿದಾಗಲೂ ಶಾಸಕ ದ್ವಯರುಗಳು ಆಗಮಿಸಲಿಲ್ಲ, ಒಬ್ಬರಿಗೆ ವ್ಯಾಪ್ತಿಯಲ್ಲ ಇನ್ನೊಬ್ಬರಿಗೆ ಮತದಾರರಲ್ಲ ಎಂಬ ತ್ರಿಶಂಖು ಸ್ಥಿತಿಯಿದೆ. ನಿಧಿಗಳ್ಳರಿಂದಾಗಿ ಮತ್ತು ಕಲ್ಲುಗಣಿಗಾರಿಕೆಯಿಂದಾಗಿ ಕುಮ್ಮಟದುರ್ಗದ ಸುತ್ತಲಿನ ಪ್ರದೇಶ ನಾಶವಾಗಿದೆ, ಹೋರಾಟದ ಫಲವಾಗಿ ಕಲ್ಲಗಣಿಗಾರಿಕೆ ನಿಲ್ಲಿಸಿದ್ದರೂ ಅಕ್ರಮವಾಗಿ ಈಗಲೂ ಅದು ನಡೆದಿರುವದು ದುರಂತವಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕೋಟೆಯ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾರಣ ಸಚಿವರು, ಶಾಸಕರು ಮತ್ತು ಜಿಲ್ಲಾ ಪಂಚಾಯತಿ ಪ್ರತಿನಿಧಿಗಳು ಕೊಪ್ಪಳ ಜಿಲ್ಲೆಯ ಹೆಮ್ಮೆಯ ಯುವರಾಜ ಕನ್ನಡತನ ಮೆರೆದ ಕುಮಾರರಾಮನ ರಕ್ಷಣೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು, ಜೂನ್ ೧ ರಂದು ಕುಮಾರರಾಮನ ಜಾತ್ರೆ ಇದ್ದು ತುರ್ತಾಗಿ ಕಾರ್ಯೋನ್ಮುಖರಾಗಿ ಈ ಬಾರಿಯ ಜಾತ್ರೆ ಸುಸೂತ್ರವಾಗಿ ನಡೆಯುವಂತೆ ಮಾಡಬೇಕು ಎಂದಿರುವ ಅವರು ಕುಮ್ಮಟದುರ್ಗೋತ್ಸವವನ್ನು ಪುನಃ ಆರಂಭಿಸುವದಾಗಿ ತಿಳಿಸಿದ್ದಾರೆ.

Leave a Reply