೧೭ರಂದು ಸಿನಿಬಳಗ ಉದ್ಘಾಟನೆ, ಸಿನಿಮಾ ಪ್ರದರ್ಶನ.

ಕೊಪ್ಪಳ-15- ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜ. ೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಕೊಪ್ಪಳ ಸಿನಿಬಳಗದ ಉದ್ಘಾಟನೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಜ ಎಸ್. ತಂಗಡಗಿ ಬಳಗ ಉದ್ಘಾಟಿಸಲಿದ್ದಾರೆ. ನಟ, ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳೀಕರ್, ಡಾ.ಅಶೋಕ್ ಪೈ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಬಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಕಾರ್‍ಯಕ್ರಮದ ಬಳಿಕ ಸುರೇಶ್ ಹೆಬ್ಳೀಕರ್ ಅವರ ಪ್ರಥಮ ಉಷಾಕಿರಣ ಚಿತ್ರ ಪ್ರದರ್ಶನ ನಡೆಯಲಿದೆ. ಸದಬಿರುಚಿಯ ಸಿನಿಮಾಗಳನ್ನು ಪ್ರದರ್ಶಿಸುವ, ಆಸಕ್ತರಿಗೆ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸುವ ಸಲುವಾಗಿ ಸಮಾನ ಮನಸ್ಕರ ಸಿನಿಬಳಗ ಹುಟ್ಟಿಕೊಂಡಿದೆ. ತಿಂಗಳ ಪ್ರತಿ ಮೂರನೇ ಭಾನುವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಒಂದು ಉತ್ತಮ ಚಲನಚಿತ್ರ ವೀಕ್ಷಿಸುವುದು, ಅದರ ಬಗ್ಗೆ ಸಂವಾದ ಕಾರ್‍ಯಕ್ರಮ ನಡೆಯಲಿದೆ. ಸಿನಿಮಾ ಆಸಕ್ತರಿಗೆ ಇಲ್ಲಿ ಮುಕ್ತ ಅವಕಾಶವಿದೆ. ಸಿನಿಮಾ ವೀಕ್ಷಣೆ ಅಥವಾ ಬಳಗದ ಸದಸ್ಯತ್ವಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸಿನಿಬಳಗದ ಸದಸ್ಯ ಪ್ರವೀಣ್ ಇಟಗಿ ತಿಳಿಸಿದ್ದಾರೆ.

Please follow and like us:
error