fbpx

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್


 ಸಂಪಾದನೆ: ಕೋ.ಚೆನ್ನಬಸಪ್ಪ   ಮೂಲ: ದಿ.ಶ್ರೀ.ತಿ.ತಾ.ಶರ್ಮ

ಹಿಂದುಗಳು ಶೃಂಗೇರಿ ಮಠ ಲೂಟಿ ಮಾಡಿದರು! ಮುಸ್ಲಿಮರು ಆ ಮಠ ಕಟ್ಟಿದರು!!

“ಪಾಶ್ಚಾತ್ಯ ಇತಿಹಾಸಕಾರನ ಅಭಿಪ್ರಾಯದಲ್ಲಿ ಮೈಸೂರಿನ ಅರಸ ಫತ್ತೆ ಆಲಿ ಟಿಪ್ಪು ಒಬ್ಬ ಮೂಢ, ಮೂರ್ಖ ಮುಸ್ಲಿಮ. ಅವನು ತನ್ನ ಪ್ರಜೆಗಳಾದ ಹಿಂದುಗಳನ್ನು ಹಿಡಿದು ಬಲವಂತವಾಗಿ ಇಸ್ಲಾಂ ಮತಕ್ಕೆ ಸೇರಿಸಿದ. ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆ. ಆಗ ಹಿಂದು-ಮುಸ್ಲಿಂಗಳ ಬಾಂಧವ್ಯ ಸ್ನೇಹಮಯವಾಗಿತ್ತು; ಇದು ಸತ್ಯಾಂಶ. ಟಿಪ್ಪುವಿನ ಜೀವನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು-ಅದೊಂದು ಅನಂದಮೂಲ; ಅದೊಂದು ಸ್ಫೂರ್ತಿಮೂಲ. ಆ ಕಾಲದಲ್ಲಿ ಹಿಂದುಗಳು ಮುಸ್ಲಿಮರು ಇಬ್ಬರೂ ತಮ್ಮ ಬಾಗಿಲ ಬಳಿಯ ಪರದೇಶಿ ಶತ್ರುವನ್ನು ನೋಡದೆ ಉದಾಸೀನ ಮಾಡಿದರು; ತಮ್ಮಲ್ಲಿ ತಾವೇ ಹೊಡೆದಾಡಲಾರಂಭಿಸಿದರು. ಮಹಾಪ್ರಭು ಆ ಟಿಪ್ಪುವಿನ ಮಹಾಮಂತ್ರಿಯಾದರೂ ಯಾರು? ಅವನೊಬ್ಬ ಹಿಂದು. ಸ್ವಾತಂತ್ರ ಪ್ರವಾದಿ ಈ ಟಿಪ್ಪುವನ್ನು ಶತ್ರಗಳಿಗೆ ಹಿಡಿದೊಪ್ಪಿಸಿದ ಸ್ವಾಮಿದ್ರೋಹಿ ಇವನೇ ಎಂಬುದನ್ನು ನಾನು ನಾಚಿಕೆಯಿಂದ ಒಪ್ಪಿಕೊಳ್ಳಬೇಕು” ಎಂಬುದಾಗಿ ಮಹಾತ್ಮ ಗಾಂಧೀಜಿ 1945ರಲ್ಲಿ ಟಿಪ್ಪು ಸ್ಮಾರಕೋತ್ಸವ ಸಂದರ್ಭದಲ್ಲಿ ದಿ.ಎಜೆ.ಖಲೀಲರಿಗೆ ಬರೆದರು.
ಪಾಶ್ಚಾತ್ಯ ಇತಿಹಾಸಕಾರರು ಬರೆದಂತೆ ಟಿಪ್ಪು ಮತ್ತು ಹೈದರ್ ಯಾವ ಮತವನ್ನೂ ದ್ವೇಷಿಸಿದವರಲ್ಲ. ಹಿಂದೂ ಧರ್ಮವನ್ನಂತೂ ಎಂದೂ ದ್ವೇಷಿಸಲಿಲ್ಲ. ಬದಲು ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವನ್ನು ಸದಾ ತೋರಿಸುತ್ತಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಅವರ ಈ ಸರ್ವಮತ ಸಹಿಷ್ಣುತೆ, ಹಿಂದೂಧರ್ಮಾಭಿಮಾನ ಟಿಪ್ಪುವಿನ ಮತ್ತು ಅವನ ತಂದೆಯ ಆಡಳಿತದ ಕಾಲದಲ್ಲಿ ಅನೇಕ ಹಿಂದೂ ಧರ್ಮಗುರುಗಳನ್ನು ಗೌರವಿಸಿದರು. ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದರು. ಅವರ ಈ ಉದಾರ ದೃಷ್ಟಿಯ ಅತ್ಯಂತ ಶ್ರೇಷ್ಠ ಉದಾಹರಣೆ ಅವರು ಶೃಂಗೇರಿ ಮಠದ ಜಗದ್ಗುರುಗಳಿಗೆ ಕೊಟ್ಟ ಕಾಣಿಕೆ, ಮರಾಠರು ಧ್ವಂಸ ಮಾಡಿದ ಶ್ರೀಶಾರದಾಂಬ ಮಂದಿರದ ಪುನರ್‌ನಿರ್ಮಾಣಕ್ಕೆ ಮಾಡಿದ ಧನ ಸಹಾಯ, ಆಗ ಬರೆದ ಪತ್ರಗಳಿಂದ ಕಾಣುತ್ತದೆ.
ಶೃಂಗೇರಿ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯರಿಗೆ ಹೈದರ್ ಮತ್ತು ಟಿಪ್ಪು ಇಬ್ಬರೂ ಅನೇಕ ಪತ್ರಗಳನ್ನು ಬರೆದಿದ್ದಾರೆ. ಆ ಪತ್ರಗಳೆಲ್ಲ ಕನ್ನಡದಲ್ಲಿವೆ.ಪತ್ರಗಳೊಂದೊಂದೂ ಶ್ರೀಗಳವರನ್ನು ಸಂಬೋಧಿಸುವ ಮರ್ಯಾದೆಗೆ ಆದರ್ಶ ಮಾದರಿಗಳಾಗಿವೆ. ಸಾಮಾನ್ಯವಾಗಿ ಪ್ರತಿಯೊಂದು ಪತ್ರವೂ: “ಶ್ರೀ ಮತ್ಪರಮಹಂಸಾದಿ ಯಥೋಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಟಿಪ್ಪು ಸುಲ್ತಾನ್ ಬಾದಶಹಾರವರ ಸಲಾಂ ಆದಾಗಿ” ಎಂದಾರಂಭವಾಗುತ್ತದೆ. ವೊದಲನೆಯ (ಪತ್ರ ೪೬) ಪತ್ರದಲ್ಲಿ ಸ್ವಾಮಿಗಳವರನ್ನು ಸಂಬೋಧಿಸಿ:
“ನೀವು ದೊಡ್ಡವರು, ತಪಸ್ವಿಗಳು; ಬಹುಜನ ಕ್ಷೇಮ, ಚಿಂತಿಸುವಂಥದು ನಿಮಗೆ ವಿಹಿತಧರ್ಮವಾದ ಕಾರಣ ಶತ್ರಗಳು ಯಾವತ್ತೂ ಪರಾಜಿತರಾಗಿ ಪಲಾಯನವಾಗುವ ಹಾಗೂ ಸ್ವದೇಶದ ಯಾವತ್ತೂ ಜನವೂ ಕ್ಷೇಮದಿಂದ ಇರುವ ಹಾಗೂ ನೀವು, ನಿಮ್ಮ ಬ್ರಾಹ್ಮಣರು ಸಹಿತವಾಗಿ ಈಶ್ವರ ಪ್ರಾರ್ಥನೆ ಮಾಡಿ ಸಕಲರೂ ಸುರಕ್ಷಿತವಾಗಿ ಇರುವ ಹಾಗೆ ಆಶೀರ್ವಾದ ಮಾಡಿಸಬೇಕು” ಎಂದು ಅರಿಕೆ ಮಾಡಿಕೊಳ್ಳುತ್ತಾನೆ.
ಮರಾಠಿಗರ ವಿದ್ರೋಹ
ಎರಡನೆಯ (೪೭) ಪತ್ರವೂ ಇತಿಹಾಸಿಕ ದೃಷ್ಟಿಯಿಂದ ಅಮೂಲ್ಯವಾದದ್ದು. ಅದನ್ನು ಇಲ್ಲಿ ಪೂರ್ಣವಾಗಿ ಕೊಡಲಾಗಿದೆ. “ಕಳುಹಿಸಿದ ಪತ್ರಿಕೆಯಿಂದ ಸಕಲಾಭಿಪ್ರಾಯವು ತಿಳಿಯಲಾಯಿತು. ಮರಾಟೇರ ಕಡೆ ಕುದುರೆಯವರು ಬಂದು ಶೃಂಗೇರಿಯಲ್ಲಿ ಇದ್ದ ಬ್ರಾಹ್ಮಣರು ಮುಂತಾದವರನ್ನು ಬಹಳ ಘಾತಪಾತಗಳ ಮಾಡಿ, ಶಾರದಾ ಅಮ್ಮನವರನ್ನು ಕಿತ್ತುಹಾಕಿ, ಮಠದಲ್ಲಿ ಇದ್ದ ಎಲ್ಲಾ ಸಾಮಾನು ತೆಗೆದುಕೊಂಡು ಹೋದ ಕಾರಣ, ನಾಲ್ಕು ಜನ ಶಿಷ್ಯರು ಸಹ ಕಾರಕಳಕ್ಕೆ ಬಂದು ಇರುವುದರಿಂದ ಶಾರದಾ ಅಮ್ಮನವರು ಯುಗಾಂತರದಲ್ಲಿ ಪ್ರತಿಷ್ಠೆ ಆದದ್ದೆ ಹೊರತು ಮತ್ತೊಂದಲ್ಲ.
ಈ ದೇವರ ಪ್ರತಿಷ್ಠೆ ಆಗಬೇಕಾದರೆ ಸರಕಾರದಿಂದ ಕುಮ್ಮಕ್ಕು ಆಗಿ ದೇವರ ಪ್ರತಿಷ್ಠೆ ಮಾಡಿಸಿದಲ್ಲಿ ಸೂರ್ಯಚಂದ್ರು ಉಳ್ಳ ಪರಿಯಂತರ  ಕೀರ್ತಿ ನಿಲ್ಲುತ್ತಾ ಇದ್ದೀತು. ಈ ಬಗೆ ದವಸ, ಜಿನಸು, ಸಹ ಕೊಡುವ ಹಾಗೆ ಅಪ್ಪಣೆ ಆದಲ್ಲಿ ಸಂತರ್ಪಣೆ ಮಾಡಿಸಿ, ಪ್ರತಿಷ್ಠೆ ಮಾಡಿಸುವುದಾಗಿ ಬರೆದು ಇದ್ದದು ಸರಿಯಷ್ಟೆ. ಅಂಥಾ ಸ್ಥಳಕ್ಕೆ ಈಗ್ಗೆ ದ್ರೋಹಿತನಾ ಮಾಡಿದ ಮೇಲೆ ಕಲಿಯುಗದಲ್ಲಿ ಮಾಡಿದ್ದನ್ನು ತ್ವರೆಯಿಂದಲೇ ಅವರು ಅನುಭವಿಸಬೇಕಾದೀತು.
ಗುರುದ್ರೋಹ ಮಾಡಿದಕ್ಕೆ ವಂಶ ನಾಶ ಆಗುವುದರಲ್ಲಿ ಸಂದೇಹವಿಲ್ಲ. ಈ ತುಂಟ ಜನರು ಪ್ರಜೆಗಳು ಮುಂತಾದವರಿಗೆ ಸಂಕಟಪಡಿಸುವುದು ನೀವು ಪ್ರತ್ಯಕ್ಷ ನೋಡಿಯೆ ಇದ್ದೀರಿ. ಇದಕ್ಕೆ ಅವರು ಯಾವ ಪ್ರಕಾರ ಕ್ಷೀಣಗತಿ ಆಗಬೇಕೋ ಆ ಮೇರೆಗೆ ಆಶೀರ್ವಾದ ಮಾಡುವುದು.” ಇದು ಟಿಪ್ಪು ಹಿಂದೂ ಮತದ್ವೇಷಿಯಲ್ಲವೆಂದು ಸಾರಿ ಹೇಳುತ್ತದೆ.
“ಪ್ರಕೃತ ಶಾರದಾ ಅಮ್ಮನವರ ಪ್ರತಿಷ್ಠೆ ಬಗ್ಗೆ ನಗದೂನು 200 ಇನ್ನೂರು ರಹತಿ, ದವಸಾನೂ 200 ಇನ್ನೂರು ರಹತಿ, ಉಭಯಂ ನಾನೂನು ರಹತಿ ಸರಕಾರದಿಂದ ಕೊಡುವ ಹಾಗೂ ಇದು ಹೊರತು ಇನ್ನೂ ಏನು ಜಿನಸು ಬೇಕಾದರೂ ಕ್ರಯಕ್ಕೆ ಕೊಡಿಸುವ ಹಾಗೆ ಸಹ ನಗರದ ಅಸಫನಿಗೆ ಮನಷೂರ್ ಮಲಪೂಫಿ ಮಾಡಿ ಕಳುಹಿಸಿ ಇದ್ದೀತಿ. ಮನಷೂರನ್ನು ಅಸಫನ ಬಳಿಗೆ ಕಳುಹಿಸಿ, ನಗದು-ದವಸ ಸಹ ತರಿಸಿಕೊಂಡು, ಸಂತರ್ಪಣೆ ಮಾಡಿಸಿ, ಶಾರದಾ ಅಮ್ಮನವರ ಪ್ರತಿಷ್ಠೆ ಮಾಡಿಸಿ, ದೇವರ ಸೇವೆಯು ನಡೆಯುವಂತೆ ಮಾಡಿಸುತ್ತಾ, ನಮ್ಮ ಶ್ರೇಯಸ್ಸು ಅಭಿವೃದ್ಧಿ ಆಗುವ ಹಾಗೂ ಶತ್ರುನಾಶ ಆಗುವ ಪ್ರಕಾರಕ್ಕೆ (ಸಹ) ತಪಸ್ಸು ಮಾಡಿಕೊಂಡು ಸ್ವಸ್ಥದಲ್ಲಿ ಇರುವಂತೆ ಮಾಡಿಸುವುದು”
ಇದು ಪರಮತ ದ್ವೇಷಿ, ಇಸ್ಲಾಂ ಮತಾಂಧತೆಯ ಲಕ್ಷಣವೆ? ಮೂರನೆಯ (೪೮) ಪತ್ರದಲ್ಲೂ ಮೇಲಿನ ಅಂಶವನ್ನೇ ಸೂಚಿಸಿ, “ತಮ್ಮ ಸ್ವಾರಿ ಬಗ್ಗೆ ಒಂದು ಪಾಲಕಿ, ಅದರ ಸರಂಜಾಮು ಸುದಾ ಕೊಡಿಸುವ ಹಾಗೆ ನಗರದ ಅಸಫನಿಗೆ ಬರೆಯಲಾಗಿದೆ”ಯೆಂದು ತಿಳಿಸಿ, “ಶತ್ರುನಾಶ ಆಗುವ ಪ್ರಕಾರ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಮೇರೆಗೆ ಆಶೀರ್ವಾದ ಮಾಡುತ್ತಾ ಬರಬೇಕು” ಎಂದು ಪ್ರಾರ್ಥನೆ ಮಾಡಿದ್ದಾನೆ.
‘’ರಾಜದ್ರೋಹ ಮಾಡಿದವರಿಗೆ ನಾಶ ವಾಗುವಂತೆ ಸಹ ಈಶ್ವರ ಧ್ಯಾನವನ್ನು ಮಾಡುವುದು. ಈಶ್ವರನ ಕಟಾಕ್ಷದಿಂದಲೂ ನಿಮ್ಮ ಅಶೀರ್ವಾದದಿಂದಲೂ ಲೋಕಕ್ಕೆ ಉಪದ್ರವ ಶೀಘ್ರ ಪರಿಹಾರವಾದೀತು” ಎಂಬುದಾಗಿ ಸಮಾಧಾನ ಪಡೆದಿರುವುದಲ್ಲದೆ ಟಿಪ್ಪುವು, “ಈಶ್ವರ ಧ್ಯಾನ ಏಕನಿಷ್ಠೆಯಿಂದ ಮಾಡುವ ಸಮಯದಲ್ಲಿ ಸರಕಾರ ಅಹಮ್ಮದಿಗೋಸ್ಕರ ಸಕಲ ಮನೋರಥ ಸಿದ್ದಿ ಆಗುವಂತೆ ಅಶೀರ್ವಾದ ಮಾಡುವುದು” ಎಂದಪೇಕ್ಷಿಸಿ ದ್ದಾನೆ. ಅವನ ಈ ಪತ್ರ ಹಿಂದೂ ದೈವದ ಬಗ್ಗೆ ಅವನಿಗಿದ್ದ ಅಪಾರ ಭಕ್ತಿಯನ್ನು ಉಚ್ಚ ಕಂಠದಿಂದ ಉದ್ಘೋಸಿಸುವುದಿಲ್ಲವೆ?
ಐದನೆಯ ಪತ್ರ (೫೦) ದಲ್ಲೂ ಸಹ-“ದಿನೇ ದಿನೇ ಜಯವಾಗುವ ಹಾಗೂ ಲೋಕಾನಿರಿಷ್ಟ ಪರಿಹಾರವಾಗುವ ಹಾಗೂ, ಜನರು ಸೌಖ್ಯವಾಗಿರುವಂತೆಯೂ, ಗುರುದ್ರೋಹ ವೊದಲಾದ ದ್ರೋಹಗಳ ಮಾಡಿದವರು ನಾಶ ಹೊಂದುವಂತೆ ಸಹ ಈಶ್ವರಧ್ಯಾನವನ್ನು ಏಕನಿಷ್ಠೆಯಿಂದ ಮಾಡುತ್ತಾ ಬರುವುದು” ಎಂದು ಬಯಸಿದ್ದಾನೆ.
ವಿನಯಶೀಲ ಟಿಪ್ಪು
ಶಾರದಾ ಅಮ್ಮನವರ ಪ್ರತಿಷ್ಠೆಗಾಗಿ ೪೦೦ ರಹತಿ ಕಳುಹಿಸಿದ್ದಾನೆ. ಮಠಕ್ಕಾಗಿ ‘ಸಲ್ಲಗೇಶ’ನೆಂಬ ಆನೆಯೊಂದನ್ನು ಕಳುಹಿಸಿದ್ದಾನೆ. ಶಾರದಾ ಅಮ್ಮನವರಿಗೆ ಒಂದು ಭಾರೀ ಸೀರೆ, ಕುಪ್ಪಸ, ಸ್ವಾಮಿಗಳಿಗೆ ಶಾಲುಜೋಡಿ ಕಳುಹಿಸುತ್ತಾನೆ. “ಮಠದ ವಿಷಯದಲ್ಲಿ ಸರಾಗವಾಗಿ ನಡೆಸಿಕೊಂಡು ಬರುವ ಹಾಗೆ ನಗರದ ಅಸಫಗೆ ಪರವಾನೆ ಕಳುಹಿಸಿ ಇದೆ” ಎಂಬುದಾಗಿ ಹೇಳುತ್ತಾನೆ! ಇಂತಹ ‘ವಿನಯಪರ’ನನ್ನು ಕುರಿತು ‘ಮದಾಂಧ’,   ‘ಮತಾಂಧ’, ‘ಹಿಂದೂ ಧರ್ಮದ್ವೇಷಿ’,  ಇತ್ಯಾದಿಯಾಗಿ ಹೇಳುವುದನ್ನು ನೋಡಿದರೆ ಪರಮಾಶ್ಚರ‍್ಯವಾಗುತ್ತದೆ.
ಆರನೆಯ ಪತ್ರ (೫೧) ಅಮೂಲ್ಯವಾದದ್ದು, “ರಾಜ್ಯಕ್ಷೋಭೆ ಪರಿಹಾರವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಬಗ್ಗೆ ಸರಕರದ ಶ್ರೇಯೋಭಿವೃದ್ಧಿ ಆಗಿ, ಶತ್ರುನಾಶ ಆಗಬೇಕೆಂದು ತಮ್ಮ ಚಿತ್ತಕ್ಕೆ ತಂದು, ಸಹಸ್ರ ಚಂಡಿ ಜಪ ಮಾಡಿಸಬೇಕೆಂದು ಬರೆಸಿ ಕಳುಹಿಸಿದ್ದು ನೋಡಿ, ಸಂತೋಷವಾಯಿತು. ಅದೇ ಪ್ರಕಾರ ಜಪ ಮಾಡತಕ್ಕ ಬಗ್ಗೆ ಬೇಕಾದ ಸಾಮಾನು ಯಾವತ್ತೂ ತರಿಸಿಕೊಡುವ ಹಾಗೆ ಹುಕುಂನಾಮೆ ಬರೆಸಿ, ಖಾಸ್ ದಸಕತ್ ವೊಹರ ಮಾಡಿ, ಅಸಫನ ಬಳಿಗೆ ಕಳುಹಿಸಿ ಇದ್ದೀತು” ಎಂದು ಟಿಪ್ಪು ಸುಲ್ತಾನ ಸ್ವಾಮಿಗಳಿಗೆ ಬರೆದಿದ್ದಾನೆ.
“ವಿಧ್ಯುಕ್ತವಾಗಿ ಜಪವನ್ನು ಮಾಡಿಸುತ್ತಾ, ಬ್ರಾಹ್ಮಣರಿಗೆ ದಕ್ಷಿಣೆ ಮುಂತಾಗಿ ಕೊಡಿಸಿ, ನಿತ್ಯದಲ್ಲೂ ಸಹಸ್ರ ಬ್ರಾಹ್ಮಣರು ಭೋಜನವನ್ನು ಆಗುವ ಹಾಗೆ ಮಾಡಿಸಿ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಹಾಗೂ ಶತ್ರುನಾಶವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಪ್ರಕಾರ ಜಪ ಮಾಡಿಸುವ ಹಾಗೆ ಮಾಡುವುದು” ಎಂದೂ “ಈಶ್ವರ ಪ್ರಾರ್ಥನೆ ಮಾಡಿ ಸರ್ವದಾ ಆಶೀರ್ವಾದ ಮಾಡುವಂತೆ ಮಾಡಿಸುವುದು” ಎಂದೂ ಆಶಿಸಿದ್ದಾನೆ. ಜಪವನ್ನು ಸಾಂಗವಾಗಿ ನೆರವೇರಿಸಲು ತುಂಟರು ಬಂದು ಮಠಾಧಿಕಾರಿಗಳಿಗೆ ತೊಂದರೆ ಮಾಡದಂತೆ ಬಂದೋಬಸ್ತ್ ಮಾಡುವ ಹಾಗೆ ಮಹ್ಮದ್ ರಜಾಗೆ ಪರವಾನೆ ಕಳುಹಿಸಿರುವುದಾಗಿ ಎಂಟನೆ ಪತ್ರ (೫೩) ತಿಳಿಸುತ್ತದೆ.
ಒಂಬತ್ತನೆಯ ಪತ್ರ (೫೪)ದಿಂದ ಅಮೂಲ್ಯ ಅಂಶಗಳು ತಿಳಿದು ಬರುತ್ತವೆ. “ಮಠದಿಂದ ಅರವತ್ತು ಲಕ್ಷ ರೂಪಾಯಿ ಸಾಮಾನು ಲೂಟಿಸಿ ಹೋಗಿ ಇರುವುದು ಕೊಟ್ಟು ಕಳುಹಿಸಿದ್ದೀರಷ್ಟೆ. ಈ ತಾಕೀತಿ ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು, ಎಂಬುದಾಗಿ ಕೇಳುವುದು. ಸಾಮಾನು ಕೊಟ್ಟರೆ ಸರಿ; ಇಲ್ಲವಾದರೆ ತಾಕೀತಿ ಹಿಂದಕ್ಕೆ ತೆಗೆದುಕೊಂಡು, ಸಾಬೀತು ಅಪ್ಪಣೆ ಕೊಡಿಸಿ ಇರುವ ಮೇರೆಗೆ ಮುಂದೆ ಸಾಗಿ ಹೋಗುವ ಹಾಗೆ ಸಹ ಬರೆದು ಕಳುಹಿಸುವುದು” ಎಂಬುದಾಗಿ ಬರೆದಿರುವುದನ್ನು ಕಂಡರೆ ಮರಾಠರು ಮಠದಿಂದ ಅರವತ್ತು ಲಕ್ಷ ರೂಪಾಯಿಗಳವರೆಗೆ ಲೂಟಿ ಮಾಡಿದರೆಂಬುದೂ, ಅದರಿಂದ ಟಿಪ್ಪುವಿಗೆ ಬಹಳ ವ್ಯಥೆಯಾಯಿತೆಂಬುದೂ ಸ್ಪಷ್ಟವಾಗುತ್ತದೆ. ಪುಣೆಯ ಪೇಶ್ವೆಗೆ ಬರೆದು ಪರಿಹಾರ ಪಡೆಯುವವರೆಗೂ ಸುಲ್ತಾನ್ ಹೋಗಿದ್ದಾನೆ!
ಹತ್ತನೆಯ ಪತ್ರ (೫೫)ದಲ್ಲೂ ಮಠದ ಲೂಟಿ, ಪರಶುರಾಮ, ಪೇಶ್ವೆ ರಘುನಾಥ ರಾವ್ ಇವರಿಗೆ ಕಳುಹಿಸಿದ ತಾಕೀತುಗಳು, ಸ್ವಾಮಿಗಳು ಸಮುದ್ರ ಸ್ನಾನಕ್ಕೆ ಹೋಗಲು ಜಮಾಲಾಬಾದ್ ಅಸಫನಿಗೆ ಪರವಾನೆ  ರಹದಾರಿ ಕೊಟ್ಟಿದ್ದು-ಇವೆಲ್ಲ ಅಂಶಗಳೂ ತಿಳಿಯುತ್ತವೆ.
ಹನ್ನೊಂದನೆಯ ಪತ್ರ (೫೬) ದಲ್ಲಂತೂ ಟಿಪ್ಪು, “ನೀವು ದೊಡ್ಡವರು ತಪಸ್ವಿಗಳು, ಇದ್ದೀರಿ, ಬಂದಿರುವಂಥಾ ಮೂರು ಮಂದಿ ಶತ್ರುಗಳು ನಾಶ ಹೊಂದುವಂತೆಯೂ ಸರಕಾರದ ಕ್ಷೇಮ ಆಗುವ ರೀತಿಗೆ ಸಹ ತ್ರಿಕಾಲದಲ್ಲೂ ಈಶ್ವರ ಪ್ರಾರ್ಥನೆ ಮಾಡುತ್ತಾ ಬರಬೇಕು” ಎಂದು ಹೇಳುತ್ತಾನೆ. ಆ ಮೂರು ಮಂದಿ ಶತ್ರುಗಳು ಯಾರೆಂದರೆ ಮರಾಠರು, ನಿಜಾಮರು, ಇಂಗ್ಲಿಷರು-ಈ ಪತ್ರದಿಂದ ವ್ಯಕ್ತವಾಗುವುದು ಅವನು ಪರಮ ದೇಶಭಕ್ತನಾಗಿದ್ದ, ದೇಶದ್ರೋಹಿಗಳಾದ ಮುಸ್ಲಿಂ ನಿಜಾಮರ, ಹಿಂದೂ ಮರಾಠರ ವಿನಾಶಕ್ಕಾಗಿ ಹೋರಾಡಿದ ಎಂಬುದು.
ಹದಿಮೂರನೆಯ ಪತ್ರವೂ (೫೮) ಗಮನಾರ್ಹವಾಗಿದೆ.
“ನಮ್ಮ ಸರಕಾರದಲ್ಲಿ ನಲವತ್ತೈವತ್ತು ಸಾವಿರ ಬ್ರಾಹ್ಮಣರು ರೋಜುಗಾರೆ ಮೇರೆ ಇರುವುದರಿಂದ ಅವರಲ್ಲಿ ಸ್ವರ್ಣಸ್ತೇಯ, ವೊದಲಾದ ಕಳ್ಳತನ, ಸುರಾಪಾನ, ಬ್ರಹ್ಮಹತ್ಯ ವೊದಲಾದ ಪಾಪಗಳ ಮಾಡಿದವರಿಗೆ ವಿಚಾರಿಸಿ ಸರಕಾರದಿಂದ ಶಿಕ್ಷೆ ಮಾಡಿಸಬೇಕಾಗುತ್ತಾ ಇದ್ದೀತು… ನಿಮ್ಮ ಮಠದ ಶಿಷ್ಯರು ಯಾರಾದರೂ ಮೇಲೆ ಬರೆದ ಪ್ರಕಾರ ಏನು ಶಿಕ್ಷೆ ಮಾಡಿಸಬೇಕೋ ಆ ಪ್ರಕಾರ ಮಾಡಿಸುವ ಬಗ್ಗೆ ನಿಮ್ಮ ಮಠದಿಂದ ಒಬ್ಬ ಬುದ್ದಿವಂತನ ಮಠಮುದ್ರೆಗೆ ನೇಮಕ ಮಾಡಿಸಿ ಕಳುಹಿಸಿದಲ್ಲಿ ಸದರಿ ಬರೆದ ಮೇರೆಗೆ ಯಾರಾದರೂ ಮಾಡಿದಂಥವರಿಗೆ ಬಹಿಷ್ಕಾರ ಹಾಕಿ, ಶಾಸ್ತ್ರದಲ್ಲಿ ಇದ್ದ ರೀತಿಗೆ ಶಿಕ್ಷೆ ಮಾಡಿಸುವಂತೆ ನೇಮಕ ಮಾಡಿ ಕಳುಹಿಸುವುದು.”
‘ಶಾಸನ ಸಮ್ಮತ’ವಾಗಿ ಸ್ವರ್ಣಸ್ತೇಯಿ, ಸುರಾಪಾನಿಗಳನ್ನು ವಿಚಾರಣೆಗೆ ಗುರಿಪಡಿಸಿ, ಶಿಕ್ಷೆ ವಿಧಿಸುವ ಅಧಿಕಾರ ಸರಕಾರದ್ದು, ಆದರೆ ಟಿಪ್ಪು ಸ್ವಾಮಿಗಳಿಗೆ ‘ಶಾಸ್ತ್ರ ಸಮ್ಮತ’ವಾಗಿ ಮಠಮುದ್ರೆ ಆ ಅಧಿಕಾರ ಮಾಡಲೆಂದು ಹೇಳುತ್ತಾನೆ! ಇದು ಮತಾಂಧನ ಲಕ್ಷಣವೆ? ಆಂಗ್ಲ ಇತಿಹಾಸಕಾರರು ಅವನನ್ನು ಹಿಂದೂ ಮತದ್ವೇಷಿಯೆಂದು ಚಿತ್ರಿಸಿದ್ದು ಶುದ್ಧ ಸುಳ್ಳು.
ಮಠದ ಲೂಟಿ ಸಂಬಂಧದಲ್ಲಿ ಸ್ವಾಮಿಗಳು ತಾವೇ ಪುಣೆಗೆ ಹೋಗುವುದಾಗಿ ಟಿಪ್ಪುವಿಗೆ  ಹದಿನಾರನೆ ಪತ್ರ (61)ದಲ್ಲಿ ತಿಳಿಸಿದರು. ಟಿಪ್ಪು ಆಗಬಹುದೆಂದು ಹೇಳುತ್ತಾ:“ಇದೇ ಮಾರ್ಗವಾಗಿ ಬಂದು ಇಲ್ಲಿ ನಮಗೂ ದರುಶನವನ್ನು ಕೊಟ್ಟು, ನಂಜನಗೂಡು ಮುಂತಾದ ದೇವರ ದರುಶನವನ್ನೂ ಮಾಡಿಕೊಂಡು ಹೋಗಬಹುದು. ಅಗತ್ಯವಾಗಿ ಇಲ್ಲಿಯ ಪರಿಯಂತ್ರ ದಯಮಾಡಿ ಸಾಗಿ ಬರುವ ಹಾಗೆ ಮಾಡಿಸುವುದು. ತಾವು ಇಲ್ಲಿಗೆ ಸಾಗಿ ಬರುವುದಕ್ಕೆ ನಗಾರಿ ಸಾಮಾನಿಗೆ ಸಹ ಒಂಟೆ ೨ ಮಾರ್ಗದಲ್ಲಿ ಹಲ್ಲು, ಅಡುಗಬ್ಬು, ಸಹ ಕೊಡುವ ಹಾಗೆ ಒಟ್ಟು ಪರವಾನೆ, ಸಮೀಪದಲ್ಲಿ ಕಾದು ಇರುವುದಕ್ಕೆ ಇಬ್ಬರು ಹರಿಕಾರರನ್ನು ಸಹ ಕಳುಹಿಸಿ ಇದೀತಾಗಿ” ಎಂದು ವಿವರಿಸುತ್ತಾನೆ. 

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್; ಭಾಗ-2

 ಶೃಂಗೇರಿ ಶ್ರೀಗಳ ಬಗ್ಗೆ ಭಕ್ತಿ ಗೌರವ ಕಾತರ
ಸ್ವಾಮಿಗಳು ದೇಶ ಬಿಟ್ಟು ಹೋದ ಮೇಲೆ ಟಿಪ್ಪು ಬರೆದ ಹದಿನೇಳನೆ ಪತ್ರ(62)ದಲ್ಲಿ “ನೀವು ಇಲ್ಲಿಂದ ಸಾಗಿಹೋಗಿ ಬಹಳ ದಿವಸವಾಗಿ ಇಲ್ಲಿ ಈವರೆಗೂ ಒಂದು ಕಡೆ ಸೇರಿದ ಸಮಾಚಾರ ಬರಲಿಲ್ಲವಾದ್ದರಿಂದ ಬರೆಸಿ ಕಳುಹಿಸಿ” ಎಂದು ತನ್ನ ಕಾತರತೆ, ಸ್ವಾಮಿಗಳ ವಿಚಾರದಲ್ಲಿ ತನಗಿರುವ ಪ್ರೇಮವನ್ನು ಸೂಚಿಸುತ್ತಾನೆ. “ತಮ್ಮಂಥ ದೊಡ್ಡವರು ಯಾವ ದೇಶದಲ್ಲಿ ಇದ್ದರೆ ಆ ದೇಶಕ್ಕೆ ಮಳೆ, ಬೆಳೆ, ಸಕಲವೂ ಆಗಿ ಸುಭಿಕ್ಷವಾಗಿ ಇರತಕ್ಕದ್ದರಿಂದ ಪರಸ್ಥಳದಲ್ಲಿ ಬಹಳ ದಿವಸ ತಾವು ಯಾತಕ್ಕೆ ಇರಬೇಕು? ಹೋದ ಕೆಲಸವನ್ನು ಕ್ಷಿಪ್ರದಲ್ಲಿ ಅನುಕೂಲ ಮಾಡಿಕೊಂಡು, ಸ್ಥಳಕ್ಕೆ ಸಾಗಿ ಬರುವಂತೆ ಮಾಡಿಸುವುದು” ಎಂಬುದಾಗಿ ಹದಿನೆಂಟನೆ ಪತ್ರ (63)ದಲ್ಲಿ ಸ್ವಾಮಿಗಳ ವಿಚಾರದಲ್ಲಿ ತನ್ನ ಹೃದಯವನ್ನು ಬಿಚ್ಚಿ ತೋರಿಸಿದ್ದಾನೆ. “ತಾವು ಜಗದ್ಗುರುಗಳು, ಸರ್ವಲೋಕಕ್ಕೂ ಕ್ಷೇಮವಾಗಬೇಕು” ಅನ್ನುತ್ತಾನೆ. ಹತ್ತೊಂಬತ್ತನೆ ಪತ್ರ (64)ದಲ್ಲಿ ಹಿಂದಕ್ಕೆ ಬರಲು ಸ್ವಾಮಿಗಳು ಕೇಳಿದ ರಹದಾರಿ ಯನ್ನು ಕಳುಹಿಸುತ್ತಾ ಸುಲ್ತಾನ “ಬಹು ಸಂತೋಷ ವಾಯಿತು. ಮನೆ ತಮ್ಮದು ಇದ್ದೀತು.
ರಹದಾರಿಯನ್ನು ಕಳುಹಿಸಿ ಇದ್ದೀತಾಗಿ ತಾವು ಸಾಗಿಬರುವುದಾಗಿ ಮಾಡಿಸುವುದು” ಎಂಬ ಮಾತು ಕೇಳಿದ ಕೂಡಲೇ ಕಣ್ಣುಗಳಿಂದ ಹನಿಗಳುದುರುತ್ತವೆ.ಕಡೆಯ ಎರಡು ಪತ್ರಗಳಲ್ಲಿ ಟಿಪ್ಪುವಿನ ಮತ್ತೊಂದು ಸ್ವರೂಪ ದರ್ಶನವಾಗುತ್ತದೆ. ಯಾರೇ ಆಗಲಿ ಹೆಮ್ಮೆ ಪಡಲೇಬೇಕು. ಇಪತ್ತನೆಯ ಪತ್ರ (65)ದ ಈ ವಚನ ಪಾಲಿಸಿ: “ನಮ್ಮ ಮನಸ್ಸಿನಲ್ಲಿ ಮೂರು ಬಲದ ಮೇಲೆ ಅಹಂಕಾರ ಇದೆ. ಅದು ಏನು ಅಂದರೆ ಮೊದಲು ಈಶ್ವರ ದಯಪೂರ್ಣವಾಗಿ ಇರುವುದು ಒಂದು.
ಎರಡನೇದು ನಿಮ್ಮಂಥ ಗುರುಗಳ ಆಶೀರ್ವಾದ ಇರುವುದು.  ಮೂರನೇದು ಆಯುಧಗಳು ಇರುವುದು. ಈ ಮೂರರಲ್ಲಿ ಈಶ್ವರ ಜಯ ಕೊಡಬೇಕಾದರೆ ನಿಮ್ಮಂಥ ದೊಡ್ಡವರ ಆಶೀರ್ವಾದದಿಂದಲೇ ಜಯವಾಗಬೇಕು” ಈ ಮಾತುಗಳು ಹಿಂದೂ ಧರ್ಮ ದ್ವೇಷಿ, ಸ್ವಮತಾಂಧನ  ಬಾಯಿಂದ ಬರುವ, ಲೇಖನಿಯಿಂದ ಬರೆಯುವ ಮಾತುಗಳೆ? ಈ ಪತ್ರಗಳಿಂದ ಟಿಪ್ಪು ಸುಲ್ತಾನನಂತಹ ಆಸ್ತಿಕ ಶಿರೋಮಣಿ ಇನ್ನೊಬ್ಬನುಂಟೆ ಅನ್ನಿಸುತ್ತದೆ. ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಅದೆಂತಹ ಭಕ್ತಿ, ಪೂಜ್ಯಭಾವ, ಯೋಗಕ್ಷೇಮ ಕಾತುರ!
ಆಂಗ್ಲ ಚರಿತ್ರಕಾರರು ಟಿಪ್ಪು ಒಬ್ಬ ‘ಪೆಂಡಭೂತ’ವೆಂಬುದಾಗಿ ವರ್ಣಿಸಿ ತಮ್ಮ ನೀಚತನವನ್ನು ಪ್ರಕಟಿಸಿಕೊಂಡಿದ್ದಾರಷ್ಟೇ, ಬ್ರಿಟಿಷರ ಕಡು ವೈರಿಯಾಗಿದ್ದ ಭಾರತದ ಸ್ವಾತಂತ್ರ ಯೋಧನಾದ ಟಿಪ್ಪು ಅನ್ನು ಬ್ರಿಟಿಷ್ ಚರಿತ್ರಕಾರರು ಹಿಂದೂ ದ್ವೇಷಿಯೆಂದು ವಿಷಬೀಜ ಬಿತ್ತಿದಂತೆ, ದೇಶದ ಸ್ವಾತಂತ್ರ ಸಮರದಲ್ಲಿ ಪಾಲ್ಗೊಳ್ಳದ ಸಂಘಪರಿವಾರ ಇಂದು ಟಿಪ್ಪು ಅನ್ನು ಹಿಂದೂ ಧರ್ಮದ್ವೇಷಿಯೆಂದು ಅಪಪ್ರಚಾರ ಮಾಡುತ್ತಿರುವುದು ವಿಪಯಾ೯ಸ.
ದ್ರೋಹದಲ್ಲಿ ಹುಟ್ಟಿದ್ದು ಆಂಗ್ಲ ಪ್ರಭುತ್ವ; ಹಿಂಸೆಯೇ ಬ್ರಿಟಿಷ್ ರಾಜ್ಯಭಾರದ ಪರಮಬಲ. ಬ್ರಿಟಿಷ್ ಸಾಮ್ರಾಜ್ಯವು ಹೇಳಹೆಸರಿಲ್ಲದೆ ನಾಶವಾದದ್ದು ಆಂಗ್ಲರ ಅವಿವೇಕದಿಂದ ಮಾತ್ರವಲ್ಲ ಅನ್ಯಾಯ, ಅನೀತಿ, ಆಧರ್ಮದಿಂದ.
ಆಂಗ್ಲ ಚರಿತ್ರಕಾರರು ಸುಳ್ಳು ಸೃಷ್ಟಿಸಿ, ಸುಳ್ಳು ಪ್ರಚಾರ ಮಾಡಿ, ತಮ್ಮ ರಾಜ್ಯವನ್ನು ಭದ್ರಪಡಿಸಿಕೊಳ್ಳಬೇಕಾಯಿತು, ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬೇಕಾಯಿತು.
“ಸತ್ಯಮೇವ ಜಯತೆ ನಾನ್ಯತಂ” ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿ ಬಂತು, ಟಿಪ್ಪು ಸುಲ್ತಾನನಿಂದ; ದೇಶೀಯವಾದ ಬಾಪುವಿನಿಂದ.
ಅಪ್ರತಿಮ ದೇಶಭಕ್ತ ಟಿಪ್ಪು
ಬ್ರಿಟಿಷರ ಸಿಂಹಸ್ವಪ್ನ
“ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆ ಯಲ್ಲಿ ಅಭಿಮಾನವುಳ್ಳ ಯಾವೊಬ್ಬನಿಗೂ ಫ್ರೆಂಚ್ ಸರಕಾರ, ಗತಿಸಿದ ಟಿಪ್ಪು ಸುಲ್ತಾನ ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ ಆದ ದಂಡಯಾತ್ರೆಯ ಯೋಜನೆಯನ್ನು, ಉದಾಸೀನ ಭಾವ ದಿಂದ ವಿಚಾರ ಮಾಡಲಾಗದು. ಭಾರತದಲ್ಲಿ ಬ್ರಿಟಿಷರ ಹೆಸರನ್ನು ಬೇರುಸಹಿತ ಕಿತ್ತು ಹಾಕುವುದೇ ಆ ಭಯಂಕರ ಯೋಜನೆಯ ಉದ್ದೇಶವಾಗಿತ್ತಲ್ಲದೆ ಮತ್ತೇನಲ್ಲ”
“ನಮ್ಮ ಅದೃಷ್ಟ; ಅವರ ಯೋಜನೆಗಳೆಲ್ಲ ನಮಗೆ ಗೊತ್ತಾದುವು; ಅವು ಫಲಿಸುವುದಕ್ಕೆ ವೊದಲೇ ಅವುಗಳನ್ನೆಲ್ಲ ಎದುರಿಸಿ, ನಿವಾರಿಸಿದ್ದಾಯಿತು. ಇಲ್ಲವಾಗಿದ್ದರೆ ಭಾರತದಲ್ಲಿ ಈ ಕ್ಷಣ ಭದ್ರತೆ, ಸುಖ, ಶಾಂತಿಯ ಚಿತ್ರವಿರುತ್ತಿರಲಿಲ್ಲ; ಪ್ರಾಣ ಭಯ, ಸರ್ವನಾಶ, ಪ್ರಳಯ ಚಿತ್ರ ಕ್ಷಣಕ್ಷಣ ಬರುತ್ತಿತ್ತು.
ನೆಪೊಲಿಯನ್ ಬೊನಾಪಾರ್ಟಿ ಕೈರೋ ನಗರ ಮುಟ್ಟುವುದಕ್ಕೆ ಮುನ್ನ, ಸುಯೇಜ್ ಬಳಿ ಅವನಿಗೆ ಸಾಕಷ್ಟು ಸಾರಿಗೆ ಸೌಕರ್ಯ ದೊರೆತಿದ್ದರೆ, ತನ್ನ ಸೈನ್ಯದ, ಆರಿಸಿದ ಹತ್ತು ಸಾವಿರ ಯೋಧರನ್ನು ಮಲಬಾರ ಕರಾವಳಿಗೆ ಕಳುಹಿಸುತ್ತಿದ್ದ; ಅವರೆಲ್ಲ ಟಿಪ್ಪು ಸುಲ್ತಾನನ ಕೈಗೆ ಸಿಗುತ್ತಿದ್ದರು, ಅಲೆಗ್ಜಾಂಡ್ರಿಯದಲ್ಲಿ ಫ್ರೆಂಚರ ಸೈನ್ಯ ಬಂದಿಳಿಯಿ ತೆಂಬ ಸುದ್ದಿ ನಮಗೆ ಬಂದ ಕೂಡಲೇ “ಮೈಸೂರಿನಲ್ಲಿ ಸಂಗ್ರಾಮ” ಎಂಬ ಪುಸ್ತಕದಲ್ಲಿ ಹೇಳಿದ್ದಾನೆ. (War in Mysore. p: 1800) …..ಮುಂದುವರಿಯುವುದು.
                                                                                                                                 – varthabharati

Please follow and like us:
error

Leave a Reply

error: Content is protected !!