ರೈತರ ನೆರವಿಗೆ ಧಾವಿಸಿದ ಮೇಧಾ ಪಾಟ್ಕರ್

ಗದಗ: ಜಿಲ್ಲೆಯ ಹಳ್ಳಿಗುಡಿಯ ರೈತರು ಭೂ ಸ್ವಾಧೀನದ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ಅರಿತ ಸಾಮಾಜಿಕ ಹೋರಾಟಗಾರರಾದ ಮೇಧಾ ಪಾಟ್ಕರ್, ರೈತರಿಗೆ ಬೆಂಬಲ ಸೂಚಿಸಿ ಅವರ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದರು.

ಗ್ರಾಮಕ್ಕೆ ಪ್ರವೇಶಿಸಿದ ತಕ್ಷಣವೇ ಮನೆಯೊಂದರ ಮುಂದಿನ ಕಟ್ಟಿ ಮೇಲೆ ನಿಂತಿದ್ದ ಮಹಿಳೆಯರನ್ನು ಮಾತನಾಡಿಸಿದರು. ನೀವು ಭೂಮಿ ಕೊಡಲು ತಯಾರಿದ್ದೀರ? ಎಂದು ಹಿಂದಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಮಹಿಳೆಯರು ನಮ್ಮ ಪ್ರಾಣ ಹೋದರು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಕನ್ನಡದಲ್ಲಿಯೇ ಉತ್ತರ ನೀಡಿದರು.

ನಂತರ ಊರಿನ ಪ್ರಮುಖ ಬೀದಿಯಲ್ಲಿ ನಡೆದುಕೊಂಡು ಹೊರಟ ಮೇಧಾ ಅವರು, ರಸ್ತೆ ಬದಿಯಲ್ಲಿ ತಮ್ಮನ್ನು ನೋಡಲು ನಿಂತಿದ್ದ ಮಹಿಳೆಯರನ್ನು ಕರೆದು ಮಾತನಾಡಿಸಿದರು.

ಬಸವೇಶ್ವರ ಗುಡಿಯಲ್ಲಿ ನಡೆದ ರೈತ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಭೋಪಾಲ್ ದುರಂತ ಬಗ್ಗೆ ಮನೋಜ್ಞವಾಗಿ ವಿವರಿಸಿದರು. ದೇಶದಲ್ಲಿ ಭೂಮಿ ಕಳೆದುಕೊಂಡು ನಿರಾಶ್ರಿತರಾದ ರೈತರ ಗೋಳಿನ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು.

ಭೂಮಿಯನ್ನು ಕಳೆದುಕೊಳ್ಳಲು ಯಾರು ಸಿದ್ಧರಾಗಬೇಡಿ. ಅದು ನಮಗೆ ಅನ್ನ ನೀಡುವ ತಾಯಿ ಎಂದು ಭಾವನಾತ್ಮಕವಾಗಿ ನುಡಿದರು. ಅಂತಿಮವಾಗಿ `ಭೂಮಿಯನ್ನು ಕೊಡಲು ತಯಾರಿಲ್ಲ ಎನ್ನುವ ರೈತರು ಕೈ ಎತ್ತಿ` ಎಂದರು. ಇಡೀ ಸಭೆಗೆ ಸಭೆಯೇ ಕೈ ಎತ್ತಿ ತಮ್ಮ ಬೆಂಬಲ ಸೂಚಿಸಿತು.

ಸಭೆಯಲ್ಲಿ ಮಾಜಿ ಶಾಸಕ ಜಿ.ಎಸ್. ಪಾಟೀಲ, ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ, ವೈ.ಎನ್. ಗೌಡರ, ಬಸವರಾಜ ಸೂಳಿಬಾವಿ ಮತ್ತಿತರರು ಹಾಜರಿದ್ದರು.

ಸಿಸಿಪಿ, ಮೇಧಾ ಪಾಟ್ಕರ್ ಮುಖಾಮುಖಿ: ರೈತರ ಸಭೆಯನ್ನು ಮುಗಿಸಿಕೊಂಡು ಹಳ್ಳಿಗುಡಿಯಿಂದ ಹೊರಟ ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಶ್ರೀಶೈಲಪ್ಪ ಬಿದರೂರ ಗ್ರಾಮದ ಹೊರಗೆ ಬರುವ ಸಮಯದಲ್ಲಿಯೇ ಗದುಗಿನಿಂದ ಬಂದ ಮೇಧಾ ಪಾಟ್ಕರ್ ಎದುರುಗೊಂಡರು. ತಕ್ಷಣ ಕಾರಿನಿಂದ ಇಳಿದ ಸಚಿವ ಸಿ.ಸಿ.ಪಾಟೀಲ ಪಾಟ್ಕರ್ ಜತೆ ಕೆಲ ಹೊತ್ತು ಮಾತನಾಡಿದರು.

ಒಡಿಶಾದಲ್ಲಿ ಪೋಸ್ಕೊ ಕಂಪೆನಿಯನ್ನು ಹೊರ ಹಾಕಲು ಬಿಜೆಪಿಯ ರಾಷ್ಟ್ರೀಯ ನಾಯಕರೇ ಪ್ರತಿಭಟನೆ ನಡೆಸಿದ್ದಾರೆ. ಅಂತಹ ಕಂಪೆನಿಯನ್ನು ಕರ್ನಾಟಕಕ್ಕೆ ಬಿಜೆಪಿಯವರು ಹೇಗೆ ಸ್ವಾಗತ ಮಾಡಿದೀರಿ? ಎಂದು ಮೇಧಾ ಅವರು ಸಿ.ಸಿ. ಪಾಟೀಲರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಾಟೀಲರು, ತಾವು ಪೂರ್ವಾಪರ ವಿಚಾರ ನಡೆಸಿದ್ದೇವೆ. ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳುವುದಿಲ್ಲ ಎಂದರು.

Please follow and like us:
error