ಸೈಯ್ಯದ್ ಪೌಂಡೇಷನ್‌ನಿಂದ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ
ಕೊಪ್ಪಳ, ೧೬- ನಗರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಇಲ್ಲಿನ ಕೆ.ಎಂ.ಸೈಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಶಾಲಾ ಮಕ್ಕಳಿಗೆ ನೋಟಬುಕ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಸಮೀಪದ ಅಗಳಕೇರಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು.
ಪ್ರಥಮ ಬಾರಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ಮಾತನಾಡಿ, ಟ್ರಸ್ಟ್ ವತಿಯಿಂದ ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಸದುದ್ದೇಶವನ್ನು ತಾವು ಹೊಂದಿರುವುದಾಗಿ ಹೇಳಿದರು.
ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಆದ್ದರಿಂದ ವಿದ್ಯಾರ್ಥಿಗಲು ನಿಸ್ವಾರ್ಥ ಬದುಕನ್ನು ನಿಮ್ಮದಾಗಿಸಿಕೊಳ್ಳಬೇಕು. ಸಮಾಜ ಸುಧಾರಣೆಗೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಸಮಾಜ ನಮಗೇನು ಕೊಟ್ಟಿತೆನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಉನ್ನತ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಉನ್ನತ ವಿಚಾರಗಳನ್ನು ಹೊಂದುವುದರೊಂದಿಗೆ ಸಮಾಜದ ಏಳ್ಗೆಗಾಗಿ ದುಡಿದು, ಗುರಿ ಸಾಧಿಸುವ ಛಲವಂತರಾಗಿ. ಕೇವಲ ಸಾಧನೆ ಮಾಡಿದರೆ ಸಾಲದು, ಸಮಾಜಕ್ಕೆ ನಿಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದ ಅವರು, ನಮ್ಮ ಟ್ರಸ್ಟ್ ವತಿಯಿಂದ ಆರಂಭಿಸಿರುವ ಈ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕ್ರೀಡಾ ಪಟುಗಳ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಟ್ರಸ್ಟ್ ಯಾವಾಗಲು ಕಟಿಬದ್ಧವಾಗಿದೆ. ನೀವೆಲ್ಲ ಒಳ್ಳೆ ಪ್ರಜೆಗಳಾಗಿ ರೂಪುಗೊಂಡು, ಪಾಲಕರಿಗೆ, ಶಿಕ್ಷಕ ಸಮುದಾಯಕ್ಕೆ ಕೀರ್ತಿ ತರಬೇಕು. ಕೇವಲ ಹಣ ಗಳಿಕೆಯೊಂದೆ ಉದ್ದೇಶವಾಗಬಾರದು. ಸಮಾಜ ಸುಧಾರಣೆಗೆ, ದೀನ ದಲಿತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುವ ಉದಾತ್ತ ಮನೋಭಾವ ಹೊಂದಬೇಕೆಂದು ಕೆ.ಎಂ.ಸೈಯ್ಯದ್ ಕಳಕಳಿಯ ಮನವಿ ಮಾಡಿದರು.
ಅಗಳಕೇರಾ ಗ್ರಾಮದ ಕೆ.ಎಂ.ಸೈಯ್ಯದ್ ಅಭಿಮಾನಿಗಳ ಬಳಗವನ್ನು ಇದೇ ಸಂದರ್ಭದಲ್ಲಿಯೇ ಉದ್ಘಾಟಿಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಕನಕಗಿರಿ ಅಧ್ಯಕ್ಷತೆ ವಹಿಸಿದ್ದರು. ಸೈಯ್ಯದ್ ಅಭಿಮಾನಿಗಳ ಬಳಗದ ಅಧ್ಯಕ್ಷ ರಾಜಶೇಖರ ನಾಯಕ, ದೇವರಾಜ.ಸಿ.ಕೆ, ವಿ.ಟಿ.ಪಾಟೀಲ, ಆನಂದ ಕಾರಟಗಿಮಠ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಣ್ಣ ಹುಣಶ್ಯಾಳ, ಮುಖ್ಯಗುರು ವೆಂಕಪ್ಪ, ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು, ಸೈಯ್ಯದ್ ಅಭಿಮಾನಿ ಬಳಗದ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply