ಮಕ್ಕಳ ಹಕ್ಕುಗಳ ಛಾಯಾಚಿತ್ರ ಸ್ಪರ್ಧೆ; ಪ್ರಕಾಶ ಕಂದಕೂರ ಪ್ರಥಮ

ಕೊಪ್ಪಳ ನ.೨೦ :

ದ.ಕ.ಜಿಲ್ಲೆಯ ಮಂಗಳೂರಿನ ಶಾಂತಿ ಸಂದೇಶ ಮಕ್ಕಳ ಹಕ್ಕುಗಳ ಸಂಪನ್ಮೂಲ ಮತ್ತು ಅಭಿವೃದ್ಧಿ ಕೇಂದ್ರವು ಭಾರತದಲ್ಲಿ ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ ಆಯೋಜಿಸಿದ್ದ. ಚೈಲ್ಡ್ ರೈಟ್ಸ್ ಫೋಕಸ್-೨೦೧೪ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರಕಾಶ ಕಂದಕೂರ ಸೆರೆ ಹಿಡಿದ ಛಾಯಾಚಿತ್ರಕ್ಕೆ ೧೫ ಸಾವಿರ ರೂಪಾಯಿಗಳ ನಗದು ಪುರಸ್ಕಾರ ಒಳಗೊಂಡಿರುವ ಪ್ರಥಮ ಬಹುಮಾನ ದೊರೆತಿದೆ.

ಮಣಿಯಬೇಕು ಬಿಲ್ಲಿನಂತೆ; ಬಾಟಲಿಯ ಬಾಯಿಗೆ ಬಾಲಕಿಯು ಬಾಯೊಡ್ಡಿದರೆ ಸಿಕ್ಕೀತು ಒಂದು ರೂಪಾಯಿ  ಶೀರ್ಷಿಕೆಯ ಛಾಯಾಚಿತ್ರವು ಡೊಂಬರಾಟದ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಚಕ್ರಾಸನದಲ್ಲಿ ಬಾಗಿ ಬಾಟಲಿಯೊಂದರ ಮೇಲಿಟ್ಟಿರುವ ಒಂದು ರೂಪಾಯಿಯ ನಾಣ್ಯವನ್ನು ಹಲ್ಲಿನಲ್ಲಿ ಕಚ್ಚಿ ಹಿಡಿದು ಮೇಲಕ್ಕೇಳುವ ಸಾಹಸಮಯ ಸಂದರ್ಭವನ್ನು ಅತ್ಯಂತ ಪರಿಣಾಮಕಾರಿಯಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.ಮಕ್ಕಳ ಹಕ್ಕುಗಳ ಸ್ಥಿತಿಗತಿಯನ್ನೂ ಸಹ ಸಾರಿ ಹೇಳುವಂತಿದೆ.
ಹಿರಿಯ ಛಾಯಾಗ್ರಾಹಕರಾದ ಯಜ್ಞ ಆಚಾರ್ಯ,ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಪ್ರಧಾನ ವರದಿಗಾರ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್, ಹಾಗೂ ಜಾಹೀರುತಾದಾರರಾದ ಟೈಟಸ್ ನರ‍್ಹೋನ  ತೀರ್ಪುಗಾರರ ಮಂಡಳಿಯಲ್ಲಿದ್ದರು.ಸ್ಪರ್ಧೆಗೆ ಬಂದಿದ್ದ ೧೫೦ ಕ್ಕೂ ಹೆಚ್ಚು ಛಾಯಾಚಿತ್ರಗಳಲ್ಲಿ ತೀವ್ರ ಪೈಪೋಟಿ ಇತ್ತು.ಅವುಗಳಲ್ಲಿ ಪ್ರಕಾಶ ಕಂದಕೂರ ಸೆರೆಹಿಡಿದ ಛಾಯಾಚಿತ್ರ ತೀರ್ಪುಗಾರರ ಮನಗೆದ್ದು ವೃತ್ತಿಪರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಇದೇ ೨೭ ರಂದು ಮಂಗಳೂರಿನಲ್ಲಿ ನಡೆಯಲಿರುವ ಮಕ್ಕಳ ಹಕ್ಕುಗಳ ೨೫ ಸಂವತ್ಸರಗಳು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಪ್ರತಿಭಾವಂತ ಛಾಯಾಗ್ರಾಹ ಪ್ರಕಾಶ ಕಂದಕೂರ ಅವರ ಸಾಧನೆಗೆ ತಿರುಳ್ಗನ್ನಡ ಕ್ರಿಯಾ ಸಮಿತಿಯ ರಾಜಶೇಖರ ಅಂಗಡಿ,ಮಂಜುನಾಥ ಡಿ.ಡೊಳ್ಳಿನ,ಗಿರೀಶ ಪಾನಘಂಟಿ,ಬಸವರಾಜ ಕರುಗಲ್,ಬಸವರಾಜ ಬಿನ್ನಾಳ,ಜಿ.ಎಸ್.ಗೋನಾಳ,ಶಿವರಾಜ ನುಗಡೋಣಿ ಮತ್ತಿತರರು ಹರ್ಷ ವ್ಯಕ್ತ ಪಡಿಸಿದ್ದಾರೆ.

Leave a Reply