fbpx

ನ. ೦೮ ರಂದು ಈಶಾನ್ಯದ ಐಸಿರಿ ೮ ನೇ ಸಂಚಿಕೆ ಪ್ರಸಾರ.

ಕೊಪ್ಪಳ ಅ. ೩೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೮ ನೇ ಸಂಚಿಕೆ ನ. ೦೮ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
     ೮ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ. ಖಮರುಲ್ ಇಸ್ಲಾಂ ಅವರು ಇತ್ತೀಚಿಗೆ ಜನಮನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದ ಧ್ವನಿ ಮುದ್ರಣ ಮೂಡಿ ಬರಲಿದೆ.  ಲಿಂಗಸುಗೂರಿನ ಶಾಸಕರಾಗಿರುವ ಮಾನಪ್ಪ ವಜ್ಜಲ ಅವರು ತಮ್ಮ ಮತ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಕಂಡಿರುವ ಕನಸುಗಳ ಮೆಲುಕು ಹಾಕಲಿದ್ದಾರೆ.  ಯಾದಗಿರಿಯ ಸಾಹೇಬಗೌಡ ವಾಯ್. ಬಿರಾದಾರ ಅವರು ಸಮಾಜ ವಿಜ್ಞಾನದ ಸುಲಭ ಕಲಿಕೆಗಾಗಿ ಸರಳ ಸೂತ್ರಗಳನ್ನು ಸಿದ್ಧಮಾಡಿದ್ದಾರೆ. ಆ ಸೂತ್ರಗಳ ಬಗ್ಗೆ ಅವರು ಹೇಳಲಿದ್ದಾರೆ.
      ಪರಿಣಿತ ಗುಂಪಿನ ಮಹಿಳೆಯರು ಅರಿಷಿಣದ ಔಷಧೀಯ ಮಹತ್ವ. ದೀಪಾವಳಿಗಾಗಿ ವಿಶೇಷ ತಿನಿಸುಗಳ ತಯಾರಿಕೆ ಕುರಿತು ಮಾಹಿತಿ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಮದರ್ ತೆರೇಸಾ ಕುರಿತು ಚರ್ಚಿಸಲಿದ್ದಾರೆ.  ಭಾಲ್ಕಿ ತಾಲೂಕು ನಂಜವಾಡ ಗ್ರಾಮದ ಹಿರಿಯ ಪ್ರತಿಭಾವಂತ ಕಲಾವಿದ ತುಳಸಿರಾಮ ಬಿ. ಸುತಾರ ಅವರು ಆಲದ ಎಲೆಗಳಿಂದ ನಡೆಸುವ ಸುಮಧುರ ಸಂಗೀತ ತೇಲಿ ಬರಲಿದೆ. ಊರು-ಟೂರಿನಲ್ಲಿ ಈ ಸಲ ಬಸವಕಲ್ಯಾಣ ಹಾಗೂ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮಗಳ ಬಗ್ಗೆ ಪರಿಚಯವಿದೆ. ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ ೧೪ ರಂದು ಲಂಡನ್‌ನಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದು, ಆ ಬಗ್ಗೆ ಈ ಸಲದ ಊರು -ಟೂರಿನಲ್ಲಿ ವಿಶೇಷ ವರದಿ ಇದೆ.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ.
ಸರಣಿಯ ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು ವಹಿಸಿಕೊಂಡಿದ್ದಾರೆ  ಎಂದು ನಿಲಯದ ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ತಿಳಿಸಿದ್ದಾರೆ.
ನ.೦೭ ರಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಉದ್ಘಾಟನೆ.
ಕೊಪ್ಪಳ, ನ.೦೬ (ಕ ವಾ)  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪರಿಶಿಷ್ಟ ವರ್ಗದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ನ.೦೭ ರಂದು ಮಧ್ಯಾಹ್ನ ೨.೩೦ ಕ್ಕೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
       ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕುಷ್ಟಗಿ ಶಾಸಕ ದೊಡ್ಡನಗೌಡ ಹೆಚ್.ಪಾಟೀಲ್ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್.ಆಂಜನೇಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ಬಸವರಾಜ ರಾಯರೆಡ್ಡಿ, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ವಿನಯಕುಮಾರ ಮೇಲಿನಮನಿ, ಕುಷ್ಟಗಿ ತಾಲೂಕಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಎಂ.ತುರಾಯಿ, ಉಪಾಧ್ಯಕ್ಷೆ ಶರಣಮ್ಮ ಅಂಗಡಿ, ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದಗೌಡ ಪಾಟೀಲ್, ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ, ಉಪಾಧ್ಯಕ್ಷೆ ಮಂಜುಳಾ ಪೊಲೀಸ್ ಪಾಟೀಲ್, ತಾಲೂಕಾ ಪಂಚಾಯತ್ ಸದಸ್ಯೆ ಸುವರ್ಣಮ್ಮ ಚಕ್ರಸಾಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ ಬಡೇರಿಯಾ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆರ್.ಹಿರೇಮಠ, ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವಿಣ ಕುಮಾರ ಜಿ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ ಅವರು ತಿಳಿಸಿದ್ದಾರೆ.
ನ.೧೦ ರಿಂದ ಕುರಿ ಮತ್ತು ಮೇಕೆಗಳಿಗೆ ಲಸಿಕಾ ಕಾರ್ಯಕ್ರಮ.
ಕೊಪ್ಪಳ, ನ.೦೬ (ಕ ವಾ) ಕೊಪ್ಪಳ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಎರಡನೇ ಸುತ್ತಿನ ಎನ್.ಸಿ.ಪಿ.ಪಿ.ಪಿ.ಆರ್ ಯೋಜನೆಯಡಿಯಲ್ಲಿ ಕುರಿ ಮತ್ತು ಮೇಕೆಗಳಿಗೆ ಪಿ.ಪಿ.ಆರ್ ರೋಗನಿರೋಧಕ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ನ.೧೦ ರಿಂದ ೨೫ ರವರೆಗೆ ಹಮ್ಮಿಕೊಳ್ಳಲಾಗಿದೆ.
     ಲಸಿಕಾ ಕಾರ್ಯಕ್ರಮದಡಿ ಹೊಸದಾಗಿ ಹುಟ್ಟಿದ ಮತ್ತು ಈ ಹಿಂದಿನ ಸುತ್ತುಗಳಲ್ಲಿ ಬಿಟ್ಟುಹೋದ ಕುರಿ ಮತ್ತು ಮೇಕೆಗಳಿಗೆ ಉಚಿತವಾಗಿ ಪಿ.ಪಿ.ಆರ್ ರೋಗನಿರೋಧಕ ಲಸಿಕೆಯನ್ನು ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ಕುರಿ ಸಾಕಾಣಿಕೆ ಮಾಡುತ್ತಿರುವ ರೈತ ಬಾಂಧವರು ತಮ್ಮಲ್ಲಿರುವ ಹೊಸದಾಗಿ ಹುಟ್ಟಿದ ಮತ್ತು ಈ ಹಿಂದಿನ ಸುತ್ತುಗಳಲ್ಲಿ ಬಿಟ್ಟುಹೋದ ಕುರಿ ಮತ್ತು ಮೇಕೆಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಪಶುಪಾಲನಾ ಇಲಾಖೆ ಉಪನಿರ್ದೇಶಕರು, ದೂ.ಸಂ : ೦೮೫೩೯-೨೨೦೦೨೩, ಗಂಗಾವತಿ ಪಶುಪಾಲನಾ ಇಲಾಖೆ ಉಪನಿರ್ದೇಶಕರು, ದೂ.ಸಂ : ೦೮೫೩೩-೨೭೧೩೨೪, ಕುಷ್ಟಗಿ ಪಶುಪಾಲನಾ ಇಲಾಖೆ ಉಪನಿರ್ದೇಶಕರು, ದೂ.ಸಂ : ೦೮೫೩೬-೨೬೭೧೦೪, ಯಲಬುರ್ಗಾ ಪಶುಪಾಲನಾ ಇಲಾಖೆ ಉಪನಿರ್ದೇಶಕರು, ದೂ.ಸಂ : ೦೮೫೩೪-೨೨೦೪೫೭, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿದೇಶಕ ಡಾ. ಭಾಸ್ಕರ ನಾಯಕ್ ಅವರು ತಿಳಿಸಿದ್ದಾರೆ. 
ನಗರಸಭೆಯಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ.
ಕೊಪ್ಪಳ, ನ.೦೬ (ಕ ವಾ) ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಶೇಕಡಾ ೭.೨೫ ಮತ್ತು ಶೇಕಡಾ ೩ ರ ಎಸ್.ಎಫ್.ಸಿ ಹಾಗೂ ನಗರಸಭೆ ನಿಧಿಗಳ ನಗರ ಬಡ ಜನರ ಕಲ್ಯಾಣ ಕಾರ್ಯಕ್ರಮ ಸೇರಿದಂತೆ ಶೇಕಡಾ ೪೦ ರಷ್ಟು ವ್ಯಕ್ತಿ ಸಂಬಂಧಿತ ಅನುಕೂಲತೆಗಳ ಕಾರ್ಯಕ್ರಮಗಳಡಿಯಲ್ಲಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಸೌಲಭ್ಯಗಳ ವಿವರ ಇಂತಿದೆ.  ನಗರಸಭೆಯ ಶೇಕಡಾ ೭.೨೫ ರ ಎಸ್.ಎಫ್.ಸಿ ನಿಧಿಯಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಎಸ್.ಎಸ್.ಎಲ್.ಸಿ ವ್ಯಾಸಾಂಗ ಮಾಡುತ್ತಿರುವ ೪೦ ವಿದ್ಯಾರ್ಥಿಗಳಿಗೆ, ಪಿ.ಯು.ಸಿ/ಉದ್ಯೋಗ ಆಧಾರಿತ/ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿರುವ ೪೦ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎ/ಬಿ.ಎಸ್.ಸಿ/ಬಿ.ಕಾಂ/ಇತರೆ ಪದವೀಧರ ವ್ಯಾಸಂಗ ಮಾಡುತ್ತಿರುವ ೩೦ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ.೨,೦೦೦, ರೂ.೩,೦೦೦ ಮತ್ತು ರೂ.೪,೦೦೦ ಗಳ ವಿಶೇಷ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲಿಚ್ಛಿಸುವವರು ಅರ್ಜಿ ನಮೂನೆಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯ ಗುರುತಿನ ಚೀಟಿ, ಶುಲ್ಕ ಪಾವತಿಸಿದ ರಸೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಖಾಯಂ ರಹವಾಸಿ ಪತ್ರ, ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ, ಹಿಂದಿನ ವರ್ಷ ತೇರ್ಗಡೆಯಾದ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಸಲ್ಲಿಸಬಹುದಾಗಿದೆ.
     ಶೇಕಡಾ ೭.೨೫ ರ ನಗರಸಭೆ ನಿಧಿಯಿಂದ ಬಡತನ ರೇಖೆಗಿಂತ ಕೆಳಗಿರುವ ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಶಸ್ತ್ರ ಚಿಕಿತ್ಸೆಗಾಗಿ ರೂ.೯,೦೦೦ ಗಳನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲಿಚ್ಛಿಸುವವರು ಅರ್ಜಿ ನಮೂನೆಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಖಾಯಂ ರಹವಾಸಿ ಪತ್ರ, ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ, ಯಶಸ್ವಿ ಯೋಜನೆಯಲ್ಲಿ ಗುರುತಿಸಿದ ಆಸ್ಪತ್ರೆಯಿಂದ ಶಸ್ತ್ರ ಚಿಕಿತ್ಸೆ ಕೈಗೊಳ್ಳಬಹುದಾದ ಚಿಕಿತ್ಸೆಯ ವಿವರ ಮತ್ತು ತಗುಲುವ ಅಂದಾಜು ವೆಚ್ಚದ ಪ್ರಮಾಣ ಪತ್ರ, ಆಸ್ಪತ್ರೆಯ ವಿವರವಾದ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಸಲ್ಲಿಸಬಹುದಾಗಿದೆ.
     ಶೇಕಡಾ ೩ ರ ಎಸ್.ಎಫ್.ಸಿ ಮತ್ತು ನಗರಸಭೆ ನಿಧಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ೧೫ ಜನ ವಿಕಲಚೇತನರಿಗೆ ರೂ.೨೦,೦೦೦ (ಸೆಪ್ಟಿಕ್ ಟ್ಯಾಂಕ್ ಸಹಿತ) ಅಥವಾ ರೂ.೧೫.೦೦೦ (ಯುಜಿಡಿ ಸಂಪರ್ಕ ಸಹಿತ) ಗಳನ್ನು ನೀಡಲಾಗುತ್ತಿದ್ದು, ಅದೇ ರೀತಿ ವೈಯಕ್ತಿಕ ನಳ ಸಂಪರ್ಕ ಪಡೆದುಕೊಳ್ಳಲು ೧೧ ಜನ ವಿಕಲಚೇತನರಿಗೆ ರೂ.೨,೫೦೦ ಗಳನ್ನು ನೀಡಲಾಗುತ್ತಿದೆ. ಈ ಎರಡು ಯೋಜನೆಗಳಡಿ ಅರ್ಜಿ ಸಲ್ಲಿಸಲಿಚ್ಛಿಸುವವರು ಅರ್ಜಿ ನಮೂನೆಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಖಾಯಂ ರಹವಾಸಿ ಪತ್ರ, ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ, ಅಂಗವಿಕಲ ಗುರುತಿನ ಪ್ರಮಾಣ ಪತ್ರ, ಸ್ವಂತ ಮನೆ ಹೊಂದಿದ ಬಗ್ಗೆ ದಾಖಲೆ, ನಳ ಸಂಪರ್ಕ ಇಲ್ಲದ ಕುರಿತು ಧೃಢೀಕರಣ ಪತ್ರ, ಮನೆಗೆ ಶೌಚಾಲಯ ಇಲ್ಲದಿರುವ ಕುರಿತು ಫೋಟೋ ಮತ್ತು ದೃಢೀಕರಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಸಲ್ಲಿಸಬಹುದಾಗಿದೆ.
     ಮೇಲ್ಕಾಣಿಸಿದ ಸೌಲಭ್ಯಗಳಡಿ ದಾಖಲಾತಿಗಳೊಂದಿಗಿನ ನಿಗದಿತ ಅರ್ಜಿ ನಮೂನೆಗಳನ್ನು ನಗರಸಭೆಗೆ ಸಲ್ಲಿಸಲು ನ.೨೧ ರ ಸಂಜೆ ೦೫ ಗಂಟೆ ಕೊನೆ ದಿನಾಂಕವಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ, ದೂರವಾಣಿ ಸಂಖ್ಯೆ : ೦೮೫೩೯-೨೩೦೧೯೨ ಇವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟೇದಾರ್ ತಿಳಿಸಿದ್ದಾರೆ.
ಕಾನ್ಸ್‌ಟೇಬಲ್ ಹುದ್ದೆ ಪರೀಕ್ಷೆ ಅಭ್ಯರ್ಥಿಗಳಿಗೆ ಎಚ್ಚರಿಕೆ.
ಕೊಪ್ಪಳ, ನ.೦೬ (ಕ ವಾ) ನಾಗರೀಕ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಗಾಗಿ ನ.೦೮ ರಂದು ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಹಾಜರಾಗಲಿರುವ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಭರವಸೆಗಳಿಗೆ ಮಾರುಹೋಗದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ||ಕೆ. ತ್ಯಾಗರಾಜನ್ ಅವರು ಎಚ್ಚರಿಸಿದ್ದಾರೆ.  
     ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ನಡೆಯಲಿರುವ ಈ ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿಯ ಆಧಾರದ ಮೇಲೆ ನಡೆಯುತ್ತದೆ. ಈ ಹಿನ್ನೆಯಲ್ಲಿ ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ  ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ಅಥವಾ ಯಾವುದೇ ವಿಧವಾದ ಪಾರಿತೋಷಕ ನೀಡುವುದನ್ನು ಮಾಡಬಾರದು. ಅಲ್ಲದೇ ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಕೆ. ತ್ಯಾಗರಾಜನ್ ಅವರು ಎಚ್ಚರಿಕೆ ನೀಡಿದ್ದಾರೆ.         
ನ.೧೧ ರಂದು ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ.
ಕೊಪ್ಪಳ, ನ.೦೬ (ಕ ವಾ)  ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದ ನಾಗರಿಕ/ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್-೨೦೧೫ ರ ವಿಶೇಷ ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನ.೧೧ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨.೩೦ ರವರೆಗೆ  ಏರ್ಪಡಿಸಲಾಗಿದೆ.
     ರೂಲ್ ಸಂಖ್ಯೆವಾರು ಲಿಖಿತ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿದ್ದು ವಿವರ ಇಂತಿದೆ. ರೂಲ್ ನಂಬರ್ ೭೦೪೦೦೦೧ ರಿಂದ ೭೦೪೦೮೦೦ ರವರೆಗಿನ ಅಭ್ಯರ್ಥಿಗಳು ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾ ವಿದ್ಯಾಲಯದಲ್ಲಿ ಹಾಗೂ ೭೦೪೦೮೦೧ ರಿಂದ ೭೦೪೦೯೮೦ ರವರೆಗಿನ ಅಭ್ಯರ್ಥಿಗಳು ಶ್ರೀ ಶಾರದಮ್ಮ ವ್ಹಿ ಕೊತಬಾಳ, ಬಿಬಿಎಂ, ಬಿಸಿಎ, ಮತ್ತು ಬಿಕಾಂ ಮಹಾ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಲಿಖಿತ ಪರೀಕ್ಷೆಗಳನ್ನು ಬರೆಯಬೇಕು. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,  ಅಲ್ಲದೆ, ಲಿಖಿತ ಪರೀಕ್ಷೆಗೆ ಅರ್ಹತೆ ಗಳಿಸಿದ ಅಭ್ಯರ್ಥಿಗಳ ಪಟ್ಟಿ ಹಾಗೂ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಸಹ ಈ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ.
     ಕರೆ ಪತ್ರವನ್ನು ಪಡೆಯದೇ ಇರುವವರಿಗೆ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರೆ ಪತ್ರ, ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಫಲಿತಾಂಶ ಪತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ||ಕೆ.ತ್ಯಾಗರಾಜನ್ ಅವರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!