fbpx

ಅತೀವೃಷ್ಟಿ : ಪರಿಹಾರ ಕಾರ್ಯ ಕೈಗೊಳ್ಳಲು ಟಿ.ಕೆ.ಅನಿಲ್ ಕುಮಾರ ಸೂಚನೆ

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅತೀವೃಷ್ಟಿಯಿಂದಾಗಿ ಮನೆ ಹಾನಿಗಳಿಗೆ ನೀಡುವ ಪರಿಹಾರ ಕಾರ್ಯ ತ್ವರಿತಗೊಳಿಸಬೇಕು ಹಾಗೂ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ನಿಖರವಾಗಿ ಬೇಗನೆ ಪೂರೈಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ಅವರು ಸಂಬಂಧಿಸಿದ ಕೃಷಿ ಇಲಾಖೆ ಹಾಗೂ ನಾಲ್ಕು ತಾಲೂಕಿನ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲೆಯ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಆದ ಮನೆ ಕುಸಿತ ಮತ್ತು ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ನಂತರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆಯಿಂದಾಗಿ ಜಿಲ್ಲೆಯಲ್ಲಿ ೧೪೫೭ ಮನೆಗಳು ಭಾಗಶಃ ಹಾನಿಯಾಗಿದ್ದು, ಅದರಲ್ಲಿ ಕೊಪ್ಪಳ ತಾಲೂಕಿನಲ್ಲಿ ೬೦, ಗಂಗಾವತಿ ತಾಲೂಕಿನಲ್ಲಿ ೪೫೦, ಕುಷ್ಟಗಿ ತಾಲೂಕಿನಲ್ಲಿ ೪೮೭, ಯಲಬುರ್ಗಾ ತಾಲೂಕಿನಲ್ಲಿ ೪೬೦ ಮನೆಗಳು ಹಾನಿಯಾಗಿದ್ದು, ಇಂದಿನಿಂದಲೇ ಸಂಬಂಧಿಸಿದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯ ಕೈಗೊಳ್ಳಬೇಕು. ಆಯಾ ಫಲಾನುಭವಿಗಳಿಗೆ ನೇರವಾಗಿ ಚೆಕ್ ವಿತರಿಸುವ ಕೆಲಸವಾಗಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಓರ್ವ ಮಹಿಳೆ ಮೃತಪಟ್ಟಿದ್ದು ರೂ.೧.೫೦,೦೦೦ ಸಾವಿರ ಪರಿಹಾರದ ಚೆಕ್ ವಿತರಿಸಲಾಗಿದೆ, ಅಲ್ಲದೇ ೮ ಜಾನುವಾರುಗಳು ಅಸುನೀಗಿವೆ. ಕೃಷಿ ಬೆಳೆಗಳಾದ ಭತ್ತ, ಸಜ್ಜೆ, ಮುಸುಕಿನಜೋಳ, ಹತ್ತಿ, ಸೂರ್ಯಕಾಂತಿ, ಹತ್ತಿ, ಕಬ್ಬು, ಎಳ್ಳು ತೊಗರಿ, ನವಣಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಜಿಲ್ಲೆಯಲ್ಲಿ ೬೨೨.೭೮ ಹೆಕ್ಟರ್‌ನಷ್ಟು ಕೃಷಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ೫.೪೦ ಕೋಟಿ ರೂ. ಅಧಿಕ ಸಾರ್ವಜನಿಕ ಆಸ್ತಿ ಅಪಾರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ರಸ್ತೆ, ಸೇತುವೆ, ಕೆರೆ, ಕೆನಾಲ್, ವಿದ್ಯುತ್ ಸೇರಿವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ಅವರು ತಿಳಿಸಿದರು. 
ಮಳೆಯಿಂದಾಗಿ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಲ್ಲುವ ನೀರು, ಕುಡಿಯುವ ನೀರಿನಲ್ಲಿ ಅಸ್ವಚ್ಛತೆ ಕಾರಣದಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಾಗೃತಿಯ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. 
ನಂತರ ಕೃಷಿ ಇಲಾಖೆಯ ಅಧಿಕಾರಿ ಮಾತನಾಡಿ, ೨೦೧೪ ರ ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯಿಂದ ೩೬೯.೫೨೦ ಹೆಕ್ಟೆರ್ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಕೊಪ್ಪಳ-೧೫೩.೦೮೦, ಕುಷ್ಟಗಿ-೧೯೪.೫೨೦, ಯಲಬುರ್ಗಾ-೪.೦೦೦, ಗಂಗಾವತಿ-೧೮೪.೭೬೦ ಹೆಕ್ಟೆರ್ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಅಂದಾಜು ಮೊತ್ತ ೨೫೧.೦೯೦ ಹಾನಿಯಾಗಿದ್ದು, ರೂ.೪೦.೭೬೩ ಲಕ್ಷದಷ್ಟು ಪರಿಹಾರ ಮೊತ್ತ ವಿತರಿಸಲಾಗಿದೆ. ಮಳೆಯಿಂದ ೫೯೪ ರೈತರು ಹಾನಿಗಿಡಾಗಿದ್ದಾರೆ. ಇನ್ನೂ ಮಳೆಯಿಂದ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು. 
ನಂತರ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್-೨೦೧೪ ತಿಂಗಳಿಗೆ ೩೭೬೨೬ ಅಂತ್ಯೋದಯ ಹಾಗೂ ೨,೧೯,೨೦೫ ಬಿಪಿಎಲ್ ಒಟ್ಟು ೨,೫೬,೮೩೧ ಪಡಿತರ ಚೀಟಿದಾರರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.  ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಡಿತರ ಚೀಟಿ ಪಡೆಯದೇ ಇರುವ ಕುಟುಂಬಗಳಿಗೆ ಹೊಸ ಪಡಿತರ ಚೀಟಿ ಪಡೆಯಲು ಪಟ್ಟಣ ಪ್ರದೇಶದಲ್ಲಿ ಪ್ರಾಂಚೈಸಿಗಳ ಮೂಲಕ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾ.ಪಂ.ಗಳ ಮೂಲಕ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಇಂದಿನವರೆಗೆ ೭೭,೭೨೮ ಅರ್ಜಿಗಳು ಹೊಸ ಪಡಿತರ ಚೀಟಿ ಕೋರಿ ಬಂದಿದ್ದು, ಇವುಗಳ ಪೈಕಿ ೩೨,೬೫೮ ಅರ್ಜಿಗಳನ್ನು ಸರ್ಕಾರ ರೂಪಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗಿರುತ್ತದೆ. ಉಳಿದ ಅರ್ಜಿಗಳ ಪೈಕಿ ೫೩೭೮ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ೭,೪೨೪ ಪಡಿತರ ಚೀಟಿಗಳನ್ನು ಮುದ್ರಿಸಿದ್ದು, ವಿತರಣೆಗೆ ಬಾಕಿ ಇರುತ್ತವೆ. ೨೬,೭೩೮ ಅರ್ಜಿಗಳು ಆಹಾರ ನಿರೀಕ್ಷಕರ ಅನುಮೋದನೆಗೆ ಬಾಕಿ ಇರುತ್ತವೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗಿನಿಂದ ೧೫ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ೨೦೩೩-೪೫ ಕ್ವಿಂಟಾಲ್ ಅಕ್ಕಿ ಹಾಗೂ ೯ ವಾಹನಗಳನ್ನು ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಸಮರ್ಪಕ ಪಡಿತರ ವಿತರಣೆ ಕುರಿತಂತೆ ೫ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಗಳನ್ನು ಅಮಾನತ್ತುಪಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ನಂತರ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಮಾತನಾಡಿ, ಮುದ್ರಿಸಿದ ೭,೪೨೪ ಪಡಿತರ ಚೀಟಿಗಳನ್ನು ಶೀಘ್ರ ವಿತರಿಸಬೇಕು. ಈಗಾಗಲೇ ಎಸ್.ಎಂ.ಎಸ್. ಮೂಲಕ ಎಪಿಕ್ ಸಂಖ್ಯೆ ಕಳುಹಿಸಿದ ಮಾಹಿತಿಯನ್ನು ಆಯಾ ಗ್ರಾ.ಪಂ. ವಾರು ಮಾಹಿತಿ ಪಡೆದು ಸಲ್ಲಿಸುವಂತೆ ಅವರು ಸೂಚಿಸಿದರು. 
ವಿವಿಧ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಬಿಸಿಎಂ, ನಗರಸಭೆ, ಪುರಸಭೆ ಮೊದಲಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.  ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!