ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ

ಕೊಪ್ಪಳ: ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ತನ್ನದೇಯಾದ ಸಾಹಿತ್ಯಿಕ ಕೊಡುಗೆಯನ್ನು ನೀಡಿರುವ ಕೀರ್ತಿ ಮಾನವಿಗೆ ಸಲ್ಲುತ್ತದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಬರಹಗಾರ ಕುಂ.ವೀರಭದ್ರಪ್ಪ ನುಡಿದರು. 
ರವಿವಾರದಂದು ತಾಲೂಕ ಪಂಚಾಯತ ಸಭಾಂಗಣದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಜಾನಪದ ಪರಿಷತ್‌ನ ಸಹಕಾರದಲ್ಲಿ ಆಯೋಜಿಸಿದ್ದ ಮೇಘನಾ ಪ್ರಕಾಶನದ ಮಾನ್ವಿಯ ಮಹನೀಯರು ಹಾಗೂ ಸಂಸಾರ ಸಗ್ಗ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. 
ದೋಅಬ್ ಪ್ರದೇಶವೆಂಬ ಖ್ಯಾತಿಯನ್ನು ಪಡೆದಿರುವ ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಸಾಹಿತ್ಯ, ಕಲೆ, ಸಾಂಸ್ಕೃತಿಕ, ಹೋರಾಟಗಳ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಪನ್ನು ಮೂಡಿಸಿದ್ದು ಈ ಭಾಗದಲ್ಲಿ ಅನೇಕ ಬರಹಗಾರರು ಇರುವುದನ್ನು ಕಾಣಬಹುದಾಗಿದೆ ಎಂದು ಹೇಳಿದ ಕುಂ.ವೀ ಅವರು ಮಾನವಿ ಕ್ಷೇತ್ರವು ದಾಸರು, ಶರಣರು, ಸಂತರು ನೆಲೆಸಿರುವ ಈ ಭಾಗವು ಸಾಹಿತ್ಯಿಕವಾಗಿ ತುಂಬಾ ಗಟ್ಟಿತನದಿಂದ ಕೂಡಿದ ಸಾಹಿತ್ಯಿಕ ನೆಲೆಬೀಡಾಗಿದೆ ಎಂದರು. 
ಸಾಹಿತ್ಯಿಕವಾಗಿ ತೀರಾ ಭಿನ್ನ ಪ್ರದೇಶವಾಗಿ ಗುರುತಿಸಿಕೊಂಡಿರುವ ಮಾನವಿ ತಾಣವು ಪ್ರೀತಿ, ವಿಶ್ವಾಸವನ್ನು ತೋರಿಸುವ ಜನರ ಔದರ್ಯತೆಯ ಬಗ್ಗೆ ತುಂಬಾ ಮೆಚ್ಚುಗೆಯ ನುಡಿಗಳನ್ನಾಡಿದ ಕುಂ.ವೀರಭದ್ರಪ್ಪನವರು ಮುಂದಿನ ಜನ್ಮದಲ್ಲಿ ತಾವು ಮಾನವಿಯಲ್ಲಿಯೇ ಜನಿಸಬೇಕೆನಿಸುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು. 
ಈ ಭಾಗದ ಇತಿಹಾಸವನ್ನು ಕೆದಕಿದಾಗ ಮುಸ್ಲಿಂ ಸಾಮ್ರಾಜ್ಯದ ಒಡೆತನದಲ್ಲಿ ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ತುಂಬಾ ವೈಶಿಷ್ಠ್ಯ ಪೂರ್ಣವಾದ ಕೊಡುಗೆಯನ್ನು ನೀಡಿರುವ ಅಂಶಗಳನ್ನು ಗಮನಕ್ಕೆ ಬರುತ್ತವೆ. ಅದೇರೀತಿ ಯುವ ಬರಹಗಾರ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಬರೆದಿರುವ ದಾಸರು, ಶರಣರ ಕುರಿತಾದ ಮಾನ್ವಿಯ ಮಹನೀಯರು ಕೃತಿ ಪ್ರಕರಣೆಗೆ ಅಲ್ಪಸಂಖ್ಯಾತ ಸಮುದಾಯದ ಸಬ್ಜಲಿಸಾಬ್, ಶರ್ಫುದ್ದಿನ್ ಪೋತ್ನಾಳ್ ಅವರು ದಾನಿಗಳಾಗಿರುವುದು ಕೂಡಾ ವೈಶಿಷ್ಠ್ಯವೇ ಸರಿ ಎಂದರು. 
ಇಂದಿನ ದಿನದಲ್ಲಿ ಯುವ ಬರಹಗಾರರ ಸಂಖ್ಯೆಗೇನು ಕಡಿಮೆಯಿಲ್ಲ ಆದರೆ ಅವರು ಬರೆದಿರುವ ಕೃತಿಗಳ ಪ್ರಕಟಣೆಗೆ ದಾನಿಗಳ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಸಿದ್ದಲಿಂಗಪ್ಪ ಕೊಟ್ನೆಕಲ್‌ರಂತಹ ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುಸ್ತಕ ಪ್ರಕಟಣೆಗೆ ಧನ ಸಹಾಯ ನೀಡಿರುವ ಸಬ್ಜಲಿಸಾಬ್ ಮತ್ತು ಶರ್ಫುದ್ದೀನ್‌ರವರ ಹೃದಯ ಶ್ರೀಮಂತಿಕೆ ಮೆಚ್ಚುವಂತಹದ್ದು ಎಂದು ಕುಂ.ವೀ.ತಿಳಿಸಿದರು. 
ಹೈ.ಕ.ಭಾಗವು ಇಂದಿಗೂ ಅಭಿವೃದ್ದಿಯಲ್ಲಿ ಹಿನ್ನಡೆಯನ್ನು ಕಾಣಲು ಮತ್ತು ಈ ಭಾಗದ ಜನರ ಬಹುದಿನದ ಕನಸಾಗಿದ್ದ ೩೭೧ (ಜೆ) ಕಲಂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಬಿಡದೆ ಅಡ್ಡಿಪಡಿಸುತ್ತಿರುವುದು ಬೆಂಗಳೂರು, ಮೈಸೂರು ಭಾಗದ ಜನರ ಬಿಗಿ ಹಿಡಿತವೇ ಪ್ರಮುಖ ಕಾರಣವೆಂದು ತಿಳಿಸಿದ ಕುಂ.ವೀ.ಅವರು ಕೇವಲ ಗಂಗಾ ನದಿ ಸ್ವಚ್ಚವಾದರೆ ಮಾತ್ರ ಈ ದೇಶದ ಅಭಿವೃದ್ದಿ ಆಸಾಧ್ಯವಾಗಿದ್ದು ದೇಶದಲ್ಲಿನ ಚರಂಡಿ, ರಸ್ತೆಗಳು ಮೊದಲು ಸ್ವಚ್ಚತೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. 
ಈ ಕಾರ್ಯಕ್ರಮವನ್ನು ಉಧ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ಹಾಗೂ  ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೆಯಾದ ಸೇವೆಯನ್ನು ಸಲ್ಲಿಸಿರುವವರ ಕಾರ್ಯ ಸಾಧನೆಗಳನ್ನು ಗುರುತಿಸಿ ಪ್ರಕಟಿಸಿರುವ ಕೃತಿ ಮಾನ್ವಿಯ ಮಹನೀಯರು ಎಂದು ಬಣ್ಣಿಸಿದರು. 
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರ ಮಾನ್ವಿಯ ಮಹನೀಯರು ಮತ್ತು ಸಂಸಾರ ಸಗ್ಗ ಎಂಬ ಕೃತಿಗಳನ್ನು ರಚಿಸಿ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ತುಂಬಾ ಶ್ಲಾಘನೀಯ ಎಂದು ತಿಳಿಸಿದ ಮಹಾಂತೇಶ ಮಸ್ಕಿ ಅವರು ಲೇಖಕರನ್ನು ಪ್ರೋತ್ಸಾಹಿಸುವಂತಹ ದಾನಿಗಳ ಸಹಕಾರ ತುಂಬಾ ಅಗತ್ಯವಾಗಿದೆ ಎಂದರು. 
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಪಿ.ಪರಮೇಶ ಮಾತನಾಡಿ ಕಳೆದ ಎರಡು ವರ್ಷಗಳ ನಿರಂತರ ಪರಿಶ್ರಮದಿಂದ ಹೊರತಂದಿರುವ ಮಾನ್ವಿಯ ಮಹನೀಯರು ಎನ್ನುವ ಕೃತಿಗೆ ದಾನಿಗಳ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದರು. 
ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ಮಹನೀಯರನ್ನು ಗುರುತಿಸಿ ರಚಿಸಿರುವ ಕೃತಿ ಇದಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ದಲಿತ, ರೈತಪರ ಹೋರಾಟಗಾರರ ಹಾಗೂ ಇನ್ನೀತರ ಕಲೆಗಳಲ್ಲಿ ಗುರುತಿಸಿಕೊಂಡಿರುವವರ ಕುರಿತು ಕೃತಿ ಕೂಡಾ ಹೊರಬರಬೇಕಿದೆ ಎಂದು ತಿಳಿಸಿದ ಪರಮೇಶ ಅವರು ಯುವ ಬರಹಗಾರರ ಉತ್ಸಾಹಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯ ಸಹಕಾರ ದೊರೆಯಬೇಕಿದೆ ಎಂದು ಆಶಿಸಿದರು. 
ಈ ಸಂಧರ್ಬದಲ್ಲಿ ಲೇಖಕ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಮಾನ್ವಿಯ ಮಹನೀಯರು ಕುರಿತು ಪ್ರೋ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಸಂಸಾರ ಸಗ್ಗ ಕೃತಿ ಬಗ್ಗೆ ಡಾ.ಗಾದೆಪ್ಪ ಸಿದ್ರಾಂಪುರು ವಿಷಯ ಮಂಡಿಸಿದರು. 
ಸನ್ಮಾನ ಃ ಗ್ರಂಥ ದಾನಿಗಳಾದ ಪುರಸಭೆ ಸದಸ್ಯ ಸಬ್ಜಲಿಸಾಬ್, ಜ್ಞಾನಭಾರತಿ ವಿದ್ಯಾಮಂದಿರ ಸಂಸ್ಥೆಯ ಅಧ್ಯಕ್ಷ ಹೆಚ್. ಶರ್ಫುದ್ದೀನ್ ಪೋತ್ನಾಳ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಕಸಾಪ ಅಧ್ಯಕ್ಷ ಕೆ.ಈ.ನರಸಿಂಹ, ಪ್ರತಿಷ್ಠಾನ ಅಧ್ಯಕ್ಷ ರಾಮಚಂದ್ರಪ್ಪ, ಜಾನಪದ ಪರಿಷತ್ ಅಧ್ಯಕ್ಷ ರಮೇಶಬಾಬು ಯಾಳಗಿ, ಜಿಕಸಾಪ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಸೇರಿದಂತೆ ಇನ್ನೀತರರಿದ್ದರು. 
ಕು.ಮೇಘನಾ ಪ್ರಾರ್ಥಿಸಿದರೆ ಕಸಾಪ ಕಾರ್ಯದರ್ಶಿ ಹೆಚ್.ಟಿ.ಪ್ರಕಾಶಬಾಬು ಸ್ವಾಗತಿಸಿದರು ಕಸಾಪ ಕಾರ್ಯದರ್ಶಿ ಮೂಕಪ್ಪ ಕಟ್ಟಿಮನಿ ನಿರೂಪಿಸಿದರು ಪತ್ರಕರ್ತ ಹ್ಯಾರಿಸ್ ಕೊಟ್ನೆಕಲ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಪುತ್ರಿ ಮೇಘನಾಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು. 
Please follow and like us:
error