ಮಹಾನ್ ಕಳ್ಳರೆಲ್ಲ ಅಣ್ಣಾ ಜೊತೆಗಿರುವುದು ದುರಂತ

ಬೆಂಗಳೂರು, ಆ.19: ಅಣ್ಣಾ ಹಝಾರೆಯವರ ಹೋರಾಟಕ್ಕೆ ದಲಿತರ ಮತ್ತು ರೈತರ ಭೂಮಿಯನ್ನು ಕಬಳಿಸಿರುವ ರವಿಶಂಕರ್ ಗುರೂಜಿ, ಬಾಬಾ ರಾಮದೇವ್‌ರಂತಹ ಮಹಾನ್ ಕಳ್ಳರು ಕೈ ಜೋಡಿಸಿರುವುದು ಈ ದೇಶದ ದುರಂತ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾ ನಾಥ್ ಆರೋಪಿಸಿದ್ದಾರೆ.ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿಂದು ಭಗವದ್ಗೀತೆ ವಿರೋಧಿ ಜಾಗೃತಿ ಒಕ್ಕೂಟ ಹಮ್ಮಿಕೊಂಡಿದ್ದ ಭಗವದ್ಗೀತೆ ವಿರೋಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದ
ನಾನು ಈ ಹಿಂದೆ ನನ್ನ ವಕೀಲಿಕೆಯಲ್ಲಿ ಕಕ್ಷಿದಾರರಿಗೆ ರಸೀದಿ ನೀಡುತ್ತಿರಲಿಲ್ಲ. ನಾನಷ್ಟೆ ಅಲ್ಲದೆ ಆಗ ಹಿರಿಯ ನ್ಯಾಯವಾದಿಗಳಾದ ಸಂತೋಷ್ ಹೆಗ್ಡೆ ಕೂಡ ರಸೀದಿಯನ್ನು ನೀಡುತ್ತಿ ರಲಿಲ್ಲ. ಇದು ಕೂಡ ಭ್ರಷ್ಟಾಚಾರ ವಾಗಿರುವುದರಿಂದ ನಾನು ಪಾಪಪ್ರಜ್ಞೆ ಯಿಂದ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ಆದರೆ ರಸೀದಿ ನೀಡದೆ ವಕೀಲಿಕೆಯನ್ನು ಮಾಡಿ ಕೋಟ್ಯಂತರ ರೂ.ಆಸ್ತಿ ಮಾಡಿರುವ ಶಾಂತಿಭೂಷನ್, ಪ್ರಶಾಂತಿಭೂಷಣ್‌ರವರು ಅಣ್ಣಾ ಬೆನ್ನಿಗಿದ್ದಾರೆ. ಇನ್ನೊಂದು ಮಹಾನ್ ದುರಂತವೆಂದರೆ ಭ್ರಷ್ಟಾಚಾರದ ಮಹಾ ಆರೋಪಿ ಯಡಿಯೂರಪ್ಪ ಒಂದು ಕಡೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುತ್ತಾ, ಮತ್ತೊಂದೆಡೆ ಕಡೆ ಅಣ್ಣಾರನ್ನು ಬೆಂಬಲಿಸಿ ಹೋರಾಟಕ್ಕೆ ಕರೆ ನೀಡುತ್ತಾರೆ. ಅಣ್ಣಾ ಹಝಾರೆಯವರು ಇಂತಹ ಭ್ರಷ್ಟಾಚಾರಿಗಳನ್ನು ತಮ್ಮ ಬೆಂಬಲಕ್ಕೆ ಏಕೆ ಇಟ್ಟುಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ ಉದ್ಯಾನವನದಲ್ಲಿ ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಒಬ್ಬನೂ ಕೂಡ ದಲಿತ, ಅಲ್ಪಸಂಖ್ಯಾತ ಅಥವಾ ರೈತ ಕಾಣಿಸಿಕೊಂಡಿಲ್ಲ. ಕೇವಲ ಆರೆಸ್ಸೆಸ್ ಮುಖಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.ಯಾವಾಗ ಬ್ರಾಹ್ಮಣವಾದಕ್ಕೆ ಧಕ್ಕೆ ಒದಗುತ್ತದೆಯೋ ಆಗೆಲ್ಲ ಭಗವದ್ಗೀತೆ ಅಭಿಯಾನದಂತಹ ಕುತಂತ್ರಗಳನ್ನು ಆರೆಸ್ಸ್‌ಸ್‌ನವರು ಮಾಡುತ್ತಾ ಬಂದಿದ್ದಾರೆ ಎಂದವರು ದೂರಿದರು.ವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್, ಮಾಜಿ ಸಚಿವೆ ಮತ್ತು ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮತ್ತು ನ್ಯಾಯವಾದಿ ಎಸ್.ಬಾಲನ್ ಉಪಸ್ಥಿತರಿದ್ದರು.

Leave a Reply