ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ.

ಕೊಪ್ಪಳ, ಸೆ.೩೦
(ಕ ವಾ)  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ
ಇವರಿಂದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಕಾರ್ಯಾಗಾರವನ್ನು ಅಕ್ಟೋಬರ್ ೦೫ ರಂದು
ಬೆಳಿಗ್ಗೆ ೧೦ ಗಂಟೆಗೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನ ಎಸ್‌ಎಫ್‌ಎಸ್ ಪ್ರೌಢ
ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿ.ಇ.ಸಿ ಅನುಷ್ಠಾನ ಹಾಗೂ ಎಸ್.ಎಸ್.ಎಲ್.ಸಿ
ಫಲಿತಾಂಶ ಉತ್ತಮಗೊಳಿಸಲು ಶಾಲಾ ಹಂತದಲ್ಲಿ ಕೈಗೊಂಡ ಕ್ರಮಗಳ ಕುರಿತು ಈ ಕಾರ್ಯಾಗಾರವನ್ನು
ಏರ್ಪಡಿಸಲಾಗಿದ್ದು, ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ,
ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಖುದ್ದಾಗಿ ಹಾಜರಾಗುವಂತೆ ಸಾರ್ವಜನಿಕ
ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. 
ವಾಹನ ದುರಸ್ತಿ ವೆಚ್ಚ ಪಾವತಿಸದಿರುವುದು ಸೇವಾ ನ್ಯೂನ್ಯತೆ : ಪರಿಹಾರ ಒದಗಿಸಲು ಆದೇಶ.
ಕೊಪ್ಪಳ,
ಸೆ.೩೦ (ಕ ವಾ) ವಿಮಾ ಪಾಲಿಸಿ ಹೊಂದಿ, ಅಪಘಾತದಿಂದ ದುರಸ್ತಿಗೊಂಡಿದ್ದ
ವಾಹನವೊಂದರ ದುರಸ್ತಿ ವೆಚ್ಚವನ್ನು ಪಾವತಿಸಲು ತಿರಸ್ಕರಿಸಿದ ಎಸ್.ಬಿ.ಐ ಜನರಲ್
ಇನ್ಶೂರೆನ್ಸ್ ಎಂಬ ಕಂಪನಿಯ ಸೇವಾ ನ್ಯೂನ್ಯತೆಯನ್ನು ಪರಿಗಣಿಸಿರುವ ಕೊಪ್ಪಳದ ಜಿಲ್ಲಾ
ಗ್ರಾಹಕ ವ್ಯಾಜ್ಯಗಳ ವೇದಿಕೆಯು ಪರಿಹಾರ ಒದಗಿಸಲು ಕಂಪನಿಗೆ ಆದೇಶ ನೀಡಿದೆ.
    
ಪ್ರಕರಣದ ವಿವರ ಇಂತಿದೆ.  ಕೊಪ್ಪಳದ ಹಮೀದ್ ಹುಸೇನಿ ಇವರು ಎಸ್.ಬಿ.ಐ ಬ್ಯಾಂಕ್ ಶಾಖೆ,
ಕೊಪ್ಪಳದಿಂದ ಆರ್ಥಿಕ ಸಹಾಯ ಪಡೆದು ಟಿಪ್ಪರ್ ಒಂದನ್ನು ಖರೀದಿಸಿದ್ದರು. ಈ ವಾಹನಕ್ಕೆ
ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಎಂಬ ಕಂಪನಿಯಿಂದ ವಿಮೆ ಮಾಡಿಸಿದ್ದರು.  ವಾಹನವು ೨೦೧೩ ರ
ಏ.೨೯ ರಂದು ಮಾರ್ಗ ಮಧ್ಯದಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬಲಬದಿಯಲ್ಲಿ
ಪಲ್ಟಿಯಾಗಿ ಸಾಕಷ್ಟು ಹಾನಿಗೊಂಡಿತು.  ಈ ಘಟನೆಗೆ ಸಂಬಂಧಿಸಿದಂತೆ ನಗರ ಸಂಚಾರ ಪೊಲೀಸ್
ಠಾಣೆಯಲ್ಲಿ ದೂರು ದಾಖಲಿಸಲಾಯಿತಲ್ಲದೆ, ಈ ವಿಷಯವನ್ನು ವಿಮಾ ಕಂಪನಿಗೂ ಸಹ ಟೋಲ್ ನಂಬರ್
ಮೂಲಕ ತಿಳಿಸಲಾಗಿತ್ತು.  ಕಂಪನಿಯ ಸರ್ವೇಯರ್ ಅಪಘಾತ ಸ್ಥಳಕ್ಕಾಗಮಿಸಿ, ಸರ್ವೇ
ಮಾಡಿಕೊಂಡು ಹೋಗಿ, ಟಾಟಾ ಮೋಟರ್‍ಸ್‌ನ ಅಧಿಕೃತ ಸೇವಾ ಕೇಂದ್ರ ಜಯಶ್ರೀ ಮೋಟರ್‍ಸ್,
ಬೇವಿನಹಳ್ಳಿಯಲ್ಲಿ ದುರಸ್ತಿ ಮಾಡಿಸಿಕೊಳ್ಳಲು ನಿರ್ದೇಶನ ನೀಡಿದ್ದರು. ಅದರಂತೆ ದುರಸ್ತಿ
ಕಾರ್ಯವನ್ನು ಕೈಗೊಂಡು ಅಂದಾಜು ಖರ್ಚಿನ ಕೊಟೇಷನ್ ಪ್ರತಿಯನ್ನು ಸರ್ವೇಯರ್
ತೆಗೆದುಕೊಂಡು ಹೋಗಿದ್ದರು. ಇದಾದ ಬಳಿಕ   ಹಮೀದ್ ಹುಸೇನಿ ಅವರು  ಮೂಲ ಬಿಲ್ಲುಗಳೊಂದಿಗೆ
೧. ೮೫ ಲಕ್ಷ ರೂ.ಗಳನ್ನು ಪಾವತಿಸುವಂತೆ ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿಗೆ
ಪತ್ರ ಮುಖೇನ ಕೋರಿದ್ದರು.  ಆದರೆ ಕಂಪನಿಯು ಬಿಲ್ ಮೊತ್ತ ಪಾವತಿಸದ ಕಾರಣ, ಕೊಪ್ಪಳದ
ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋದರು.
     ಪ್ರಕರಣದ ವಿಚಾರಣೆ
ನಡೆಸಿದ ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ ಹಾಗೂ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು
ದಾಖಲೆಗಳನ್ನು ಪರಿಶೀಲಿಸಿ, ನಂತರ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು
ಪರಿಗಣಿಸಿ, ದುರಸ್ತಿಯ ವೆಚ್ಚ ರೂ.೧. ೬೭ ಲಕ್ಷ ಗಳನ್ನು ಹಾಗೂ ಮಾನಸಿಕ ಹಿಂಸೆಗಾಗಿ
ಪರಿಹಾರವಾಗಿ ರೂ. ೫,೦೦೦ ಗಳನ್ನು ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ರೂ.೫,೦೦೦
ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಹಾಗೂ ಇದಕ್ಕೆ ತಪ್ಪಿದಲ್ಲಿ ಈ
ಮೊತ್ತದ ಮೇಲೆ ವಾರ್ಷಿಕ ಶೇಕಡಾ ೧೨ ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ
ಹಣ ಸಂದಾಯವಾಗುವವರೆಗೆ ಪಾವತಿಸಲು ಆದೇಶಿಸಿದೆ.
Please follow and like us:
error