You are here
Home > Koppal News > ಗೌರವದ ಬದುಕಿಗೆ ಕಾನೂನಿನ ಅರಿವು ಹೊಂದುವುದು ಅಗತ್ಯ- ಕೆ. ಶಿವರಾಮ್

ಗೌರವದ ಬದುಕಿಗೆ ಕಾನೂನಿನ ಅರಿವು ಹೊಂದುವುದು ಅಗತ್ಯ- ಕೆ. ಶಿವರಾಮ್

 ಸಮಾಜದಲ್ಲಿ ಗೌರವಯುತವಾಗಿ ಬದುಕು ಸಾಗಿಸಲು ಕಾನೂನಿನ ಬಗ್ಗೆ ಅರಿವು ಹೊಂದಿರುವುದು ಅಗತ್ಯವಾಗಿದೆ ಎಂದು ಕೊಪ್ಪಳದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ. ಶಿವರಾಮ್ ಅವರು ಹೇಳಿದರು.
     ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
     ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ನಮ್ಮ ಸಂವಿಧಾನ ಬದುಕುವ ಹಕ್ಕು ನೀಡಿದೆ ಅಲ್ಲದೆ ಘನತೆ, ಗೌರವದಿಂದ ಬಾಳುವ ಸ್ವಾತಂತ್ರ್ಯವನ್ನೂ ಕಲ್ಪಿಸಿದೆ.  ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ, ವ್ಯಕ್ತಿಯ ಜೀವನಕ್ಕೆ ಯಾವುದೇ ನೋವು, ತೊಂದರೆಗಳು ಉಪಶಮನವಾಗದೇ ಹಾಗೆಯೇ ಉಳಿದಲ್ಲಿ, ಆಯಾ ತೊಂದರೆಗಳ ನಿವಾರಣೆಗೆ ಆಯಾ ಕಾನೂನುಗಳು ರಚಿತವಾಗುತ್ತವೆ.  ಆ ವ್ಯಕ್ತಿಯ ಬದುಕುವ ಹಕ್ಕಿನ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ, ಅದು ಮಾನವ ಹಕ್ಕುಗಳಿಗೆ ಉಲ್ಲಂಘನೆಯಾದಂಗಾಗುತ್ತದೆ.  ನಮ್ಮ ದೇಶದಲ್ಲಿ ಮನುಷ್ಯನಿಗೆ ಹುಟ್ಟಿನಿಂದ ಮೊದಲುಗೊಂಡು, ಆತನ ಸಾವಿನ ತನಕವೂ ನಮ್ಮ ಸಂವಿಧಾನ ತನ್ನದೇ ಆದ ಹಕ್ಕುಗಳನ್ನು ಹೊಂದುವಂತಹ ವ್ಯವಸ್ಥೆ ಇದೆ.  ಇದಕ್ಕಾಗಿ ಅಗತ್ಯ ಕಾನೂನುಗಳನ್ನೂ ರೂಪಿಸಲಾಗಿದೆ.  ಮನುಷ್ಯನ ಗೌರವಯುತ ಬದುಕಿಗೆ ಧಕ್ಕೆ ಉಂಟು ಮಾಡುವ ಯಾವುದೇ ಪ್ರಕರಣವನ್ನು ಮಾನವ ಹಕ್ಕುಗಳ ಉಲ್ಲಂಘನೆಯೆಂದೇ ಪರಿಗಣಿಸಲಾಗುತ್ತದೆ.  ನಮ್ಮ ದೇಶದಲ್ಲಿ ಹಿಂದೆ ಜನಸಂಖ್ಯೆಯನ್ನೇ ಬಹುದೊಡ್ಡ ಸಮಸ್ಯೆ ಎಂದು ಬಿಂಬಿಸಲಾಗುತ್ತಿತ್ತು.  ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿನ ವರದಿಗಳನ್ನು ಗಮನಿಸಿದಲ್ಲಿ, ಭ್ರಷ್ಟಾಚಾರವೇ ನಮ್ಮ ದೇಶದ ಇಂದಿನ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.  ಜನರ ಸಮಸ್ಯೆ, ತೊಂದರೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತಹ ಜನಪ್ರತಿನಿಧಿಗಳ ಸಂಖ್ಯೆ ಇತ್ತೀಚೆಗೆ ವಿರಳವಾಗಿದ್ದು, ಜನರ ಸಮಸ್ಯೆಗಳನ್ನು ನಿವಾರಿಸುವ ಹೊಣೆಯನ್ನು ಜನರ ಮೇಲೆಯೇ ಹಾಕುವ ಮೂಲಕ ಹೊಣೆಗಾರಿಕೆಯಿಂದ ಜಾರಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ. ಶಿವರಾಮ್ ಅವರು ಕಳವಳ ವ್ಯಕ್ತಪಡಿಸಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಮನುಷ್ಯರನ್ನು ಮನುಷ್ಯರೇ ಮಾರಾಟ ಮಾಡುವಂತಹ ಜೀತ ಪದ್ಧತಿ, ದಾಸ್ಯ ವ್ಯವಸ್ಥೆ ಇದ್ದ ಸಮಾಜದಲ್ಲಿ, ಕಾನೂನುಗಳ ಬಿಗಿ ಪಾಲನೆ ಹಾಗೂ ಜಾಗೃತಿಯ ಪರಿಣಾಮದಿಂದ, ಅಂತಹ ಅನಿಷ್ಟ ವ್ಯವಸ್ಥೆಗೆ ಅಂತ್ಯ ಕಾಣಿಸಲು ಸಾಧ್ಯವಾಗಿದೆ.  ನಮ್ಮ ಕಾನೂನಿನ ವ್ಯವಸ್ಥೆ ಎಷ್ಟೊಂದು ಗಟ್ಟಿಯಾಗಿದೆ ಎಂದರೆ, ಯಾವುದೇ ವ್ಯಕ್ತಿಯನ್ನು ಯಾರೂ ಹೊಡೆಯುವ ಹಾಗಿಲ್ಲ.  ಅಂತಹ ಅಧಿಕಾರವನ್ನು ಸಹ ಅನೇಕ ನಿಬಂಧನೆಗೊಳಪಡಿಸಿ, ನಮ್ಮ ಕಾನೂನು ಕೇವಲ ಪೊಲೀಸರಿಗೆ ಮಾತ್ರ ನೀಡಿದೆ.  ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನರಿತು ವರ್ತಿಸಿದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಜರುಗುವುದಿಲ್ಲ ಎಂದರು.

     ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್. ಪಾಟೀಲ್ ಅವರು ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಕುರಿತು ೧೯೪೮ ರಲ್ಲಿಯೇ ವಿಶ್ವಸಂಸ್ಥೆ ಅನೇಕ ನೀತಿ ನಿಯಮಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ನಮ್ಮ ಭಾರತವೂ ಸಹ ಈ ಒಪ್ಪಂದಗಳಿಗೆ ಸಹಿ ಹಾಕಿದೆ.  ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ದೇಶದ ಕಾನೂನು ವ್ಯವಸ್ಥೆ ಆತನ ಬದುಕಿಗೆ ಅನೇಕ ಹಕ್ಕುಗಳನ್ನು ಕೊಡಮಾಡಿದೆ.  ಅಲ್ಲದೆ ಆತನ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹ ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಕಾರ್ಯ ನಿರ್ವಹಿಸುತ್ತಿವೆ.  ಮಾನವನ ಹಕ್ಕುಗಳಿಗೆ ಚ್ಯುತಿ ಉಂಟಾದಲ್ಲಿ, ಅಂತಹವರ ವಿರುದ್ಧ ಆತ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು.  ಈಗಾಗಲೆ ಕೊಪ್ಪಳ ಜಿಲ್ಲೆಯಲ್ಲಿಯೂ ಮಾನವ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯ ಪ್ರಾರಂಭಗೊಂಡಿದೆ.   ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಆಯೋಗದ ಗಮನಕ್ಕೆ ಬಂದರೂ ಸಹ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುವಂತಹ ಅಧಿಕಾರ ನೀಡಲಾಗಿದೆ.  ಕಾಯ್ದೆಗಳ ಬಗ್ಗೆ ಅರಿವು ಇದ್ದಲ್ಲಿ, ಅಂತಹವರು ಸಮಾಜದಲ್ಲಿ ಘನತೆ, ಗೌರವದಿಂದ ನೆಮ್ಮದಿಯ ಬದುಕು ಸಾಗಿಸಬಹುದಾಗಿದೆ ಎಂದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಸ್ವಾಗತಿಸಿದರು, ಭಾಗ್ಯನಗರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Top