ಕ್ಷೀರಭಾಗ್ಯ ಯೋಜನೆ ಅಪೌಷ್ಠಿಕತೆ ನಿವಾರಣೆಗೆ ಸಹಕಾರಿ- ಜನಾರ್ಧನ ಹುಲಿಗಿ

 ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಿಸುವ ‘ಕ್ಷೀರಭಾಗ್ಯ’ ಯೋಜನೆ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಸಹಾಯಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.

  ಜಿಲ್ಲಾಡಳಿತ, ಜಿ.ಪಂ., ಕರ್ನಾಟಕ ಹಾಲು ಮಹಾ ಮಂಡಳಿ, ಕೊಪ್ಪಳ-ಬಳ್ಳಾರಿ-ರಾಯಚೂರು ಜಿಲ್ಲಾ ಹಾಲು ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಕ್ಕಳಿಗೆ ಹಾಲು ವಿತರಿಸುವ ‘ಕ್ಷೀರಭಾಗ್ಯ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
  ಸರ್ಕಾರ ಸದ್ಯ ಜಾರಿಗೊಳಿಸಿರುವ ಕ್ಷೀರ-ಭಾಗ್ಯ ಯೋಜನೆಯು ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳದಂತಹ ಜಿಲ್ಲೆಗಳಲ್ಲಿನ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಪೂರಕವಾಗಿದೆ.  ಬಡತನದ ಬೇಗೆಯಲ್ಲಿ ನರಳುತ್ತಿರುವ ಕುಟುಂಬದ ಮಕ್ಕಳಿಗೆ ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಹಾಲು ನೀಡುವುದರಿಂದ, ಎಲ್ಲ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯವಾಗಲಿದೆ.  ಭವಿಷ್ಯದ ಪ್ರಜೆಗಳೆನಿಸುವ ಇಂದಿನ ಮಕ್ಕಳ ಆರೋಗ್ಯ ಮಟ್ಟ ಸುಧಾರಣೆಯಾಗಿ, ದೇಶಕ್ಕೆ ಆರೋಗ್ಯಪೂರ್ಣ ಪ್ರಜೆಗಳನ್ನು ನೀಡಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ.  ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟ ಯೋಜನೆ, ಉಚಿತ ಪಠ್ಯಪುಸ್ತಕ, ಬೈಸಿಕಲ್, ಸಮವಸ್ತ್ರ ಮುಂತಾದ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ, ಶಾಲೆಗಳಲ್ಲಿನ ಹಾಜರಾತಿ ಪ್ರಮಾಣವೂ ವೃದ್ಧಿಯಾಗಲಿದೆ.  ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒತ್ತುವಾರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಶಾಲೆಗಳು, ಅಂಗನವಾಡಿ ಕಟ್ಟಡ ಮತ್ತು ಆಟಕ ಮೈದಾನ ನಿರ್ಮಿಸುವ ನಿಟ್ಟಿನಲ್ಲಿ ತೀವ್ರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಮಾತನಾಡಿ, ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ೧೭೯೭೯೪ ಅಂಗನವಾಡಿ ಮಕ್ಕಳಿಗೆ ಕೆನೆ ರಹಿತ ಹಾಲು ಮತ್ತು ಜಿಲ್ಲೆಯ ೧೧೧೦ ಸರ್ಕಾರಿ ಮತ್ತು ೪೩ ಅನುದಾನಿತ ಶಾಲೆಗಳಲ್ಲಿ ೧ ರಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಒಟ್ಟು ೧೯೮೧೭೨ ವಿದ್ಯಾರ್ಥಿಗಳಿಗೆ ಹಾಲಿನ ಪೌಡರ್‌ನಿಂದ ತಯಾರಿಸಿದ ಪೌಷ್ಠಿಕ ಹಾಲನ್ನು ವಾರಕ್ಕೆ ಮೂರು ದಿನ ವಿತರಿಸಲಾಗುವುದು.  ಕ್ಷೀರಭಾಗ್ಯ ಯೋಜನೆಯಿಂದ ಈ ಭಾಗದಲ್ಲಿನ ಅಪೌಷ್ಠಿಕತೆ ನಿವಾರಣೆಯಾಗುವುದಲ್ಲದೆ, ಮಕ್ಕಳ ಆರೋಗ್ಯ ವೃದ್ಧಿ ಹಾಗೂ ಶಾಲಾ ದಾಖಲಾತಿ ಪ್ರಮಾಣವೂ ವೃದ್ಧಿಯಾಗಲಿದೆ.  ಕ್ಷೀರಭಾಗ್ಯ ಯೋಜನೆಯು ಕೇವಲ ಮಕ್ಕಳಿಗಷ್ಟೇ ಅಲ್ಲದೆ, ರೈತರಿಗೂ ಸಹ ಅನುಕೂಳ ಕಲ್ಪಿಸಲಿದ್ದು, ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.  ಮಕ್ಕಳಿಗೆ ಹಾಲು ವಿತರಿಸುವ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ವಿತರಣೆಯಾಗಬೇಕು.  ಅಲ್ಲದೆ ಎಲ್ಲ ಅರ್ಹ ಮಕ್ಕಳಿಗೆ ತಪ್ಪದೆ ದೊರೆಯುವಂತಾಗಬೇಕು.  ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯತನ ತೋರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮಾತನಾಡಿ, ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಮತ್ತು ಹಾಲು ವಿತರಿಸುವ ಯೋಜನೆಯು, ಮಕ್ಕಳ ಪಾಲಿಗೆ ವರದಾನವಾಗಿದೆ.  ಭವಿಷ್ಯದ ಪ್ರಜೆಗಳನ್ನು ಸದೃಢರನ್ನಾಗಿಸಲು ಈ ಯೋಜನೆ ಸಹಾಯಕಾರಿಯಾಗಿದೆ.  ಉತ್ತಮ ಆರೋಗ್ಯಕ್ಕಾಗಿ ಆಹಾರಕ್ಕೆ ಆದ್ಯತೆ ನೀಡುವಂತೆ, ವಯಕ್ತಿಕ ಸ್ವಚ್ಛತೆಗೂ ಸಹ ಆದ್ಯತೆ ನೀಡಬೇಕಿದೆ.  ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ತಮ್ಮ ಪಾಲಕರು-ಪೋಷಕರ ಮನವೊಲಿಸಿ ತಪ್ಪದೆ ಶೌಚಾಲಯ ಹೊಂದಲು ಯತ್ನಿಸುತ್ತೇವೆ.  ಮತ್ತು ಬಾಲ್ಯ ವಿವಾಹವನ್ನು ಧಿಕ್ಕರಿಸಿ, ಉತ್ತಮ ಜೀವನ ರೂಪಿಸಿಕೊಳ್ಳುತ್ತೇವೆ ಎಂಬುದಾಗಿ ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.
  ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ತಾ.ಪಂ. ಅಧ್ಯಕ್ಷೆ ಸುಜಾತಾ, ರಾಯಚೂರು-ಬಳ್ಳಾರಿ-ಕೊಪ್ಪಳ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಾಗನಗೌಡ, ಹಾಲು ಒಕ್ಕೂಟದ ಅಧಿಕಾರಿ ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಸಿಡಿಪಿಓ ಜಗದೀಶ್, ಅಕ್ಷರದಾಸೋಹ ಅಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ವಿ.ಬಿ. ರಡ್ಡೇರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಅಂಗನವಾಡಿ ಮಕ್ಕಳು ಮತ್ತು ಶಾಲಾ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹಾಲು ವಿತರಣೆ ಮಾಡಲಾಯಿತು.

Leave a Reply