ಜಿಲ್ಲೆಯ ೧೦೭ ಕಲಾವಿದರಿಗೆ ಮಾಸಾಶನ ಮಂಜೂರು ಮಾಹಿತಿ ಸಲ್ಲಿಸಲು ಸೂಚನೆ.

ಕೊಪ್ಪಳ ಸೆ. ೨೩ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು  ವಿವಿಧ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲೆಯ ೧೦೭ ಕಲಾವಿದರುಗಳಿಗೆ ಮಾಸಾಶನವನ್ನು ಮಂಜೂರು ಮಾಡಿದ್ದು, ಸಂಬಂಧಿಸಿದ ಕಲಾವಿದರು ಅಗತ್ಯ ಮಾಹಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
     ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಯಲಾಟ-ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿ ಹಾಗೂ ಶಿಲ್ಪ ಕಲಾ ಅಕಾಡೆಮಿಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ೫೮ ವರ್ಷ ಮೇಲ್ಪಟ್ಟ ಜಿಲ್ಲೆಯ ೧೦೭ ಕಲಾವಿದರುಗಳಿಗೆ ೨೦೧೩-೧೪ ಹಾಗೂ ೨೦೧೪-೧೫ ನೇ ಸಾಲಿನಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಮಾಸಾಶನ ಮಂಜೂರು ಮಾಡಿದೆ.  ಮಾಸಾಶನ ಮಂಜೂರಾಗಿರುವ ಕಲಾವಿದರು ದಿನಾಂಕ: ೧೦-೦೯-೨೦೧೫ ರಿಂದ ಅನ್ವಯವಾಗುವಂತೆ ಮಾಹೆಯಾನ ೧೫೦೦ ರೂ. ಮಾಸಾಶನ ಪಡೆಯಲಿದ್ದಾರೆ.  ಮಾಸಾಶನ ಮಂಜೂರಾತಿ ಕೋರಿ ೨೦೧೩-೧೪ ಮತ್ತು ೨೦೧೪-೧೫ ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಕಲಾವಿದರುಗಳು, ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಸಂಪರ್ಕಿಸಿ, ಮಾಸಾಶನ ಮಂಜೂರಾತಿಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು.   ಮಂಜೂರಾತಿ ಪಡೆದ ಕಲಾವಿದರ ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ (ಮಹಾಲೇಖಪಾಲರಿಗೆ) ಸಲ್ಲಿಸಬೇಕಾಗಿರುವುದರಿಂದ ಸಂಬಂಧಿಸಿದ ಕಲಾವಿದರು ನಿಗದಿತ ನಮೂನೆಯಲ್ಲಿ ಆದಷ್ಟು ಶೀಘ್ರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ವಿವರಗಳನ್ನು ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯುವಂತೆ ತಿಳಿಸಿದೆ.

Please follow and like us:
error