ಕೆಪಿಟಿಸಿಎಲ್ ಮತ್ತು ಎಸ್ಕಾಂ ವಿದ್ಯುತ್ ಗುತ್ತಿಗೆ ನೌಕರರ ಪ್ರತಿಭಟನೆ.

ಇಂದು ಕೆಪಿಟಿಸಿಎಲ್ ಮತ್ತು ವಿವಿಧ ಎಸ್ಕಾಂಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೂರಾರು ಗುತ್ತಿಗೆ ಕಾರ್ಮಿಕರು ಎಐಯುಟಿಯುಸಿ ಮತ್ತು ಎಐಪಿಎಫ್ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಂತರ ನಗರದ ಕಾವೇರಿ ಭವನದ ಎದುರು ರಾಜ್ಯಮಟ್ಟದ ಪ್ರತಿಭಟನಾ ಪ್ರದರ್ಶನ ನಡೆಸಿದರು.ಈ ಸಂದರ್ಭದಲ್ಲಿ ನಿಯೋಗದಲ್ಲಿ ಭೆಟ್ಟಿಯಾದ ಸಂಘದ ನಾಯಕರಿಗೆ ಮಾನ್ಯ ಇಂಧನ ಸಚಿವರು ಮುಂದಿನ ವಾರದಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ಏರ್ಪಡಿಸುವುದಾಗಿ, ಅಲ್ಲಿ ನೌಕರರ ಸಮಸ್ಯೆಗಳನ್ನು ಕೂಲಂಕುಶವಾಗಿ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಮನವಿ ಸ್ವೀಕರಿಸಿದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಹ ‘೧೦-೧೫ ದಿನಗಳ ಒಳಗೆ ಸಭೆಯನ್ನು ಕರೆಯಲಾಗುವುದು, ಸಂಘದ ಪ್ರತಿನಿಧಿಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ ನಂತರ ಬೋರ್ಡ್‌ನಲ್ಲಿಟ್ಟು ಪರಿಹಾರ ಕಂಡುಕೊಳ್ಳಲಗುವುದೆಂದರು. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ, ಹತ್ತಾರು ವರ್ಷಗಳಿಂದ ಖಾಯಂ ಹುದ್ದೆಗಳ ಜಾಗದಲ್ಲಿ ಗುತ್ತಿಗೆ ನೌಕರರು ಪುಡಿಗಾಸಿಗೆ ಕೆಲಸ ಮಾಡುತ್ತಿದ್ದು, ಕನಿಷ್ಠ ಸೌಲಭ್ಯಗಳಿಂದ ವಂಚಿತಗೊಂಡಿರುವರು. ಕ್ರೂರ ಗುತ್ತಿಗೆ ಪದ್ಧತಿಯಿಂದ ಆಗುತ್ತಿರುವ ಅನ್ಯಾಯ, ಶೋಷಣೆಗೆ ಒಳಗಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವರು. ರಾಜ್ಯದಲ್ಲಿ ಕೆಪಿಟಿಸಿಎಲ್‌ನಲ್ಲಿ ೧೩೦೦ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ಹಾಗೂ ಎಸ್ಕಾಂಗಳಲ್ಲಿ ೫೦೦೦ ಕಿರಿಯ ಮಾರ್ಗದಾಳು ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಈ ನೇಮಕಾತಿಯಲ್ಲಿ ಗುತ್ತಿಗೆ ನೌಕರರಿಗೆ ಆದ್ಯತೆ, ಕನಿಷ್ಠ ರೂ.೧೫,೦೦೦/- ವೇತನ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ವಿದ್ಯುತ್ ಗುತ್ತಿಗೆ ನೌಕರರಿಗೆ ಬೋನಸ್, ಇ.ಎಸ್.ಐ., ರಜೆ, ಪಿ.ಎಫ್., ರಾತ್ರಿಪಾಳೆಯ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ಖಚಿತಪಡಿಸಬೇಕು ಈ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಪಿಟಿಸಿಎಲ್ ವಿ.ವಿ.ಗು.ಕಾ.ಸಂಘದ ಪ್ರಧಾನ ಕಾರ್ಯದರ್ಶಿ ಕಾ| ಕೆ.ಸೋಮಶೇಖರ್ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಕಾ|| ಎಂ. ಶಶಿಧರ್ ರವರು ಮಾತನಾಡುತ್ತಾ ಸರ್ಕಾರಗಳು ಹತ್ತಾರು ವರ್ಷಗಳಿಂದ ಖಾಯಂ ಸೇವೆಗಳಲ್ಲಿ ಗುತ್ತಿಗೆ ಮೂಲಕ ದುಡಿಸಿಕೊಳ್ಳುತ್ತಾ ಬಂದಿವೆ. ಈಗ ಹಿಂಬಾಗಿಲಿನಿಂದ ಬಂದವರು ಎಂದು ಮಾತನಾಡುತ್ತಿರುವುದು ಅಸಮರ್ಥನೀಯ, ಇತ್ತೀಚೆಗೆ ಮಾನ್ಯ ಕಾನೂನು ಸಚಿವರು ಅಲ್ಲದೇ ಮುಖ್ಯಮಂತ್ರಿಗಳು ಸಹ ಗುತ್ತಿಗೆ ಪದ್ಧತಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಅನ್ಯಾಯ ಜರುಗುತ್ತಿದೆ ಎಂದರೆ ಸಾಲದು, ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದರು.  ಈ ಪ್ರತಿಭಟನೆಯಲ್ಲಿ ೨೦ ಕ್ಕೂ ಹೆಚ್ಚು ಜಿಲ್ಲೆಗಳಿಂದ ನೌಕರರು ಭಾಗವಹಿಸಿದ್ದರು. ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕಾ|| ಪ್ರಕಾಶ್, ಇತರ ರಾಜ್ಯ ನಾಯಕರಾದ ಕಾ|| ವೀರೇಶ್.ಎನ್.ಎಸ್, ಷಣ್ಮುಗಂ, ಕಾ|| ಗಂಗಾಧರ್, ಕಾ|| ಹನುಮೇಶ್, ನೌಕರರ ಪ್ರತಿನಿಧಿಗಳಾದ ಉಮೇಶ್, ಶಿವರಾಜ್, ಮಹಾದೇವ, ದಳವಾಯಿ, ರಮೇಶ ಮುಂತಾದವರು ನೇತೃತ್ವ ವಹಿಸಿದ್ದರು.

Please follow and like us:

Leave a Reply