You are here
Home > Koppal News > ಪ್ರತಿಯೊಬ್ಬರು ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳಿ : ಸಂಗಣ್ಣ ಕರಡಿ

ಪ್ರತಿಯೊಬ್ಬರು ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳಿ : ಸಂಗಣ್ಣ ಕರಡಿ

  ಶೌಚಾಲಯ ಮನುಷ್ಯನ ಜೀವನದ ಒಂದು ಭಾಗವಾಗಿದ್ದು, ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯಕ್ಕಾಗಿ ಪ್ರತಿಯೊಬ್ಬರೂ ಶೌಚಾಲಯ ಹೊಂದುವುದು ಅಗತ್ಯವಾಗಿದೆ. ಜಿಲ್ಲೆಯ ಪ್ರತಿಯೊಂದು  ಕುಟುಂಬ ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.

  ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್, ಹಲಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಲಗೇರಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಶ್ವ ಶೌಚಾಲಯ ದಿನಾಚರಣೆ ಹಾಗೂ ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಬಂದಾಗ ಪರದಾಡುವುದಕ್ಕಿಂತ, ರೋಗ ಬಾರದಂತೆ ತಡೆಯುವುದು ಬಹುಮುಖ್ಯವಾಗಿದೆ.  ಆದ್ದರಿಂದ ಪ್ರತಿಯೊಬ್ಬರೂ, ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಿ ಬಳಸುವಂತಾಗಬೇಕು. ಅಂದಾಗ ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ.  ಮನೆ ಕಟ್ಟಿಸುವಾಗ ಮನೆಗೊಂದು ಶೌಚಾಲಯ ಇರಲೇಬೇಕು.  ಆ ರೀತಿ ವ್ಯವಸ್ಥೆ ಆದಾಗ ಸಂಪೂರ್ಣ ನೈರ್ಮಲ್ಯ ಕಾಯ್ದುಕೊಂಡು ಬರಲು ಸಾಧ್ಯ.   ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ರೂ.೧೫,೦೦೦/- ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ರೂ.೧೨,೦೦೦/- ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ.  ಈ ಯೋಜನೆಯ ಲಾಭವನ್ನು ಪಡೆದುಕೊಂಡು ಜಿಲ್ಲೆಯಾದ್ಯಂತ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಸ್ವಚ್ಚ ಭಾರತದ ಕನಸನ್ನು ನನಸಾಗಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಡಿ. ಉದಪುಡಿ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಮಾನ್ಯವಾಗಿ ಬಯಲಿನಲ್ಲಿ ಮಲವಿಸರ್ಜನೆ ರೂಢಿ ಬೆಳೆದುಬಂದಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಜನರನ್ನು ಕಾಡುತ್ತಿದೆ. ಇದನ್ನು ತಪ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೭೫೦ ಶೌಚಾಲಯ ಗುರಿ ಹೊಂದಲಾಗಿದ್ದು, ಈ ಪೈಕಿ ೨೦೦ ಪೂರ್ಣಗೊಂಡಿವೆ.  ಇನ್ನೂ ೫೫೦ ಶೌಚಾಲಯಗಳ ಗುರಿ ಸಾಧನೆಯಾಗಬೇಕಿದೆ.  ಜಿಲ್ಲೆಯಲ್ಲಿ ಕಳೆದ ವರ್ಷ ಸಾಧಿಸಿದ ಗುರಿಗಿಂತ ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಶೌಚಾಲಯಗಳನ್ನು ನಿರ್ಮಿಸುವ ದಿಸೆಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ.   ಮುಂದಿನ ವಿಶ್ವ ಶೌಚಾಲಯ ದಿನಾಚರಣೆ ಆಚರಿಸುವ ಮುನ್ನ ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯೆಂದು ಘೋಷಣೆ ಮಾಡುವಂತಾಗಬೇಕು.  ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.  ಜಿಲ್ಲೆಯಲ್ಲಿ ಗ್ರಾಮಗಳ  ಪ್ರಮುಖ ರಸ್ತೆಗಳ  ಇಕ್ಕೆಲಗಳಲ್ಲಿಯೇ  ಬಹುತೇಕವಾಗಿ ಸಗಣಿ ಮತ್ತು ಘನ ತ್ಯಾಜ್ಯದ ತಿಪ್ಪೆಗುಂಡಿಗಳು ಕಂಡುಬರುತ್ತಿದ್ದು, ಇದರಿಂದ ಪರಿಸರ ಮಲಿನವಾಗುವುದರ ಜೊತೆಗೆ ಜನರ  ಆರೋಗ್ಯದ ಮೇಲೆ  ದುಷ್ಪರಿಣಾಮ ಬೀರುತ್ತದೆ.  ರೈತೋಪಯೋಗಿ ಸೂಕ್ಷ್ನಾಣು ಮಿಶ್ರಿತ ಪುಡಿಯನ್ನು ನೀರಿನಲ್ಲಿ ಬೆರೆಸಿ, ಇಂತಹ ತಿಪ್ಪೆಗುಂಡಿಗಳ ಮೇಲೆ ಹಾಕಿ, ಅದನ್ನು ಕೆಲವೇ ದಿನಗಳ ಅವಧಿಯಲ್ಲಿ ಉತ್ತಮ ಫಲವತ್ತತೆಯ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವನ್ನು ರೈತರು ಅನುಸರಿಸಿ, ಗ್ರಾಮಗಳ ಸ್ವಚ್ಛತೆಗೆ ಜಿಲ್ಲಾ ಪಂಚಾಯತಿ ಯೋಜಿಸಿದ್ದು, ಗ್ರಾಮದ ರೈತರು ಇದರ ಬಳಕೆಗೆ ಮುಂದಾಗಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ ಕಾರ್ಯಕ್ರಮ ಕುರಿತು ಮಾತನಾಡಿದರು.  ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಮ್ಯಾಗಳಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ದೇವಪ್ಪ ಗುಡ್ಲಾನೂರು, ರಮೇಶ ಚೌಡ್ಕಿ,  ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ತಳವಾರ, ಸದಸ್ಯರಾದ ಭೀಮಣ್ಣ ಹುಲ್ಲಾನೂರು, ಶರಣಪ್ಪ ಚಿಂತಾಮಣಿ, ಯಮನೂರಪ್ಪ ಹಳ್ಳಿಕೇರಿ, ಜಗದೀಶ ಓಜನಹಳ್ಳಿ, ಗ್ರಾಮದ ಚಂದ್ರಶೇಖರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಮಂಜುನಾಥ ನದಾಫ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಂಜುಳಾ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.  ಸಮಾರಂಭಕ್ಕೂ ಪೂರ್ವದಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಹಲಗೇರಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣ್ಯರು ಕಸಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ಹೊಂದಬೇಕೆಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

Leave a Reply

Top