ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿವಿಧ ಯೋಜನೆಗಳು : ಅರ್ಜಿ ಆಹ್ವಾನ

 ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ೨೦೧೪-೧೫ ನೇ ಸಾಲಿಗಾಗಿ ಈ ಕೆಳಕಂಡ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಯಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
  ಅರ್ಜಿ ಸಲ್ಲಿಸಬಯಸುವವರು ಕೊಪ್ಪಳ ಜಿಲ್ಲೆಯ ಖಾಯಂ ವಾಸಿಯಾಗಿದ್ದು, ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಭೌದ್ಧರು, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದವರಾಗಿರಬೇಕು.  ಕುಟುಂಬದ ವಾರ್ಷಿಕ ವರಮಾನ ರೂ. ೨೨,೦೦೦ ಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ವಯೋಮಿತಿಯಲ್ಲಿರಬೇಕು.
ಸ್ವಾವಲಂಬನಾ ಯೋಜನೆ : ಈ ಯೋಜನೆಯಲ್ಲಿ ವಿವಿಧ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳ ಮೂಲಕ ಮತೀಯ ಅಲ್ಪಸಂಖ್ಯಾತರ ಜನರು ಕೈಗೊಳ್ಳುವ ವಿವಿಧ ವ್ಯಾಪಾರ, ಉದ್ಯೋಗ, ಸೇವಾ ಉದ್ದಿಮೆಗಳು,  ಕೈಗಾರಿಕೆಗಳು ಹಾಗೂ ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದ ಯೋಜನೆಗಳಿಗೆ ರೂ.೫,೦೦,೦೦೦/- ಲಕ್ಷಗಳವರೆಗೆ ಸಾಲ ಸೌಲಭ್ಯ ಇದ್ದು ಇದರಲ್ಲಿ ನಿಗಮದಿಂದ ರೂ.೫೦೦೦ ಗಳಿಂದ ಗರಿಷ್ಠ ರೂ.೨೫,೦೦೦/- ಗಳವರೆಗೆ ಸಹಾಯಧನ ಸೌಲಭ್ಯವಿದ್ದು, ರೂ.೨೫೦೦೦ ಗಳಿಂದ ರೂ.೫,೦೦,೦೦೦/- ವರೆಗಿನ ಘಟಕದ ಯೋಜನೆಗಳಿಗೆ ಶೇ.೨೦% ರಷ್ಟು ವಾರ್ಷಿಕ ಶೇ.೬ ರ ಬಡ್ಡಿದರದಲ್ಲಿ ಮಾರ್ಜಿನ ಹಣ ಸಾಲವನ್ನು ಈ ನಿಗಮದಿಂದ ಒದಗಿಸಿ ಮತ್ತು ಉಳಿದ ಮೊತ್ತವು ರಾಷ್ಟ್ರೀಕೃತ ಬ್ಯಾಂಕ್/ಹಣಕಾಸು ಸಂಸ್ಥೆಗಳ ಮೂಲಕ ಚಾಲ್ತಿಯಲ್ಲಿರುವ ಬಡ್ಡಿದರದಲ್ಲಿರುವ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. 
ಅರಿವು ಯೋಜನೆ : ಈ ಯೋಜನೆಯಡಿ ವೃತ್ತಿಪರ ಕೋರ್ಸುಗಳಾದ ಎಂ.ಬಿ.ಬಿ.ಎಸ್., ಬಿ.ಬಿ.ಎ, ಬಿ.ಇ., ಎಂ.ಇ. ಡಿ.ಎಡ್., ಬಿ.ಎಡ್, ಎಂ.ಸಿ.ಎ., ಎಮ್.ಎ., ಎಂ.ಎಸ್‌ಸಿ., ಬಿ.ಡಿ.ಎಸ್., ಬಿ.ಎ.ಎಂ.ಎಸ್. ಎಂ.ಬಿ.ಎ., ಎಂ.ಡಿ., ಎಂ.ಎ., ಬಿಬಿಎಂ, ಬಿಸಿಎ, ಬಿಎಸ್‌ಸಿ, ಎಲ್.ಎಲ್.ಬಿ., ಬಿ.ಎಸ್.ಡಬ್ಲ್ಯೂ, ಎಂ.ಸಿ.ಡಬ್ಲ್ಯೂ, ಡಿಪ್ಲೋಮಾ, ಐಟಿಐ, ಎಂಎಸ್ (ಅಗ್ರಿಕಲ್ಚರ್), ಬಿ.ಫಾರ್ಮ, ಎಂ.ಫಾರ್ಮ, ಬಿ.ಎಸ್.ಸಿ. (ನರ್ಸಿಂಗ್), ಬಿ.ಎಸ್.ಸಿ. (ಬಯೋಟೇಕ್), ಎಮ್.ಎಸ್.ಡಬ್ಲ್ಯೂ ಇತ್ಯಾದಿ ಕೋರ್ಸ್‌ಗಳಿಗೆ ಅವರ ವ್ಯಾಸಂಗಕ್ಕೆ ಅನುಗುಣವಾಗಿ ಗರಿಷ್ಠ ಪ್ರತಿ ವರ್ಷ ರೂ.೫೦,೦೦೦/- ಗಳವರೆಗೆ ಸಾಲವನ್ನು ನೀಡಲಾಗುವುದು, ಅಥವಾ ಸಿ.ಇ.ಟಿ.ಯವರು ನಿಗದಿಪಡಿಸಿದ ಶುಲ್ಕದಂತೆ ಸಾಲವನ್ನು ಬಿಡುಗಡೆ ಮಾಡಲಾಗುವುದು.
ಶ್ರಮಶಕ್ತಿ ಸಾಲ ಯೋಜನೆ : ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಗ್ರಾಮೀಣ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲ ಕಸುಬುದಾರರ ಕುಶಲತೆ ಮತ್ತು ಇತರೆ ಸಣ್ಣ ಪ್ರಮಾಣದ ವ್ಯಾಪಾರವನ್ನು ಅಭಿವೃದ್ದಿಗೊಳಿಸಲು/ಸ್ವಂತ ಉದ್ದಿಮೆಯನ್ನು ತೆಗೆದುಕೊಳ್ಳಲು ಯೋಜನಾ ಘಟಕಕ್ಕೆ ರೂ.೨೫,೦೦೦/- ಗಳವರೆಗೆ ಸಾಲ ಸೌಲಭ್ಯವಿದ್ದು, ಸಾಲವನ್ನು ಶೇ.೭೫ ರಷ್ಟು ಸಾಲ ಮತ್ತು ಶೇ.೨೫ ರಷ್ಟು ಬ್ಯಾಕ್ ಎಂಡ್ ಸಹಾಯಧನ ಎಂದು ಪರಿಗಣಿಸಲಾಗುತ್ತದೆ. ಈ ಸಾಲವನ್ನು ವಾರ್ಷಿಕ ಶೇ.೪ ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕಾಗುತ್ತದೆ.
 (ಮೈಕ್ರೋ) ಸಣ್ಣ ಸಾಲ ಯೋಜನೆ : ಈ ಯೋಜನೆಯಡಿ ನಗರ ಮತ್ತು ಗ್ರಾಮಗಳಲ್ಲಿ ವಾಸಿಸುವ ಮತೀಯ ಅಲ್ಪಸಂಖ್ಯಾತರ ಜನರು ಕುಶಲ ಅಥವಾ ಕುಶಲಿಯಲ್ಲದ್ದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ರೂ. ೧೦,೦೦೦/- ಗಳ ಸಾಲವನ್ನು ಗರಿಷ್ಠ ೨೫೦೦/- ಗಳ ಸಹಾಯಧನದೊಂದಿಗೆ ವಾರ್ಷಿಕ ಶೇ. ೫ ರ ಬಡ್ಡಿದರದಲ್ಲಿ, ಕನಿಷ್ಟ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪು/ಸಂಘಗಳಿಗೆ ನಿಗಮದಿಂದ ಸಾಲ ಸೌಲಭ್ಯ ಒದಗಿಸಲಾಗುವುದು. 
ಗಂಗಾ ಕಲ್ಯಾಣ ಯೋಜನೆ : ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ೨ ರಿಂದ ೫ ಏಕರೆ ಖುಷ್ಕಿ ಜಮೀನು ಹೊಂದಿದ್ದು ಇವರ ವಾರ್ಷಿಕ ವರಮಾನ ರೂ.೨೨,೦೦೦/- ಗಳನ್ನು ಮೀರಿರಬಾರದು ವ್ಯವಸಾಯ ವೃತ್ತಿಯನ್ನು ಅವಲಂಬಿಸಿರಬೇಕು ಅಭ್ಯರ್ಥಿಗಳ ೩ ಭಾವಚಿತ್ರ, ರೇಷನ್ ಕಾರ್ಡ ಝರಾಕ್ಸ್, ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಮೀನಿನ ಪಹಣಿ ಪತ್ರ, ಜಮೀನು ನೀರಾವರಿ ಸೌಲಭ್ಯ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಮುಂತಾದ ಅಗತ್ಯ ದಾಖಲಾತಿಗಳನ್ನು ಸ್ವಯಂ ಲಿಖೀತ ಅರ್ಜಿಯೊಂದಿಗೆ ಸಲ್ಲಿಸಬೇಕು.
ಮನೆ ನಿರ್ಮಾಣ ಮಾಡಲು ಸಹಾಯಾನುದಾನ ಯೋಜನೆ : ಈ ಯೋಜನೆಯಡಿ  ೧/೪/೨೦೦೭ ರಿಂದ ರಾಷ್ಟ್ರೀಕೃತ ಬ್ಯಾಂಕ್/ಅಂಗಿಕೃತ ಹಣಕಾಸು ಸಂಸ್ಥೆಗಳಿಂದ ಗರಿಷ್ಠ ರೂ.೫ ಲಕ್ಷ ರೂ.ಗಳ ವರೆಗೆ ಈಗಾಗಲೇ ಸಾಲವನ್ನು ಪಡೆದು ಮನೆ ನಿರ್ಮಾಣ ಮಾಡಿದ ಅಲ್ಪಸಂಖ್ಯಾತರಿಗೆ ರೂ.೧ ಲಕ್ಷಗಳನ್ನು ಮಿರದಂತೆ ಫಲಾನುಭವಿಗಳಿಗೆ (ಬಡ್ಡಿ ರೀಯಾಯತಿ) ಸಹಾಯಧನ ರೂಪದಲ್ಲಿ ನೀಡಲಾಗುವುದು. 
  ಜಿಲ್ಲೆಯ ಅರ್ಹ ಅಲ್ಪಸಂಖ್ಯಾತರ ಜನರು ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಜೂ.೩೦ ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಖುದ್ದಾಗಿ ಇಲ್ಲವೆ ದೂರವಾಣಿ ಸಂ: ೦೮೫೩೯-೨೨೫೦೦೮ ಕ್ಕೆ ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಝಾಕೀರ ಹುಸೇನ ಕುಕನೂರು ಅವರು  ತಿಳಿಸಿದ್ದಾರೆ.
Please follow and like us:
error