ಯುವ ಜನತೆ ಪ್ರಜಾಪ್ರಭುತ್ವದ ಕರ್ತವ್ಯ ನಿಭಾಯಿಸಿ- ಡಾ. ತ್ಯಾಗರಾಜನ್

ಕೊಪ್ಪಳ ಜ. ೨೫ (ಕ ವಾ) ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಮತದಾನದ ಹಕ್ಕು ಪಡೆಯುವ ಯುವ ಜನತೆ, ಪ್ರಜಾಪ್ರಭುತ್ವದ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಕರೆ ನೀಡಿದರು.
     ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಕರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು.  ಅರ್ಹ ಯುವಜನತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು.  ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವ ಜನತೆ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಯುವ ಮತದಾರರಿಗೆ ಕರೆ ನೀಡಿದರು.
     ಸಮಾರಂಭದಲ್ಲಿ ನೂತನ ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು
ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿದ ಕೂಡಲೆ, ಯುವ ಮತದಾರರು ಮಹತ್ವದ
ಜವಾಬ್ದಾರಿ ಪಡೆದಿದ್ದೇವೆ ಎನ್ನುವುದನ್ನು ಮರೆಯಬಾರದು.  ಭಾರತ ಚುನಾವಣಾ ಆಯೋಗ, ದೇಶದ
ಮತದಾರರು ಹಾಗೂ ಯುವಕರಲ್ಲಿ ಮತದಾನದ ಮಹತ್ವದ ಬಗ್ಗೆ ಮತದಾರರ ದಿನಾಚರಣೆ ಮೂಲಕ ಜಾಗೃತಿ
ಮೂಡಿಸಲು ಮುಂದಾಗಿದೆ ಎಂದರು.
      ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು, ಭಾರತ ದೇಶ ಅತ್ಯಂತ ಹೆಚ್ಚು ಯುವ ಮತದಾರರನ್ನು ಹೊಂದಿರುವ ದೇಶವಾಗಿದೆ. ಮಾಧ್ಯಮಗಳೂ ಸಹ ರಾಜಕೀಯ ಸಮಾಜೀಕರಣಗೊಳಿಸಲು ಶ್ರಮಿಸಿದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಸಿಗಲಿದೆ ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪ ವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಸಿಲ್ದಾರ್ ಪುಟ್ಟರಾಮಯ್ಯ ಉಪಸ್ಥಿತರಿದ್ದರು, ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.

Please follow and like us:
error