ರಾಜ್ಯದಲ್ಲಿ ನೂತನ ಪುನರ್ವಸತಿ ನೀತಿ ರೂಪಿಸಲು ಸರ್ಕಾರದ ಚಿಂತನೆ- ಎಚ್.ಕೆ. ಪಾಟೀಲ್

ಕೊಪ್ಪಳ ಆ. ೦೩ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಂದ ಮುಳುಗಡೆಯಾಗುವ ಗ್ರಾಮಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು, ರೈತರ ಬದುಕು ಆಧಾರಿತ ನೂತನ ಪುನರ್ವಸತಿ ನೀತಿ ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು.
     ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ನೀರಾವರಿ ಯೋಜನೆಗಳಿಗಾಗಿ ಮುಳುಗಡೆ ಆಗಿರುವ ಗ್ರಾಮಗಳ ರೈತರಿಗೆ ಬದುಕು ಕಟ್ಟಿಕೊಳ್ಳಲು ಸಮರ್ಪಕವಾಗಿ ಪುನರ್ವಸತಿ ಗ್ರಾಮಗಳನ್ನು ರೂಪಿಸದೇ ಇರುವುದರಿಂದ, ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆ ಎದುರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.  ರೈತರು ನೆಲೆ ಕಂಡುಕೊಂಡಿರುವ ಗ್ರಾಮಗಳಲ್ಲಿ ಅವರ ಕೃಷಿ ಚಟುವಟಿಕೆ ಆಧಾರದಲ್ಲಿ ತಮ್ಮ ಮನೆಯನ್ನು ನಿರ್ಮಿಸಿಕೊಂಡಿರುತ್ತಾರೆ.  ಆದರೆ ನೀರಾವರಿ ಯೋಜನೆಗಳಿಗೆ ಮನೆಗಳನ್ನು ಕಳೆದುಕೊಳ್ಳುವ ಇವರು, ಪುನರ್ವಸತಿ ಕೇಂದ್ರಗಳಲ್ಲಿ ನೀಡುವ ಕಡಿಮೆ ಅಳತೆಯ ನಿವೇಶನದಿಂದ ತಮ್ಮ ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳಿಗೆ ತೊಂದರೆ ಎದುರಿಸುತ್ತಿದ್ದಾರೆ.  ಇದನ್ನು ಮನಗಂಡಿರುವ ಸರ್ಕಾರ, ರೈತಾಪಿ ಜನರ ಬದುಕನ್ನು ಆಧರಿಸಿ, ಅಂದರೆ ದನದ ಕೊಟ್ಟಿಗೆ ಮನೆ, ಹಿತ್ತಲ ಮನೆ, ಬಣವಿಗಾಗಿ ಸ್ಥಳ, ಇವೆಲ್ಲವನ್ನು ಅಳವಡಿಸಿಕೊಂಡ ನೂತನ ಪುನರ್ವಸತಿ ನೀತಿ ರೂಪಿಸಲು   ಚಿಂತನೆ ನಡೆಸಿದೆ.  ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲರು ಹೇಳಿದರು.
ಮೋಡಬಿತ್ತನೆಗೆ ಕ್ರಮ : ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದೆ, ಮಳೆ ಕೊರತೆಯ ಕಾರಣ ಬರದ ಛಾಯೆ ಆವರಿಸಿದೆ.  ರೈತರ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಸರ್ಕಾರಕ್ಕೆ ಬಂದಿರುವ ವರದಿಯನ್ವಯ, ಮೀಟರ್ ಬಡ್ಡಿ ದಂಧೆಯಿಂದಾಗಿ ರೈತರು ಬಹಳಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.   ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವಾಗಿದೆ.  ಸರ್ಕಾರ ಈಗಾಗಲೆ ಇದನ್ನು ಸಾಮಾಜಿಕ ಹಿಂಸೆ ಎಂಬುದಾಗಿ ಪರಿಗಣಿಸಿದ್ದು, ನಿಗದಿಗಿಂತ ಹೆಚ್ಚಿನ ದರದಲ್ಲಿ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಈಗಾಗಲೆ ಸೂಚನೆ ನೀಡಿದೆ.  ಅಲ್ಲದೆ ಯಾವುದೇ ಬ್ಯಾಂಕ್‌ಗಳು ರೈತರಿಗೆ ನೋಟೀಸ್ ನೀಡುವುದಾಗಲಿ, ವಸೂಲಾತಿಗೆ ಕ್ರಮ ಜರುಗಿಸುವುದಾಗಲಿ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದೆ.  ಮಳೆಯ ಕೊರತೆ ನೀಗಿಸಲು ಸರ್ಕಾರ ರಾಜ್ಯದಲ್ಲಿ ಮೋಡ ಬಿತ್ತನೆ ನಡೆಸಲು ಈಗಾಗಲೆ ನಿರ್ಣಯ ಕೈಗೊಂಡಿದೆ.  ಈ ಯತ್ನ ಫಲ ನೀಡಿದಲ್ಲಿ, ಮಳೆಯ ಕೊರತೆ ನೀಗಿ, ರೈತರಲ್ಲಿ ಬದುಕಿನ ವಿಶ್ವಾಸ ಮೂಡುವುದರ ಜೊತೆಗೆ, ಆತ್ಮಸ್ಥೈರ್ಯ ಹೆಚ್ಚಿ, ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖವಾಗುವ ಆಶಾಭಾವನೆ ಹೊಂದಿದ್ದೇವೆ ಎಂದು ಸಚಿವರು ಹೇಳಿದರು.
ತನಿಖೆ ಹೊಣೆ ಒಂಬುಡ್ಸ್‌ಮನ್ ಹೆಗಲಿಗೆ : ಜಿಲ್ಲೆಯ ಯಲಬುರ್ಗಾ ತಾಲೂಕು ಮಂಡಲಗೇರಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕಾರಣದಿಂದ, ಅಲ್ಲಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.  ಈ ಕುರಿತು ಸಮರ್ಪಕವಾಗಿ ತನಿಖೆ ನಡೆಸಲು ಜಿಲ್ಲೆಯ ಒಂಬುಡ್ಸ್‌ಮನ್ ಅವರಿಗೆ ಹೊಣೆಗಾರಿಕೆ ನೀಡಲಾಗುವುದು.  ಅವರು ಸಲ್ಲಿಸುವ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು.
    ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error