ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಹೆಚ್ಚಾಗಲಿ – ಅಲ್ಲಮಪ್ರಭು ಬೆಟ್ಟದೂರು.

ಕೊಪ್ಪಳ -03-  ಪುಸ್ತಕ ಓದುವುದರಿಂದ ಮನುಷ್ಯ ಪರಿಪೂರ್ಣತೆಯ ಕಡೆಗೆ ಹೋಗಬಲ್ಲ, ಹಾಗಾಗಿ ಮನುಷ್ಯನ ಸಂಗಾತಿ ಪುಸ್ತಕಗಳೇ ಆಗಿವೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟರು.
    ಕನ್ನಡ ಪುಸ್ತಕ ಪ್ರಾಧಿಕಾರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡ ಹಾಗೂ ವಿದ್ಯಾರ್ಥಿ  ಪುಸ್ತಕ ಪ್ರೇಮಿ ಬಳಗ ಸಂಯುಕ್ತ ಆಶ್ರಯದಲ್ಲಿ ಇಂದು ಇರಕಲ್ಲಗಡ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದು ‘ನನ್ನ ನೆಚ್ಚಿನ ಪುಸ್ತಕ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದು ಭಾಷಣ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮುಂದುವರೆದು ಮಾತನಾಡಿದ ಅವರು ಟಿ.ವಿ ಹಾವಳಿಯಿಂದ ಓದಿನ ಅಭಿರುಚಿ ಕಡಿಮೆಯಾಗುತ್ತಿದೆ. ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆಗೆ ಹಿನ್ನಡೆಯಾಗಬಾರದೆಂದು ಪ್ರಾಧಿಕಾರ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಸೂಕ್ತ ಎಂದರು. ವಿದ್ಯಾರ್ಥಿಗಳು ಹಳಗನ್ನಡ/ನಡುಗನ್ನಡ ಹಾಗೂ ಹೊಸಗನ್ನಡ ಎನ್ನದೇ ತಮ್ಮ ಇಷ್ಟವಾದ ಭಾಷೆಯನ್ನು ಓದಬೇಕೆಂದು ಸಲಹೆ ನೀಡಿದರು. ತೀರ್ಪುಗಾರರಾಗಿ ಆಗಮಿಸಿದ್ದ ಸಾಹಿತಿ ಅಕ್ಬರ್ .ಸಿ. ಕಾಲಿಮಿರ್ಚಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯಿಕ ಪುಸ್ತಕಗಳನ್ನು ಓದಬೇಕೆಂದರು. ಭಾಷಾ ಪ್ರೌಢಿಮೆ ಹಲವು ಕೃತಿಗಳನ್ನು ಓದುವುದರಿಂದ ಕರಗತವಾಗುತ್ತದೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೆ. ಎಚ್. ಛತ್ರದ್ ಮಾತನಾಡಿ ವಿದ್ಯಾರ್ಥಿ ಸಮಾಜಮುಖಿಯಾಗಿ ಬದುಕಬೇಕೆಂದರೆ ಮೊದಲು ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದರು. ಓದಿನ ಖುಷಿಗಿಂತಲೂ ಬೇರೊಂದು ಖುಷಿ ನಮಗೆ ಬೇರೆಲ್ಲೂ ಸಿಗದೆಂದರು.  ಬಾಲವಿಕಾಸ ಅಕಾಡೆಮಿ ಸದಸ್ಯ ಗವಿಸಿದ್ಧಪ್ಪ ಕರ್ಕಿಹಳ್ಳಿ, ವರದಿಗಾರ ಪರಮಾನಂದ ಯಾಳಗಿ ಹಾಗೂ ವಿದ್ಯಾರ್ಥಿ ಪುಸ್ತಕ ಪ್ರೇಮಿ ಬಳಗದ ಅಧ್ಯಕ್ಷ ಅವಿನಾಶ ಮಾತನಾಡಿದರು.
    ಹಿರಿಯ ಪ್ರಾಧ್ಯಾಪಕ ಎಚ್. ಎಮ್. ಗುಡಿಹಿಂದಿನ ವೇದಿಕೆಯ ಮೇಲೆ ಇದ್ದರು. ಸಹಾಯಕ ಪ್ರಾಧ್ಯಾಪಕಿ ಡಾ|| ಶ್ರೀಮತಿ ಹುಲಿಗೆಮ್ಮ. ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
    ಬಿ.ಎ ತರಗತಿ ವಿದ್ಯಾರ್ಥಿನಿ ನಿರ್ಮಲಾ ಕುಂಬಾರ ಸ್ವಾಗತಿಸಿದರು. ಪ್ರತಿಭಾ ಸಂಗಟಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಗೆ ಜ್ಯೋತಿ ಉಪ್ಪಾರ ವಂದಿಸಿದರು.

Leave a Reply