ಮಾನವ ಹಕ್ಕುಗಳ ಉಲ್ಲಂಘನೆ ದೇಶದ ಅಭಿವೃದ್ಧಿಗೆ ಮಾರಕ- ಕೆ. ನಾಗರತ್ನ.

ಕೊಪ್ಪಳ ಡಿ.೧೦ (ಕ.ವಾ )ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾದಲ್ಲಿ ದೇಶದ ಅಭಿವೃದ್ಧಿಗೆ ಮಾರಕವಾಗುವುದಲ್ಲದೆ, ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಕಳವಳ ವ್ಯಕ್ತಪಡಿಸಿದರು.
    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಸಂವಿಧಾನದ ಮೂಲಭೂತ ತತ್ವಗಳನ್ನು ಆದರಿಸಿಯೇ ನಮ್ಮ ದೇಶದಲ್ಲಿ ಎಲ್ಲರಿಗೂ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ೧೯೪೮ ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ತೀವ್ರ ಸ್ಪಂದನೆ ನೀಡಿದ ಪರಿಣಾಮವಾಗಿ, ಆಗಿನಿಂದಲೂ ಮಾನವ ಹಕ್ಕುಗಳ ರಕ್ಷಣಾ ದಿನವನ್ನು ಆಚರಿಸಲಾಗುತ್ತಿದೆ. ಮಗುವಿನ ಹುಟ್ಟಿನಿಂದ ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ ಜೀವನದುದ್ದಕ್ಕೂ ಆತನಿಗೆ ಹಕ್ಕುಗಳನ್ನು ನಮ್ಮ ಸಂವಿಧಾನ ದಯಪಾಲಿಸಿದೆ. ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು.  ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ.  ಮಾನವ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಲಾಗಿದೆ.  ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರು, ಗಾಳಿ ಹಾಗೂ ಪರಿಸರವನ್ನು ಪಡೆದುಕೊಂಡು ಗೌರವಯುತವಾಗಿ ಬಾಳುವ ಹಕ್ಕನ್ನು ಹೊಂದಿದ್ದಾರೆ.  ಆದರೆ ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಪರಿಸರ ಮಾಲಿನ್ಯ ಹೆಚ್ಚುತ್ತಿದೆ.  ನಗರೀಕರಣ, ಕೈಗಾರಿಕರಣದ ಜೊತೆ ಜೊತೆಗೆ ನಾಗರಿಕತೆಯ ಅಭಿವೃದ್ಧಿಯತ್ತ ಹಾಗೂ ಅವರ ಹಕ್ಕುಗಳ ರಕ್ಷಣೆಯತ್ತಲೂ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.  ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾದಲ್ಲಿ ಅದು ದೇಶದ ಪ್ರಗತಿಗೆ ಮಾರಕವಾಗಲಿದೆ.  ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಮಾನವ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸಲು ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ.  ಇದರ ನೆಲಗಟ್ಟಿನಲ್ಲಿಯೇ ಮಾನವ ಹಕ್ಕುಗಳ ರಕ್ಷಣೆಗೂ ಸಹ ಕಾಯ್ದೆ ರೂಪಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಅರಿವನ್ನು ಹೊಂದುವುದರ ಜೊತೆಗೆ, ಇತರರಿಗೂ ಜಾಗೃತಿ ಮೂಡಿಸಬೇಕು.  ಹಕ್ಕುಗಳ ಉಲ್ಲಂಘನೆಯನ್ನು ಸಹಿಸಿಕೊಂಡು ಬಾಳುವುದು ಸಮಂಜಸವಲ್ಲ ಎಂದರು.
     ಮಾನವ ಹಕ್ಕುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರಭುರಾಜ ನಾಯಕ್ ಅವರು, ಸಮಾನತೆ, ಸ್ವಾತಂತ್ರ್ಯತೆ ಹಾಗೂ ಸಹೋದರತ್ವ ಇವು ಮಾನವ ಹಕ್ಕುಗಳ ರಕ್ಷಣೆಯ ಮೂಲಾಧಾರವಾಗಿದೆ.  ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು.  ಯಾವುದೇ ಕಾರಣದಿಂದ
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ,  ನ್ಯಾಯವಾದಿಗಳಾದ ಸಂಧ್ಯಾ ಮಾದಿನೂರ, ಹನುಮಂತರಾವ್ ಕಾರ್ಯಕ್ರಮ ಕುರಿತು ಮಾತನಾಡಿದರು.  ನ್ಯಾಯಾಧೀಶರುಗಳಾದ ಬಿ. ದಶರಥ್ ಹಾಗೂ ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಬದ್ಧರಿರುವುದಾಗಿ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಲಾಯಿತು.

ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ.  ಮಾನವ ಹಕ್ಕುಗಳ ಬಗ್ಗೆ ಕೇವಲ ದಿನಾಚರಣೆಯಂದು ಚರ್ಚಿಸದೆ,  ವರ್ಷದುದ್ದಕ್ಕೂ ಇದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಾಗಬೇಕು ಎಂದರು.

Please follow and like us:
error