fbpx

ಸಾಧಕರನ್ನು ಬದುಕಿದ್ದಾಗಲೆ ಗೌರವಿಸುವ ಕೆಲಸ ಆಗಬೇಕು- ಅಲ್ಲಮಪ್ರಭು ಬೆಟ್ಟದೂರ

 

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಅವರ ಜೀವಂತ ಇರುವಾಗಲೇ ಗುರುತಿಸಿ, ಗೌರವಿಸುವ ಕೆಲಸವಾಗಬೇಕು.  ಆಗ ಮಾತ್ರ ಸಾಧಕರಿಗೆ ತಮ್ಮ ಸಾಧನೆಯ ಹಿನ್ನೆಲೆ, ಬದುಕು, ಕಷ್ಟ-ಸುಖಗಳ ಬಗ್ಗೆ ಮೆಲುಕು ಹಾಕಲು ಪೂರಕವಾಗುತ್ತದೆ ಎಂದು ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಅಭಿಪ್ರಾಯಪಟ್ಟರು.

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲೆಯ ಹಿರಿಯ ಕಲಾವಿದ ಕುಕನೂರ ಬಾಬಣ್ಣ ಕಲ್ಮನಿ ಅವರ ಜೀವನ-ಸಾಧನೆಗಳ ಕುರಿತು ಭಾಗ್ಯನಗರದ ಗ್ರಾ.ಪಂ. ಆವರಣದಲ್ಲಿ ಹಮ್ಮಿಕೊಂಡ ವಿಚಾರಸಂಕಿರಣ ಹಾಗೂ ಸಂವಾದ ಗೋಷ್ಠಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ನಾಟಕ, ಸಂಗೀತ, ಜಾನಪದ ಕ್ಷೇತ್ರಗಳಲ್ಲಿ ಕೊಪ್ಪಳ ಜಿಲ್ಲೆಯು ಶ್ರೀಮಂತವಾಗಿದ್ದು, ಈ ಕ್ಷೇತ್ರಗಳ ವಿವಿಧ ಸಾಧಕರನ್ನು ಗುರುತಿಸುವ ಕೆಲಸವಾಗಬೇಕು.  ನೇಪಥ್ಯಕ್ಕೆ ಸರಿಯುತ್ತಿರುವ ಸಾಧಕರನ್ನು ಪುನರ್ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಸಾಧಕರಿಗೆ ಉತ್ತೇಜನ ನೀಡುತ್ತದೆ ಎಂದರು.  ನಂತರ ಅಲ್ಲಮಪ್ರಭು ಬೆಟ್ಟದೂರ ಅವರು, ಬಾಬಣ್ಣ ಕಲ್ಮನಿ ಅವರ ಜೀವನದ ಸಾಧನೆಯ ಬಗ್ಗೆ ಬೆಳಕು ಚೆಲ್ಲುವ ನುಡಿಗಳನ್ನಾಡಿದರು.
  ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಅವರು ಅಧ್ಯಕ್ಷತೆ ವಹಿಸಿದ್ದರು.  ಕುಕನೂರು ಬಾಬಣ್ಣ ಕಲ್ಮನಿ ಅವರ ಒಡನಾಡಿಗಳಾದ ಡಾ. ಕೆ.ಬಿ. ಬ್ಯಾಳಿ ಅವರು ಬಾಬಣ್ಣ ಅವರೊಡನೆ ಕಳೆದ ದಿನಗಳನ್ನು ಮೆಲುಕು ಹಾಕಿದರು.  ನಂತರ ನಡೆದ ವಿಚಾರಸಂಕಿರಣದಲ್ಲಿ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್, ಮೆಹಬೂಬಿ ಬಾಬಣ್ಣ ಕಲ್ಮನಿ, ಎಸ್.ವಿ. ಪಾಟೀಲ್ ಗುಂಡೂರ, ಸಾವಿತ್ರಿ ಮುಜುಂದಾರ್ ಅವರು ಬಾಬಣ್ಣ ಕಲ್ಮನಿ ಅವರ ಜೀವನದ ವಿವಿಧ ಆಯಾಮಗಳ ಕುರಿತು ವಿಚಾರಗಳನ್ನು ಮಂಡಿಸಿದರು.  ಸಂವಾದ ಗೋಷ್ಠಿಯಲ್ಲಿ ರಂಗ ಸಂಘಟಕ ಅರಳಿಹಳ್ಳಿ ರೇವಣಸಿದ್ದಯ್ಯ, ಸಿದ್ದಲಿಂಗಪ್ಪ ಕೊಟ್ನೆಕಲ್, ಪ್ರಮೋದ್ ತುರ್ವಿಹಾಳ, ಕೊಟ್ರಪ್ಪ ಚೋರನೂರ ಅವರು ಬಾಬಣ್ಣ ಕಲ್ಮನಿ ಅವರೊಂದಿಗೆ, ಅವರ ಕಲಾಜೀವನದ ಬಗ್ಗೆ ಸಂವಾದ-ಚರ್ಚೆ ನಡೆಸಿದರು.  ಕುಕನೂರು ಬಾಬಣ್ಣ ಕಲ್ಮನಿ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಬಸವರಾಜ ಆಕಳವಾಡಿ ಮತ್ತಿತರರು ಉಪಸ್ಥಿತರಿದ್ದರು.  ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
Please follow and like us:
error

Leave a Reply

error: Content is protected !!