You are here
Home > Koppal News > ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

ಕೊಪ್ಪಳ ಏ. : ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ’ಮಿಷನ್ ಇಂದ್ರಧನುಷ್’ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ನಗರದಲ್ಲಿ ಮಂಗಳವಾರ ಚಾಲನೆ ನೀಡಿದರು.
  ನಗರದ ಗಾಂಧಿನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು, ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಗಂಟಲು ಮಾರಿ, ಪೋಲಿಯೋ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ರೋಗಗಳನ್ನು ತಡೆಗಟ್ಟಲು ಏ. ೭ ರಿಂದ ಹಮ್ಮಿಕೊಳ್ಳಲಾಗಿರುವ ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿದ್ದು, ಜಿಲ್ಲೆಯ ೦೨ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ಲಸಿಕೆ ಲಭ್ಯವಾಗುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕ್ರಿಯಾ ಯೋಜನೆಯಂತೆ ೮೩೫ ಗರ್ಭಿಣಿ ಮಹಿಳೆಯರು ಹಾಗೂ ೦-೨ ವರ್ಷದ ೪೪೪೩ ಮಕ್ಕಳಿಗೆ ಅಭಿಯಾನದ ಲಾಭ ಕಲ್ಪಿಸಲು ಗುರಿ ಹೊಂದಲಾಗಿದೆ.  ಇದಕ್ಕಾಗಿ ಒಟ್ಟು ೨೪೦ ತಂಡಗಳನ್ನು ರಚಿಸಲಾಗಿದೆ.     ಇದೇ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಪ್ರತಿ ತಿಂಗಳು ೦೭ ನೇ ತಾರೀಕಿನಿಂದ ಏಳು ದಿನಗಳ ಕಾಲ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಡಿ ಫಲಾನುಭವಿಗಳು ಲಸಿಕೆ ಪಡೆಯುವಂತೆ ಕಾರ್ಯಕ್ರಮ ರೂಪಿಸಲಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುವಂತಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ಸಮಾಲೋಚಕಿ ಡಾ. ರುಚಿಕಾ ಅರೋರಾ, ಆರೋಗ್ಯ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಿವಣ್ಣರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ. ಲೋಕೇಶ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಶ್ರೀಧರ್, ಡಾ. ರಮೇಶ್ ಮೂಲಿಮನಿ, ಡಾ. ಎಸ್.ಬಿ. ದಾನರೆಡ್ಡಿ, ಡಾ. ವಿ.ಎಸ್. ಮಾಧಿನೂರ, ಡಾ. ಅಲಕಾನಂದ, ಡಾ. ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Leave a Reply

Top