fbpx

ಏ.೧೫ ರಂದು ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ

 ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕ್ಷೇತ್ರದ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯವರ ಮತ್ತು ಶ್ರೀ ಹಂಪಿ ವಿರೂಪಾಕ್ಷ ವಿದ್ಯಾರಣ ಪೀಠಾಧೀಶ್ವರರ ಸಹಿತವಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಏ.೧೫ ರ ಮಂಗಳವಾರ ಜರುಗಲಿದೆ ಎಂದು ಹಂಪಿಯ ಶ್ರೀ ಪಂಪಾವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯಂ.ಹೆಚ್.ಪ್ರಕಾಶ ರಾವ್ ಅವರು ತಿಳಿಸಿದ್ದಾರೆ.
ಈ ಜಾತ್ರಾ ಮಹೋತ್ಸವವು ಏ.೦೯ ರಿಂದ ೧೭ ರವರೆಗೆ ಜರುಗಲಿದ್ದು, ಏ.೯ ರಂದು ಸಂಧ್ಯಾ ಕಾಲದಲ್ಲಿ ಹಂಪಿ ಶ್ರೀ ಪಂಪಾ ವಿರುಪಾಕ್ಷೇಶ್ವರ ಸ್ವಾಮಿಯವರ ಬ್ರಹ್ಮೋತ್ಸವಾರಂಭ ಸ್ವಸ್ತಿ ವಾಚನ, ಆಚಾರ್ಯಾದಿ ಋತ್ವಿಗ್ವರಣ, ಯಾಗಶಾಲಾ ಪ್ರವೇಶ, ರಕ್ಷಾಬಂಧನ, ಅಂಕುರಾರ್ಪಣೆ, ವಾಸ್ತು ಪೂಜ, ಕಲಶ ಸ್ಥಾಪನೆ, ಭೇರಿತಾಡನ, ಧ್ವಜಾರೋಹಣ, ಬಲಿಪ್ರದಾನ, ಸಿಂಹವಾಹನೋತ್ಸವ ಶ್ರೀ ಚಕ್ರತೀರ್ಥ ಕೋದಂಡ ರಾಮ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರೀ ವಾಲ್ಮೀಕಿ ವಿರಚಿತ ಶ್ರೀ ಮದ್ರಾಮಾಯಣ ಪಾರಾಯಣ ಪ್ರಾರಂಭ ಹಾಗೂ ಜಪ ಪಾರಾಯಣಾಧಿಗಳು ಜರುಗಲಿವೆ. 
ಏ.೧೦ ರಂದು ಬೆಳಿಗ್ಗೆ ಸಿಂಹವಾಹನೋತ್ಸವ ಹಾಗೂ ರಾತ್ರಿ ಚಂದ್ರ ಮಂಡಲ ವಾಹನೋತ್ಸವ, ಏ.೧೧ ರಂದು ಬೆಳಿಗ್ಗೆ ಸೂರ್ಯಪ್ರಭವಾಹನೋತ್ಸವ ಹಾಗೂ ರಾತ್ರಿ ಶೇಷವಾಹನೋತ್ಸವ, ಏ.೧೨ ರಂದು ಬೆಳಿಗ್ಗೆ ಶೇಷವಾಹನೋತ್ಸವ ಹಾಗೂ ರಾತ್ರಿ ಪುಷ್ಪಮಂಟಪವಾಹನೋತ್ಸವ, ಏ.೧೩ ರಂದು ಬೆಳಿಗ್ಗೆ ೯.೩೦ ಕ್ಕೆ ಪುಷ್ಪ ಮಂಟಪವಾಹನೋತ್ಸವ ಹಾಗೂ ಶ್ರೀ ವಿರುಪಾಕ್ಷ ವಿದ್ಯಾರಣ್ಯ ಪೀಠದ ಪ್ರಪ್ರಥಮ ಪೀಠಾಧೀಶರಾಗಿದ್ದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಜಯಂತಿ ಹಾಗೂ ರಾತ್ರಿ ೯.೩೦ ಕ್ಕೆ ಶ್ರೀ ಪಂಪಾವಿರುಪಾಕ್ಷೇಶ್ವರ ಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ರಜತ ನಂದಿ ವಾಹನೋತ್ಸವ, ಏ.೧೪ ರಂದು ಬೆಳಿಗ್ಗೆ ಹಾಗೂ ರಾತ್ರಿ ರಜತ ಗಜವಾಹನೋತ್ಸವ, ಏ.೧೫ ರ ಚೈತ್ರ ಶುದ್ದ ಹುಣ್ಣಿಮೆಯಂದು ಬೆಳಿಗ್ಗೆ ೧೦.೪೫ ಕ್ಕೆ ರಥೋತ್ಸವ ಮಡಿತೇರು ಶ್ರೀ ಪಂಪಾವಿರುಪಾಕ್ಷೇಶ್ವರ ಸ್ವಾಮಿ ಹಾಗೂ ಶ್ರೀ ವಿರುಪಾಕ್ಷ ವಿದ್ಯಾರಣ್ಯ ಪೀಠಾಧಿಶ್ವರರ ನವರತ್ನ ಖಚಿತವಾದ ಕಿರೀಟದೊಂದಿಗೆ ಅವರ ಆರಾಧ್ಯ ದೈವವಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರ ಧ್ವಜಗಳ ಹರಾಜು ಹಾಗೂ ರಥೋತ್ಸವ ಸಾಯಂಕಾಲ ೪.೦೦ ಗಂಟೆಗೆ ಹಾಗೂ ಸಾಯಂಕಾಲ ೪.೩೫ ಕ್ಕೆ ಬ್ರಹ್ಮ ರಥೋತ್ಸವ, ಏ.೧೬ ರಂದು ರಾತ್ರಿ ರಜತ ಅಶ್ವವಾಹನೋತ್ಸವ ಮೃಗಯಾತ್ರೆ (ಕಿರಾತಾಲಂಕಾರ) ಕಡಬಿನ ಕಾಳಗ, ಏ.೧೭ ರಂದು ಬೆಳಿಗ್ಗೆ ಪೂರ್ಣಾಹುತಿ ವಸಂತೋತ್ಸವ, ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿಯ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ, ರಾ.೮.೩೦ ಕ್ಕೆ ಶ್ರೀ ಮನ್ಮುಖ ತೀರ್ಥದಲ್ಲಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ಉತ್ಸವ ಸಮಯದಲ್ಲಿ ಉತ್ಸವ ಮೂರ್ತಿಗೆ ಮಾಡುವ ದಿವ್ಯಾಲಂಕಾರಗಳನ್ನು ವೀಕ್ಷಿಸಲು ಭಕ್ತ ಮಹಾಶಯರೆಲ್ಲರೂ ತಮ್ಮ ಪರಿವಾರದೊಡನೆ ಆಗಮಿಸಿ ದೇವರ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಂಪಾವಿರುಪಾಕ್ಷೇಶ್ವರ ಸ್ವಾಮಿಯ ಸಂಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು  ಪಂಪಾವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಹಂಪಿಯ ಕಾರ್ಯನಿರ್ವಾಹಕ ಅಧಿಕಾರಿ ಯಂ. ಹೆಚ್.ಪ್ರಕಾಶ ರಾವ್ ಅವರು ಪ್ರಕಟಣೆಯ ಮೂಲಕ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
Please follow and like us:
error

Leave a Reply

error: Content is protected !!