‘ಮಾಟ’ ಮಾಡಿದ ಸಹಾಯಕಿಯ ಅಮಾನತುಗೊಳಿಸಿದ ಜಿಲ್ಲಾಧಿಕಾರಿಣಿ!

 ಬಹ್ರೈಚ್, : ಭಾರತ ದಲ್ಲಿ ಸಾಕ್ಷರತೆಯಿಂದ ಅತಿ ಮಾನವ ಶಕ್ತಿಗಳ ಮೇಲಿನ ನಂಬಿಕೆಯನ್ನು ಕಡಿಮೆಗೊಳಿಸಬಹುದು ಎಂದು ಹೇಳಲಿಕ್ಕಾಗುವುದಿಲ್ಲ. ತನ್ನ ಸಹಾಯಕಿಯೊಬ್ಬಳು ತನಗೆ ‘ಮಾಟ’ ಮಾಡಿಸಿ ದ್ದಾಳೆೆಂದು ಆಪಾದಿಸಿ, ಯುವ ಜಿಲ್ಲಾಧಿಕಾರಿಣಿಯೊಬ್ಬರು ಆಕೆಯನ್ನು ಅಮಾನತುಗೊಳಿಸಿದ ವಿಷಾದನೀಯ ಘಟನೆ ವರದಿಯಾಗಿದೆ.
ತನ್ನ ಮಲಗುವ ಕೋಣೆಗೆ ‘ಮಾಟ’ ಮಾಡಿದ ಆರೋಪದಲ್ಲಿ ಹೋಮ್‌ಗಾರ್ಡ್ ಮಿಥಿಲೇಶ್ ಸೈನಿ ಎಂಬಾಕೆಯನ್ನು ನವೆಂಬರ್ 15ರಂದು ಬೆಹ್ರೈಚ್ ಜಿಲ್ಲಾಧಿಕಾರಿ ಡಾ. ಪಿಂಕಿ ಜೊವೆಲ್ ಅಮಾನುತುಗೊಳಿಸಿದ್ದಾರೆನ್ನಲಾಗಿದೆ. ಆಕೆಯ ಮಲಗುವ ಕೋಣೆಯಲ್ಲಿ ಮಾಟಕ್ಕೆ ಬಳಸಿದ ಸಾಸಿವೆ ಕಾಳುಗಳನ್ನು ಕಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಣಿಯು ತನ್ನ ಸಹಾಯಕಿಯ ವಿರುದ್ಧ ಈ ಕ್ರಮ ಕೈಗೊಂಡಿರುವುದಾಗಿ ವರದಿಯೊಂದು ಹೇಳಿದೆ. ಜಿಲ್ಲಾಧಿಕಾರಿಯ ಅಧಿಕೃತ ನಿವಾಸದಲ್ಲಿ ಮಾಟಮಂತ್ರ ಮಾಡಿದುದಕ್ಕಾಗಿ ತಮ್ಮನ್ನು ಸೇವೆಯಿಂದ ಯಾಕೆ ವಜಾಗೊಳಿಸಕೂಡದು ಎಂದು ತನ್ನ ಸಹಾಯಕಿ ಮಿಥಿಲೇಶ್‌ಗೆ ಜಿಲ್ಲಾಧಿಕಾರಿಣಿ ಡಾ.ಪಿಂಕಿ ಜೊವೆಲ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕಡಿಮೆ ವೇತನ ಪಡೆಯುವ ಹೋಮ್‌ಗಾರ್ಡ್ ಮೇಲೆ ತನ್ನ ಆಕ್ರೋಶ ವ್ಯಕ್ತಪಡಿಸಿ, ಆಕೆಯ ವಿರುದ್ಧ ದೋಷಾರೋಪಗಳನ್ನು ಮಾಡಿರುವುದಲ್ಲದೆ ಡಾ. ಪಿಂಕಿ, ತನ್ನ ಮಲಗುವ ಕೋಣೆಗೆ ‘ಮಾಟದಿಂದ ಉಂಟಾಗಬಹುದಾದ ಶಂಕಿತ ಕೆಡುಕಿನ ದುಷ್ಪರಿಣಾಮಗಳನ್ನು ಉಚ್ಛಾಟಿಸುವುದ ಕ್ಕಾಗಿ’ ಯಜ್ಞವೊಂದನ್ನು ನಡೆಸಲು ಹಿಂದೂ ಅರ್ಚಕರೊಬ್ಬರ ಸಹಾಯವನ್ನೂ ಪಡೆದಿದ್ದಾರೆ ಎನ್ನಲಾಗಿದೆ.
ಯಜ್ಞ ನಡೆಸಿರುವ ಅರ್ಚಕ ರಾಮ್ ದರ್ಶನ್ ಮಿಶ್ರಾ ಕೂಡ ಘಟನೆಯನ್ನು ದೃಢೀಕರಿಸಿದ್ದಾರೆ. ‘‘ಬಹ್ರೈಚ್ ಜಿಲ್ಲಾಧಿಕಾರಿಣಿಯ ಅಧಿಕೃತ ನಿವಾಸದಲ್ಲಿ ಯಾವುದೇ ರೀತಿಯ ಮಾಟಮಂತ್ರ ಮಾಡಿದ್ದರೂ, ಅದರ ದುಷ್ಪರಿಣಾಮವನ್ನು ನೀಗುವುದಕ್ಕಾಗಿ ಮತ್ತು ಜಿಲ್ಲಾಧಿಕಾರಿಣಿಯ ಸುರಕ್ಷತೆಗಾಗಿ ನಾನು ಪೂಜೆ ಮತ್ತು ಯಜ್ಞವನ್ನು ನಿರ್ವಹಿಸಿದ್ದೇನೆ’’ ಎಂದು ರಾಮ್ ದರ್ಶನ್ ಮಿಶ್ರಾ ಹೇಳಿದ್ದಾರೆ.
ಘಟನೆಯು ಹೋಮ್‌ಗಾರ್ಡ್‌ಗಳನ್ನು ಜಿಲ್ಲಾಧಿಕಾರಿಣಿಯು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನೂ ಬಹಿರಂಗ ಪಡಿಸಿದೆ. ತನ್ನ ಮನೆಯ ನೆಲ ಒರೆಸುವುದು, ಟಾಯ್ಲೆಟ್ ಸ್ವಚ್ಛಗೊಳಿಸುವುದರಿಂದ ಹಿಡಿದು, ಜಿಲ್ಲಾಧಿಕಾರಿಣಿಯ ಮಗು ಶೌಚ ಮಾಡಿದ ಬಳಿಕ ಅದನ್ನೂ ಸ್ವಚ್ಛಗೊಳಿಸುವ ಕೆಲಸವನ್ನು ಹೋಮ್‌ಗಾರ್ಡ್‌ಗಳಿಗೆ ಜಿಲ್ಲಾಧಿಕಾರಿಣಿಯು ನೀಡುತ್ತಿದ್ದರೆಂದು ಆಪಾದಿಸಲಾಗಿದೆ. ‘‘ನಾನು ಮಾತ್ರ ಅಲ್ಲ, ಜಿಲ್ಲಾಧಿಕಾರಿಣಿಯ ನಿವಾಸದಲ್ಲಿ ಸೇವೆಗೆ ನಿಯೋಜಿತರಾಗಿರುವ ಇನ್ನೂ ಅರ್ಧ ಡಜನ್‌ನಷ್ಟು ಹೋಮ್‌ಗಾರ್ಡ್‌ಗಳಿಗೂ ಇಂತಹುದೇ ಕೆಲಸಗಳನ್ನು ಮಾಡಲು ಒತ್ತಾಯಿಸಲಾಗಿದೆ’’ ಎಂದು ಮಿಥಿಲೇಶ್ ಹೇಳಿದ್ದಾರೆ. ಜಿಲ್ಲಾಧಿಕಾರಿಣಿಯ ನಿವಾಸದಲ್ಲಿ ತಾನು ಯಾವುದೇ ಮಾಟಮಂತ್ರ ಮಾಡಿಲ್ಲ ಎಂದು ಆಕೆ ಹೇಳಿದ್ದಾರೆ.
ಘಟನೆಯು ಬಹಿರಂಗವಾದುದರಿಂದ ವಿಚಲಿತರಾದಂದೆ ಕಂಡು ಬಂದ ಜಿಲ್ಲಾಧಿಕಾರಿಣಿ ಜೋವೆಲ್, ‘‘ಜಿಲ್ಲಾಧಿಕಾರಿಣಿಯೊಂದಿಗೆ ಹೇಗೆ ನಡೆದುಕೊಳ್ಳುವುದೆಂದು ನಿಮಗೆಲ್ಲ ಗೊತ್ತಿಲ್ಲ. ನನ್ನ ಮನೆಯಲ್ಲಿ ನಾನು ಪೂಜೆ ಮಾಡಿದೆನೆಂದರೆ, ಅದು ನನ್ನ ವೈಯಕ್ತಿಕ ವಿಷಯ. ಹೋಮ್‌ಗಾರ್ಡ್‌ಳ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ’’ ಎಂದು ಹೇಳಿರುವುದಾಗಿ ವರದಿಯಾಗಿದೆ.

Related posts

Leave a Comment