ಸರಕಾರದ ಜೊತೆ ಮಾತುಕತೆಗೆ ಸಿದ್ಧ – ಟೀಂ ಹಝಾರೆ


ಜನಲೋಕಪಾಲನೆಯಾಗದೆ ನಿರಶನ ನಿಲ್ಲದು: ಹಝಾರೆ
ಹೊಸದಿಲ್ಲಿ,ಆ.19: ಭ್ರಷ್ಟಾಚಾರದ ವಿರುದ್ಧ ಹೋರಾಡುವ ವಿಚಾರದಲ್ಲಿ ಕೇಂದ್ರ ಸರಕಾರವು ಉತ್ತಮ ಕಾರ್ಯಕ್ರಮಗಳೊಂದಿಗೆ ಮುಂದೆ ಬಂದಲ್ಲಿ ಲೋಕಪಾಲ ವಿಧೇಯಕದ ಕುರಿತ ವಿವಾದದ ಬಗ್ಗೆ ಕೇಂದ್ರ ಸರಕಾರದ ಜೊತೆ ಮುಕ್ತ ಮನಸ್ಸಿನಿಂದ ಚರ್ಚಿಸಲು ತಾವು ಸಿದ್ಧವಿರುವುದಾಗಿ ಅಣ್ಣಾ ಹಝಾರೆ ಬಳಗದ ಸದಸ್ಯರು ಶುಕ್ರವಾರ ಘೋಷಿಸಿದ್ದಾರೆ.
ಹಝಾರೆ ನಿಕಟವರ್ತಿ ಅರವಿಂದ ಕೇಜ್ರಿವಾಲ್ ರಾಮ್‌ಲೀಲಾ ಮೈದಾನದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡುತ್ತಾ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸರಕಾರವು ಉತ್ತಮ ಮಾರ್ಗೋಪಾಯಗಳನ್ನು ಮುಂದಿಟ್ಟಲ್ಲಿ, ನಾವು ಸರಕಾರದ ಜೊತೆ ಮುಕ್ತ ಮನಸ್ಸಿನಿಂದ ಮಾತುಕತೆಗೆ ಸಿದ್ಧರಿದ್ದೇವೆ.
ಆದರೆ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ನೆಪದಲ್ಲಿ ಭ್ರಷ್ಟಾಚಾರಿಗಳನ್ನು ಸೇವೆಯಲ್ಲಿ ಮುಂದುವರಿಸಲು ಅವಕಾಶ ನೀಡುವಂತಹ ಸಂಧಾನ ಸೂತ್ರಗಳು ನಮಗೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮಾತನಾಡಿ, ಕನಿಷ್ಠ ಪಕ್ಷ ಸರಕಾರವು ಜನಲೋಕಪಾಲ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಬೇಕು. ಏನಿದ್ದರೂ ಅದನ್ನು ಒಪ್ಪುವುದು ಅಥವಾ ಬಿಡುವುದು ಸಂಸತ್‌ಗೆ ಸೇರಿದ್ದು. ಕನಿಷ್ಠ ಪಕ್ಷ ದೇಶದ ಜನತೆ ಏನನ್ನು ಬಯಸುತ್ತಿದ್ದಾರೆಂಬುದನ್ನು ಸಂಸತ್‌ಗೆ ತಿಳಿಯಬೇಕು ಎಂದರು
ಹೊಸದಿಲ್ಲಿ,ಆ.19: ಬಲಿಷ್ಠವಾದ ಲೋಕಪಾಲ ವಿಧೇಯಕದ ಜಾರಿಗಾಗಿ ಭ್ರಷ್ಟಾಚಾರ ವಿರೋಧಿ ಸಮರದ ಸೇನಾನಿ ಅಣ್ಣಾ ಹಝಾರೆ ನಡೆಸುತ್ತಿ ರುವ ನಿರಶನದ ವೇದಿಕೆಯು ಶುಕ್ರ ವಾರ ತಿಹಾರ್ ಜೈಲಿನಿಂದ ರಾಮ್ ಲೀಲಾ ಮೈದಾನಕ್ಕೆ ಸ್ಥಳಾಂತರ ಗೊಂಡಿದೆ. ತಾನು ಜೀವಂತವಿರಲಿ ಅಥವಾ ಇಲ್ಲದಿರಲಿ ಲಂಚದ ಪಿಡುಗಿನ ವಿರುದ್ಧ ಹೋರಾಟವು ಮುಂದು ವರಿಯುವುದು ಎಂದು ಘೋಷಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ತನ್ನ ನಿರಶನದ ನಾಲ್ಕನೆಯ ದಿನವೂ ಆರೋಗ್ಯವಂತರಾಗಿ ಕಾಣುತ್ತಿದ್ದ ಹಝಾರೆ, ತಿಹಾರ್ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಬೆಂಬಲಿಗರನ್ನು ದ್ದೇಶಿಸಿ ಮಾತನಾಡಿ, ಎರಡನೆ ಸ್ವಾತಂತ್ರ ಸಮರ ಆರಂಭಗೊಂಡಿದೆಯೆಂದು ಘೋಷಿಸಿದರು. ಜನ ಲೋಕಪಾಲ ವಿಧೇಯಕ ಜಾರಿಗೊಳ್ಳುವ ತನಕವೂ ನಿರಶನದ ಸ್ಥಳವನ್ನು ಬಿಟ್ಟು ಕದಲಲಾರೆ ಎಂದು ಅಣ್ಣಾ ಗುಡುಗಿದ್ದಾರೆ.
‘‘ನಮಗೆ 1947ರಲ್ಲಿ ಸ್ವಾತಂತ್ರ ದೊರೆಯಿತು. ಇದೀಗ ಎರಡನೆಯ ಸ್ವಾತಂತ್ರ ಸಮರವು ಆಗಸ್ಟ್ 16ರಂದು ಆರಂಭವಾಗಿದೆ. ಕ್ರಾಂತಿಯೊಂದು ಪ್ರಾರಂಭವಾಗಿದೆ. ನಾನು ಜೀವಂತ ವಾಗಿರಲಿ ಅಥವಾ ಇಲ್ಲದೇ ಇರಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟವು ಮುಂದುವರಿಯಲಿದೆ’’ ಎಂದು ಹಝಾರೆ, ನೆರೆದಿದ್ದ ಬೆಂಬಲಿಗರ ಭಾರೀ ಕರತಾಡನದ ನಡುವೆ ಘೋಷಿಸಿದರು. ಆಗಸ್ಟ್ 16ರಂದು ದಿಲ್ಲಿ ಪೊಲೀಸರಿಂದ ಬಂಧಿತರಾಗಿ, ತಿಹಾರ್ ಜೈಲಿನಲ್ಲಿ ಮೂರು ದಿನಗಳನ್ನು ಕಳೆದ ಅಣ್ಣಾ ಇಂದು ಕಾರಾಗೃಹದಿಂದ ಹೊರಬಂದು ತೆರೆದ ವಾಹನವನ್ನೇರಿ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ರಾಮ್‌ಲೀಲಾ ಮೈದಾನಕ್ಕೆ ಆಗಮಿಸಿದರು.
ಸುರಿಯುತ್ತಿರುವ ಧಾರಾಕಾರ ಮಳೆಯನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗಿದ ಅಣ್ಣಾ ಹಝಾರೆ, ಪಶ್ಚಿಮ ದಿಲ್ಲಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮದಿಂದ ಅಭಿನಂದನೆಗಳನ್ನು ಸ್ವೀಕರಿಸಿದರು. ಮಳೆಯಿಂದ ಅಣ್ಣಾ ಹಾಗೂ ಅವರ ನಿಕಟವರ್ತಿಗಳನ್ನು ರಕ್ಷಿಸಲು ವಾಹನಕ್ಕೆ ವಿಶಾಲವಾದ ಕೊಡೆಯ ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಬೆಂಬಲಿಗರು ಕಾಲ್ನಡಿಗೆಯಲ್ಲೇ ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಇನ್ನು ಕೆಲವರು ಬೈಕ್, ಜೀಪ್, ಕಾರುಗಳಲ್ಲಿ ಅವರನ್ನು ಅನುಸರಿಸಿದರು.
ಮೆರವಣಿಗೆ ಸಾಗಿದ ಪಶ್ಚಿಮ ದಿಲ್ಲಿಯ ಜನಕಪುರಿ, ಮಾಯಾಪುರಿ ಹಾಗೂ ಹರಿನಗರ ಮತ್ತಿತರ ಪ್ರದೇಶಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಂದಿನಂತೆ ಲವಲವಿಕೆಯಿಂದ ಕಂಗೊಳಿಸುತ್ತಿದ್ದ ಹಝಾರೆಯವರನ್ನು ವಿವಿಧೆಡೆ ಬೆಂಬಲಿಗರು ಹಾರಾರ್ಪಣೆಗೈದು ಹಾಗೂ ಪುಷ್ಪಗುಚ್ಛಗಳನ್ನಿತ್ತು ಅಭಿನಂದಿಸಿದರು. ಮೆರವಣಿಗೆಯುದ್ದಕ್ಕೂ ‘ಅಣ್ಣಾ’ ಹಾಗೂ ‘ವಂದೇಮಾತರಂ’ ಘೋಷಣೆಗಳು ಮುಗಿಲುಮುಟ್ಟುತ್ತಿದ್ದವು.
ಹಝಾರೆಯವರ ದರ್ಶನಕ್ಕಾಗಿ ಮಹಿಳೆಯರು, ಮಕ್ಕಳು, ಸೇರಿದಂತೆ ಸಾರ್ವಜನಿಕರು ರಸ್ತೆಯುದ್ದಕ್ಕೂ ಇರುವ ಕಟ್ಟಡಗಳಲ್ಲಿ ನಿಂತಿದ್ದ ನೋಟ ಸಾಮಾನ್ಯವಾಗಿತ್ತು. 73 ವರ್ಷ ವಯಸ್ಸಿನ ಈ ಹಿರಿಯ ಗಾಂಧಿವಾದಿ ಭೇಟಿ ನೀಡಲಿದ್ದ ರಾಜ್‌ಘಾಟ್, ಇಂಡಿಯಾಗೇಟ್ ಹಾಗೂ ರಾಮ್‌ಲೀಲಾ ಮೈದಾನಗಳಲ್ಲೂ ಅಪಾರ ಜನಸ್ತೋಮ ನೆರೆದಿತ್ತು. ರಾಮ್‌ಲೀಲಾ ಮೈದಾನದಲ್ಲಿ ತನಗೆ 15 ದಿನಗಳವರೆಗೆ ನಿರಶನ ನಡೆಸಲು ಅವಕಾಶ ನೀಡುವ ಬಗ್ಗೆ ಕೇಂದ್ರ ಸರಕಾರದ ಜೊತೆ ಒಪ್ಪಂದವೇರ್ಪಡಿಸಿಕೊಂಡ ಅಣ್ಣಾ, ಇಂದು ಬೆಳಗ್ಗೆ ಜೈಲಿನಿಂದ ನಿರ್ಗಮಿಸಿದರು.
ತಿಹಾರ್ ಜೈಲಿನ ಹೊರಾವರಣದಲ್ಲಿ ಹಾಗೂ ರಾಮ್‌ಲೀಲಾ ಮೈದಾನದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಹಝಾರೆ, ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ದ್ವಿತೀಯ ಸ್ವಾತಂತ್ರ ಸಂಗ್ರಾಮ ಆರಂಭಗೊಂಡಿದೆ ಎಂದು ಘೋಷಿಸಿದರು. ‘‘ 1942ರಲ್ಲಿ ಆರಂಭವಾದ ಕ್ರಾಂತಿಯಿಂದಾಗಿ, ಬ್ರಿಟಿಷರು ಭಾರತ ತೊರೆಯಬೇಕಾಯಿತು. ಆದರೆ ಲೂಟಿ ಹಾಗೂ ಗೂಂಡಾಗಿರಿ ಇನ್ನೂ ನಿಂತಿಲ್ಲ. ಇದರಿಂದಾಗಿ ದ್ವಿತೀಯ ಸ್ವಾತಂತ್ರ ಹೋರಾಟ ಆರಂಭಗೊಂಡಿದೆ’’ ಎಂದರು. ಘೋಷಣೆಗಳನ್ನು ಕೂಗುತ್ತಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅಣ್ಣಾ ಹಝಾರೆ, ತಾನೂ ಜೀವಂತವಾಗಿರಲಿ ಅಥವಾ ಇಲ್ಲದಿರಲಿ, ಈ ಸಂಘರ್ಷದ ದೀವಟಿಗೆ ಎಂದೂ ಆರಿಹೋಗಲು ಬಿಡದಿರಿ ಎಂದು ಕರೆ ನೀಡಿದರು.
ಆಗಸ್ಟ್ 16ರಂದು ನಿರಶನ ಆರಂಭಿಸುವ ಮುನ್ನವೇ ಬಂಧಿತರಾದ ಕೆಲವೇ ತಾಸುಗಳಲ್ಲಿ ಬಿಡುಗಡೆಗೊಂಡ ಅಣ್ಣಾ ಹಝಾರೆ, ತಿಹಾರ್ ಜೈಲಿನಿಂದ ಹೊರಬರಲು ನಿರಾಕರಿಸಿದ್ದರು. ಕೊನೆಗೂ ಅಣ್ಣಾಗೆ ಮಣಿದ ಕೇಂದ್ರ ಸರಕಾರವು ರಾಮ್‌ಲೀಲಾ ಮೈದಾನದಲ್ಲಿ 15 ದಿನಗಳವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ನೀಡಿತ್ತು
Please follow and like us:

Related posts

Leave a Comment