ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ……

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ, ನನ್ನ ಅಭಿಮಾನದ ಕವಿ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ……

ಚಿಗುರುತ್ತಿರುವ ಮರ….

ನಾವಿಂದು ಒಣ ಮರವಲ್ಲ
ಚಿಗುರುತ್ತಿರುವಾ ಮರ…..

ಗೊಬ್ಬರ ನೀರು ಸಿಗದೆ ಗುಬ್ಬಿಯಂತಾಗಿದ್ದವರು
ಹಬ್ಬವಾ ಮಾಡಲಾಗದೆ ಅಬ್ಬರಿಸಲಾಗದಂತವರು
ಕುಡಿವ ನೀರು ದೊರೆಯದೆ ಬಿಕ್ಕಿ ಬೀಳುತ ಅತ್ತವರು…. ನಾವು
ವಸಂತಕಾಲದ ಪೂರ್ವದಾ ಜೀವನ ನೋಡಿ ನಕ್ಕವರು

ಹೆಂಟೆ ಹೊಡೆದಾ ನೆಲದಲಿ ಪುಂಡಿ ಕಟ್ಟಿಗೆಯಾದವರು
ತಂಟೆಗೆ ಹೋಗದಿದ್ದರು ಸೊಂಟಾ ಮುರಿಸಿಕೊಂಡವರು
ಹಸುವ ಮೇಯಿಸಲು ಹೋಗಿ ಅದರಸಿವ ಕಾಲಿಗೆ ಬಿದ್ದವರು… ನಾವು
ವಸಂತಕಾಲದ ಪೂರ್ವದಾ ಜೀವನ ನೋಡಿ ನಕ್ಕವರು

ಕುಂಟೆಯಲಿ ನಿಂತ ನೀರ ಮುಟ್ಟಿ ಕುಂಡೆ ಬಾಯಿಸಿಕೊಂಡವರು
ಕರಗದೇ ನಿಂತ ಎರೆಮಣ್ಣ ಕಣವ ಕರುಳಿಗೆ ಹಾಕಿಕೊಂಡವರು
ಬಿಸಿಲಿಗೆ ತಲೆ ಸುಡುತಿರಲು ಕಾಲು ಮೇಲೆ ಮಾಡಿ ನಿಂತವರು…. ನಾವು
ವಸಂತಕಾಲದ ಪೂರ್ವದಾ ಜೀವನ ನೋಡಿ ನಕ್ಕವರು

ಉಳ್ಳವರ ಮನೆ ಅಂಗಳದಲ್ಲಿ ರಂಗೋಲಿಗೆ ಮಣ್ಣಾದವರು
ಕಣ್ಣೊಳು ಮಣ್ಣಾಕಿಸಿಕೊಂಡು ಕಣ್ಣು ಕಾಣದೆ ನಿಂತವರು
ಅವರ ಅಂಗಾಲಿಗೆ ಬೆಚ್ಚನೆಯ ಮುಳ್ಳೊತ್ತುವಾದವರು…. ನಾವು
ವಸಂತಕಾಲದ ಪೂರ್ವದಾ ಜೀವನ ನೋಡಿ ನಕ್ಕವರು

ಆಗಸದಾ ನೀಲಿಯಲ್ಲಿ ಮೋಡ ನೋಡುತಾ ನಿಂತವರು
ಭೀಮ ಗರ್ಜನೆಯಾಗಿರಲು ಮೈಯ ತೋಯಿಸಿಕೊಂಡವರು
ಬಾಬಾ ಬಿತ್ತಿದ ಅರಿವಿನ ಬೀಜ ಹೊದ್ದು ಚಿಗುರಿದವರು…. ನಾವು
ವಸಂತಕಾಲದ ಪೂರ್ವದಾ ಜೀವನ ನೋಡಿ ನಕ್ಕವರು

ರಮೇಶ ಗಬ್ಬೂರ್
ಗಂಗಾವತಿ.

ವಿಳಾಸ.
ಗ್ರಂಥಪಾಲಕರು
ಬಾಲಕರ ಸ.ಪ.ಪೂ.ಕಾಲೇಜು ಗಂಗಾವತಿ
ಕೊಪ್ಪಳ ಜಿಲ್ಲೆ. ೫೮೩೨೨೭
ಮೊ.೯೮೪೪೪೩೩೧೨೮
ಇಮೇಲ್.gopuradaramesh@gmail.com

 

Leave a Reply