ನಿಷೇಧಾಜ್ಞೆ ಜಾರಿ: ವಿಜಯೋತ್ಸವ ಆಚರಣೆಗೆ ನಿರ್ಬಂಧ

  ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಮೇ. ೦೮ ರಂದು ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಜರುಗಲಿದ್ದು, ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆಯ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
ಮತಎಣಿಕೆಯ ನಂತರ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದು, ಮೆರವಣಿಗೆ ನಡೆಸುವುದು ಹಾಗೂ ಪಟಾಕಿ ಸಿಡಿಸುವುದರಿಂದ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು / ಕಾರ್ಯಕರ್ತರು ಗಲಾಟೆ ನಡೆಸಿ, ಶಾಂತಿ ಕದಡುವ ಸಂಭವವಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಯ ಉದ್ದೇಶದಿಂದ ಮೇ ೦೮ ರಂದು ಮಧ್ಯಾಹ್ನ ೨ ಗಂಟೆಯಿಂದ ಮೇ ೦೯ ರ ಬೆಳಿಗ್ಗೆ ೦೬ ಗಂಟೆಯವರೆಗೆ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯೆ ಸಂಹಿತೆ ೧೪೪ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   ಗೆದ್ದ ಅಭ್ಯರ್ಥಿಗಳು ಮೆರವಣಿಗೆ ನಡೆಸುವುದು, ಪಟಾಕಿ ಸಿಡಿಸುವುದರ ಮೂಲಕ ವಿಜಯೋತ್ಸವ ಆಚರಿಸಲು ನಿರ್ಬಂಧ ವಿಧಿಸಲಾಗಿದೆ.  ನಿಷೇಧಾಜ್ಞೆ ಅನ್ವಯ ಮತ ಎಣಿಕೆಯ ೨೦೦ ಮೀ. ಪ್ರದೇಶದಲ್ಲಿ ೪ ಜನಕ್ಕಿಂತ ಹೆಚ್ಚು ಜನರು ತಿರುಗಾಡುವಂತಿಲ್ಲ.  ಜಿಲ್ಲೆಯಾದ್ಯಂತ ೪ ಜನಕ್ಕಿಂತ ಹೆಚ್ಚಾಗಿ ಜನ ಗುಂಪಾಗಿ ಸೇರುವುದು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ.  ಮದುವೆ, ಶವ-ಸಂಸ್ಕಾರ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Related posts

Leave a Comment