ರೈತರು ಜಾಣ ಮಾರಾಟಗಾರರಾಗಬೇಕು- ಹನುಮರೆಡ್ಡಿ ಹಂಗನಕಟ್ಟಿ.

ಕೊಪ್ಪಳ-03-  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರು ನೋಂದಣಿ ಮಾಡಿಸಬೇಕು. ರೈತರ ಹಿತದೃಷ್ಟಿಯಿಂದ ಸರಕಾರವು ಆನ್‌ಲೈನ್ ಟ್ರೇಡಿಂಗ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ವ್ಯವಸ್ಥೆಯನ್ನು ಜಾರಿಗೊಳಿಸಿರುತ್ತದೆ. ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದಾಗ ತಮ್ಮ ಹೆಸರಿನಲ್ಲಿಯೇ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಿಡಬೇಕು. ಆನ್‌ಲೈನ್ ಮೂಲಕ ಮಾರಾಟ ಮಾಡಿದಲ್ಲಿ ಬಿಳಿಚೀಟಿ ವ್ಯವಸ್ಥೆ ತನ್ನಿಂದ ತಾನೇ ಕೊನೆಗೊಳ್ಳುತ್ತದೆ. ರೈತರು ಉತ್ತಮ ಕೃಷಿಕರಾಗುವ ಜೊತೆಗೆ ‘ಜಾಣ ಮಾರಾಟಗಾರರಾಗಬೇಕು’ ಅಂದಲ್ಲಿ ರೈತರು ದಾಸ್ಯದಿಂದ ಬಿಡುಗಡೆ ಹೊಂದಲು ಸಾಧ್ಯವಾಗುತ್ತದೆ ಎಂದು ಎ.ಪಿ.ಎಂ.ಸಿ ಯ ಅಧ್ಯಕ್ಷರಾದ ಹನುಮರೆಡ್ಡಿ ಹಂಗನಕಟ್ಟಿಯವರು ಹೇಳಿದರು.  ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಮ್ಮಿಕೊಂಡ ಏಕೀಕೃತ ಮಾರಾಟ ಅನುಷ್ಠಾನದ ಬಗ್ಗೆ ಟ್ರೈನರ್‍ಸ್ ಟ್ರೇನಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ಏನಾದರೂ ತಂಟೆ-ತಕರಾರು ಉದ್ಭವಿಸಿದಲ್ಲಿ ತಕ್ಷಣ ಸಮಿತಿಯನ್ನು
ಸಂಪರ್ಕಿಸಬೇಕೆಂದು ಮತ್ತು ಕ್ರೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ ದಿನವೇ ಮಾರಾಟದ
ಸಂಪೂರ್ಣ ಮೊಬಲಗನ್ನು ಪಡೆದುಕೊಳ್ಳಬೇಕೆಂದು ರೈತರಿಗೆ ಕರೆ ನೀಡಿದರು.  ವಿಭಾಗೀಯ
ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರಾದ ಜಿ.ಸೇಲ್ವಿ ಏಕೀಕೃತ ಮಾರಾಟ ವ್ಯವಸ್ಥೆಯ
ಅನುಷ್ಠಾನದ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿದರು.
ಕೃಷಿ ಮಾರಾಟ ಇಲಾಖೆ ಕೊಪ್ಪಳ ಜಿಲ್ಲಾ ಸಹಾಯಕ ನಿರ್ದೇಶಕರಾದ ಪ್ರಭಾಕರ ಅಂಗಡಿ, ಎ.ಪಿ.ಎಂ.ಸಿ.ಯ ಕಾರ್ಯದರ್ಶಿಗಳಾದ ಮರಿಬಸಪ್ಪ. ಸಜ್ಜನ, ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರಾದ ಜಿ.ಸೇಲ್ವಿ, ಸಮಿತಿಯ ಉಪಾಧ್ಯಕ್ಷರಾದ ಮಾಯಪ್ಪ ಗುಗ್ರಿ, ಸದಸ್ಯರಾದ ಫಕೀರಯ್ಯ ಹಿರೇಮಠ, ಶರಣಪ್ಪ ಸಜ್ಜನ, ಕಮಲಚಂದ ಜಾಂಗಡಾ, ನೀಲಪ್ಪ ಮೇಟಿ, ಗಂಗಮ್ಮ ಕಲಾದಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯ ಬಗ್ಗೆ ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಸಹಾಯಕ ಕಾರ್ಯದರ್ಶಿ ಎಸ್.ಎನ್. ತಿಮ್ಮನಗೌಡ್ರ ನಿರೂಪಿಸಿದರು. ಸ್ವಾಗತ ಪ್ರಾಸ್ತಾವಿಕ ವಂದನಾರ್ಪಣೆಯನ್ನು ಕಾರ್ಯದರ್ಶಿಯವರಾದ ಮರಿಬಸಪ್ಪ ಸಜ್ಜನ ನೆರವೇರಿಸಿದರು.

Please follow and like us:
error