ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಹಿಂದುಳಿದಿರುವ ಗೋಂದಲಿ ಸೇರಿದಂತೆ ಇತರೆ ಅಲೆಮಾರಿ ಸಮುದಾಯಕ್ಕೆ ಜಮೀನು ಮತ್ತು ವಸತಿ ಸೌಲಭ್ಯವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಲೆಮಾರಿ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ಇದುವರೆಗೂ ಆಗಿರಲಿಲ್ಲ. ಇದೀಗ ಸರ್ಕಾರ ಸಮಾಜದ ಸಮಸ್ಯೆಗಳು ಹಾಗೂ ಆಗಬೇಕಿರುವ ಕ್ರಮಗಳ ಕುರಿತು ಚರ್ಚಿಸಲು ಸರ್ಕಾರ ಇಂತಹ ವೇದಿಕೆ ಒದಗಿಸಿಕೊಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ. ಗೋಂದಲಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ. ಸಮುದಾಯದ ಕುಲಕಸುಬು ಕೌಶಲ್ಯ ವೃದ್ಧಿಗೆ ಸರ್ಕಾರ ಹೆಚ್ಚಿನ ಸಹಾಯಧನ ನೀಡಲು ಸಿದ್ಧವಿದೆ. ಗೋಂದಲಿ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟ ಸುಧಾರಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ. ಬಿ.ಕೆ. ರವಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಆರ್. ಅನುರಾಧ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಈಗಾಗಲೆ ಹೆಳವ, ಕಾಡುಗೊಲ್ಲ ಮುಂತಾದ ಸಮಾಜದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಲು ಇಂತಹ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದು, ಇದೀಗ ಗೋಂದಲಿ ಸಮಾಜಕ್ಕೆ ನೈತಿಕ ಸ್ಥೈರ್ಯ, ಆರ್ಥಿಕ ಸ್ಥಿತಿ ಬಲಗೊಳಿಸುವ ನಿಟ್ಟಿನಲ್ಲಿ ಈ ವಿಚಾರಸಂಕಿರಣ ಏರ್ಪಡಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಸಮುದಾಯ ಮಾತ್ರ ಶೀಘ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. ಕರ್ನಾಟಕ ರಾಜ್ಯ ಗೋಂದಲಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಚಂಗಿ ಅವರು ಗೋಂದಲಿ ಸಮಾಜ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯವಾಗಿ ಆಗಬೇಕಿರುವ ಕ್ರಮಗಳ ಬಗ್ಗೆ ಬೇಡಿಕೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಈರಪ್ಪ ಕುಡಗುಂಟಿ, ನಗರಸಭೆ ಸದಸ್ಯರುಗಳಾದ ಮುತ್ತು ಕುಷ್ಟಗಿ, ರಾಮಣ್ಣ ಹದ್ದಿನ, ಗಾಳೆಪ್ಪ ಪೂಜಾರ, ರೇಣುಕಾ ಪೂಜಾರ, ಜನಾಬಾಯಿ ಜಕ್ಕಲಿ, ಬಿಸಿಎಂ ಜಿಲ್ಲಾ ಅಧಿಕಾರಿ ಕಲ್ಲೇಶ್ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ದೇವರಾಜ ಅರಸು ಸಂಶೋಧನಾ ಸಂಸ್ಥೆ ಸಹಾಯಕ ನಿರ್ದೇಶಕ ಅಶೋಕ್ ಸ್ವಾಗತಿಸಿ, ವಂದಿಸಿದರು.
Please follow and like us: