ನ. ೨೫ ರಿಂದ ಜಿಲ್ಲೆಯಲ್ಲಿ ಪುಸ್ತಕ ಮೇಳ : ಪ್ರಕಾಶಕರಿಗೆ ಸೂಚನೆ

ಕೊಪ್ಪಳ ನ. : ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಇದೇ ನ. ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ಗಂಗಾವತಿಯಲ್ಲಿ ಆಯೋಜಿಸಲಾಗಿದ್ದು, ರಾಜ್ಯದ ಯಾವುದೇ ಪ್ರಕಾಶಕರು ಈ ಸಂದರ್ಭದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಬಹುದಾಗಿದೆ.
  ಜಿಲ್ಲಾ ಮಟ್ಟದ ಈ ಪುಸ್ತಕ ಮೇಳ ನ. ೨೫ ರಿಂದ ೨೬ ರವರೆಗೆ ಗಂಗಾವತಿಯ ಸರ್ಕಾರಿ ಬಾಲಕಿಯರ ಎಂ.ಎನ್.ಎಂ., ಪ.ಪೂ. ಕಾಲೇಜು, ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಬಾಲಕರ ಪ.ಪೂ. ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಈ ಮೇಳದಲ್ಲಿ ಭಾಗವಹಿಸುವರು.   ಪುಸ್ತಕಗಳನ್ನು ಖರೀದಿಸಲು  ಸರ್ವ ಶಿಕ್ಷಣ ಅಭಿಯಾನದಿಂದ ಜಿಲ್ಲೆಯ ೮೨೫ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ರೂ. ೩೦೦೦ ಗಳನ್ನು, ೫೨೩ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ರೂ. ೧೦೦೦೦ ಗಳನ್ನು ಗ್ರಂಥಾಲಯ ಅನುದಾನವನ್ನಾಗಿ ನೀಡಲಾಗಿದೆ.  ಜಿಲ್ಲೆಗೆ ಒಟ್ಟು ೭೭. ೦೫ ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದೆ.  ಪುಸ್ತಕ ಮೇಳದಲ್ಲಿ ಭಾಗವಹಿಸುವ ಪ್ರಕಾಶಕರು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೂ ಮಕ್ಕಳಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಖರೀದಿಗಾಗಿ ಇಟ್ಟಿರುವ ಪುಸ್ತಕ ಪಟ್ಟಿ ಹಾಗೂ ರಿಯಾಯಿತಿ ದರವನ್ನು ಆಯಾ ಮಳಿಗೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.  ಅಲ್ಲದೆ ಪುಸ್ತಕಗಳನ್ನು ವಿಷಯವಾರು, ಭಾಷಾವಾರು, ಮಕ್ಕಳ ಸಾಹಿತ್ಯ, ಆಕರ ಗ್ರಂಥಗಳು, ಪ್ರಾಥಮಿಕ/ಪ್ರೌಢ ಹಂತದ ಸರಳ-ಸಂಕೀರ್ಣ ಆಧಾರದಲ್ಲಿ ಪ್ರದರ್ಶಿಸಬೇಕು.  ಪುಸ್ತಕ ಮೇಳದಲ್ಲಿ ಖರೀದಿಸುವಾಗ ಮುಖ್ಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.ಯವರು ಎಲ್ಲಾ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ಪುಸ್ತಕಗಳನ್ನು ಪರಾಮರ್ಶಿಸಿ ನಂತರ ಮಕ್ಕಳ ವಯಸ್ಸು, ಸಾಮರ್ಥ್ಯ, ಅಭಿರುಚಿ, ವಿಷಯವಾರು ಹಾಗೂ ಭಾಷಾವಾರು ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಕಡ್ಡಾಯವಾಗಿ ಖರೀದಿಸಬೇಕು, ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.  ಪುಸ್ತಕ ಮೇಳದಲ್ಲಿ ಭಾಗವಹಿಸಬಯಸುವ ಪ್ರಕಾಶಕರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೪೮೦೬೯೫೪೧೪ ಅಥವಾ ೯೪೪೮೯೯೯೪೦೨ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Related posts

Leave a Comment