ಕಾರ್ಯಾಗಾರಗಳಿಂದ ಶಿಕ್ಷಕರಲ್ಲಿ ದಕ್ಷತೆ ಹೆಚ್ಚುತ್ತದೆ-ಡಾ.ಬಾಲರಾಜ್

ಕೊಪ್ಪಳ. ಕಾಲಕಾಲಕ್ಕೆ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಕರ್ತವ್ಯದಲ್ಲಿ ದಕ್ಷತೆಯ ಪ್ರಮಾಣ ಸಹಜವಾಗಿಯೇ ಹೆಚ್ಚುತ್ತದೆ ಎಂದು ಗುಲಬರ್ಗಾ ಸಿಟಿಇ ಪ್ರಾಂಶುಪಾಲ ಹಾಗೂ ಸಹನಿರ್ದೇಶಕ ಡಾ. ಬಾಲರಾಜ್  ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಕೊಪ್ಪಳ ಜಿಲ್ಲಾ ಘಟಕ ಆಯೋಜಿಸಿದ್ದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ಸಹಕಾರದೊಂದಿಗೆ ಶಿಕ್ಷಕರು ಶಿಕ್ಷಣ ಮತ್ತು ಸರಕಾರಿ ಶಾಲೆಗಳ ಬಗ್ಗೆ ಇರುವ ನಕಾರಾತ್ಮಕ ಹಾಗೂ ಋಣಾತ್ಮಕ ಯೋಚನೆಗಳಿಗೆ ನಾವೆಲ್ಲರೂ ಕ್ರೀಯಾಶೀಲರಾಗಿ ಕೆಲಸ ಮಾಡುವುದರ ಮೂಲಕ ಅಭಿಪ್ರಾಯಗಳನ್ನು ಬದಲಾಯಿಸಲು ಸಾಧ್ಯ ಎಂದ ಅವರು, ಶಿಕ್ಷಣ ಗುಣವರ್ಧನಾ ವರ್ಷದಲ್ಲಿ ಅಳವಡಿಸಿಕೊಂಡಿರುವ ಹತ್ತು ಅಂಶಗಳ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಎಲ್ಲ ಶಿಕ್ಷಕರು ಚಾಚುತಪ್ಪದೆ ನಿರ್ವಹಿಸಿದರೆ ಬೇಗನೇ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಣಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೌಕರರ ಸಂಘದ ನಿರ್ದೇಶಕ ಶಂಭುಲಿಂಗನಗೌಡ ಮಾತನಾಡಿ, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಶೈಕ್ಷಣಿಕ ಹಿತದೃಷ್ಠಿಯಿಂದ ಸಹಮತದಿಂದ ಶ್ರಮಿಸಿದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಗತ್ಯತೆ ಸಹಜವಾಗಿಯೇ ಕಡಿಮೆಯಾಗಿ ಸರಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯ ಮೂಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಿರುವ ವಿವಿಧ ಜಾನಪದ ಗೀತೆಗಳನ್ನು ಶಿಕ್ಷಕ ಹಾಗೂ ಜನಪದ ಕಲಾವಿದರಾದ ಜೀವನಸಾಬ ಬಿನ್ನಾಳ ಹಾಡುವ ಮೂಲಕ ಕಾರ್ಯಾಗಾರಕ್ಕೆ ಇನ್ನಷ್ಟು ಕಳೆ ತಂದರು.
ಡಿಡಿಪಿಐ ಜಿ.ಎಚ್. ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ, ಎಷ್ಟೋ ಶಿಕ್ಷಕರು ಎಲೆಮೆರಯ ಕಾಯಿಯಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ‍್ಯಾರು ಪ್ರಶಸ್ತಿಗಳಿಗೆ ಆಯ್ಕೆಯಾಗದೆ ಉಳಿದುಬಿಡುತ್ತಾರೆ. ಆದರೆ ಇಂತಹ ಶಿಕ್ಷಕರನ್ನು ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡವಂತೆ ತಾವು ಆಗಾಗ ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಬಿಇಓಗಳಿಗೆ ಸೂಚಿಸಿರುವೆ ಎಂದರು.
ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಉಮೇಶ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಘ ಯಾವ ಸಂಘದ ಅಥವಾ ಯಾವ ವ್ಯಕ್ತಿಯ ವಿರುದ್ಧ ಸ್ಥಾಪನೆಯಾಗಿಲ್ಲ, ಮುಖ್ಯ ಶಿಕ್ಷಕರ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಸ್ಥಾಪಿಸಲಾಗಿದ್ದು, ಎಲ್ಲ ಮುಖ್ಯ ಶಿಕ್ಷಕರು ಸದಸ್ಯರಾಗುವ ಮೂಲಕ ಈ ಸಂಘಟನೆಯನ್ನು ಬಲಪಡಿಸುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಕೈಜೋಡಿಸೋಣ ಎಂದರು.
ಕಾರ್ಯಾಗಾರದಲ್ಲಿ ನಿವೃತ್ತ ಉಪಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ ಅಡಳಿತ, ಶ್ರೀನಿವಾಸ ಎಸ್.ಪಿ, ಶೈಕ್ಷಣಿಕ, ಅಶೋಕ ಕುಲಕರ್ಣಿ ಅಕ್ಷರ ದಾಸೋಹ ಹಾಗೂ ಸಂತೋಷ ವಿದ್ಯಾರ್ಥಿ ವೇತನ ಕುರಿತು ಸಂವಾದದ ಮೂಲಕ ಮುಖ್ಯ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ವೇದಿಕೆ ಮೇಲೆ ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ, ಪತ್ರಕರ್ತರಾದ ಸಾದಿಕ ಅಲಿ, ಜಿ.ಎಸ್.ಗೋನಾಳ, ಎನ್.ಎಂ.ದೊಡ್ಡಮನಿ, ಎಚ್‌ಎಸ್ ಹರೀಶ್, ಬಿಆರ್‌ಸಿ ಸಮನ್ವಯ ಅಧಿಕಾರಿ ಶರಣಪ್ಪ, ಮುಖಂಡರಾದ ಸಂಗಮೇಶ ಡಂಬಳ, ನೀಲಕಂಠಯ್ಯ ಹಿರೇಮಠ, ಶಿವಾನಂದ ಹೊದ್ಲೂರ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರ್ವಹಿಸಿದರು.
Please follow and like us:
error