You are here
Home > Koppal News > `ಸ್ವರ್ಣಕಮಲ’ ಪ್ರಶಸ್ತಿ ಪುರಸ್ಕೃತ ಚಿತ್ರ ತಂಡಕ್ಕೆ ಸನ್ಮಾನ

`ಸ್ವರ್ಣಕಮಲ’ ಪ್ರಶಸ್ತಿ ಪುರಸ್ಕೃತ ಚಿತ್ರ ತಂಡಕ್ಕೆ ಸನ್ಮಾನ

ಬೆಂಗಳೂರು: ‘ವಿಶಿಷ್ಟವಾದ ಪುಟ್ಟ ‘ಬ್ಯಾರಿ‘ ಭಾಷೆ ಹಾಗೂ ಸಮುದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗಬೇಕೆಂಬ ಏಕೈಕ ಉದ್ದೇಶದಿಂದ ನಾನು ‘ಬ್ಯಾರಿ‘ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಪ್ರಾದೇಶಿಕ ಮಟ್ಟದಲ್ಲಿ ಚಿತ್ರಕ್ಕೆ ಒಂದು ಸಣ್ಣ ಪ್ರಶಸ್ತಿ ಲಭಿಸಬಹುದು ಎಂದು ನಿರೀಕ್ಷಿಸಿದ್ದೆ.
ಆದರೆ, ‘ಸ್ವರ್ಣ ಕಮಲ‘ದಂತಹ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶತಮಾನದ ಹಿಂದಿನ ‘ಬ್ಯಾರಿ‘ ಸಮುದಾಯದ ಸಂಸ್ಕೃತಿ ಹಾಗೂ ಜನಜೀವನದ ಕಥಾ ವಸ್ತುವನ್ನಾಗಿಟ್ಟುಕೊಂಡು ಕನ್ನಡದಲ್ಲಿಯೂ ಚಲನಚಿತ್ರ ನಿರ್ಮಿಸಲು ಉದ್ದೇಶ ಹೊಂದಿದ್ದೇನೆ‘.
ಇದು ‘ಸ್ವರ್ಣ ಕಮಲ‘ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಮೊಟ್ಟ ಮೊದಲ ‘ಬ್ಯಾರಿ‘ ಭಾಷೆಯ ಚಲನಚಿತ್ರ ನಿರ್ಮಾಪಕ ಹಾಗೂ ನಟ ಅಲ್ತಾಫ್ ಚೊಕ್ಕಬೆಟ್ಟು  ಪ್ರತಿಕ್ರಿಯೆ.
ಬೆಂಗಳೂರಿನ ‘ದಕ್ಷಿಣ ಕನ್ನಡಿಗರು‘ ಬಳಗವು ವಾರ್ತಾ ಇಲಾಖೆಯ ಸುಲೋಚನಾ ಮಿನಿ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಪುಟ್ಟ ಸಂವಾದ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.
‘2002ರಲ್ಲಿ ‘ಚೈತ್ರ‘ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಆದರೆ, ದುರದೃಷ್ಟವಶಾತ್ ಅದು ಅರ್ಧಕ್ಕೇ ನಿಂತಿತು. ಅಂದಿನಿಂದ ಯಾವುದೇ ಚಿತ್ರ ನಿರ್ಮಾಣ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ, ಬ್ಯಾರಿ ಭಾಷೆ ಹಾಗೂ ಜನಾಂಗದ ಮೇಲಿನ ಅಭಿಮಾನದಿಂದ ‘ಬ್ಯಾರಿ‘ ಭಾಷೆಯಲ್ಲೇ ಚಿತ್ರ ನಿರ್ಮಿಸಿದೆ‘ ಎಂದು ಹೇಳಿದರು.
‘ರಾಜ್ಯದಲ್ಲಿ ಸುಮಾರು 20 ಲಕ್ಷ ಬ್ಯಾರಿ ಜನಾಂಗದವರಿದ್ದಾರೆ. ಆದರೆ, ‘ಬ್ಯಾರಿ‘ ಚಿತ್ರ ತೆರೆ ಕಂಡಾಗ ಅದನ್ನು ವೀಕ್ಷಿಸಿದವರು ಕೇವಲ ಒಂದು ಸಾವಿರ ಪ್ರೇಕ್ಷಕರು ಮಾತ್ರ. ಅದರಲ್ಲೂ 400 ಮಂದಿ ಮಾತ್ರ ಬ್ಯಾರಿ ಸಮುದಾಯದವರು ಚಿತ್ರ ವೀಕ್ಷಿಸಿದ್ದಾರೆ.‘ ಎಂದರು.
ಕನಸಿನಲ್ಲೂ ಊಹಿಸಿರಲಿಲ್ಲ: ? `ಬ್ಯಾರಿ‘ ಚಿತ್ರಕ್ಕೆ ‘ಸ್ವರ್ಣಕಮಲ‘ ಪ್ರಶಸ್ತಿ ಲಭಿಸುತ್ತದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.‘ ಎಂದು ಚಿತ್ರದ ನಿರ್ದೇಶಕ ಕೆ.ಪಿ. ಸುವೀರನ್ ಪ್ರತಿಕ್ರಿಯಿಸಿದರು.
ಅತ್ಯುತ್ತಮ ಛಾಯಾಗ್ರಹಣದಿಂದ ಚಲನಚಿತ್ರಕ್ಕೆ ತನ್ನದೇ ಆದ ವರ್ಚಸ್ಸು ತಂದುಕೊಟ್ಟಿರುವ ಮುರಳಿಕೃಷ್ಣ ಹಾಗೂ ಹಿರಿಯ ನಟ ಟಿ.ಕೆ. ಮಮ್ಮುಕೋಯ ತಮ್ಮ ಸಂತಸ ಹಂಚಿಕೊಂಡರು.  ನಂತರ ನಟ-ನಿರ್ಮಾಪಕ ಅಲ್ತಾಫ್, ನಿರ್ದೇಶಕ ಕೆ.ಪಿ. ಸುವೀರನ್, ಛಾಯಾಗ್ರಾಹಕ ಮುರಳಿಕೃಷ್ಣ ಹಾಗೂ ನಟ ಮಮ್ಮುಕೋಯ, ಸಂಕಲನಕಾರ ಎಸ್. ಮನೋಹರ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ‘ಸಣ್ಣ ಭಾಷೆ ಹಾಗೂ ಸಮುದಾಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಸನ್ನಿವೇಶದಲ್ಲಿ ಸಣ್ಣ ಸಮುದಾಯದವರೇ ಆಯಾ ಭಾಷೆಯಲ್ಲಿ ಚಿತ್ರ ನಿರ್ಮಿಸಿ ‘ಸ್ವರ್ಣಕಮಲ‘ ಪ್ರಶಸ್ತಿ ಗೆದ್ದದ್ದು ಭಾಷೆಯ ಬಗೆಗಿನ ಸಂವಿಧಾನದ ಆಶಯಗಳಿಗೆ ದೊಡ್ಡ ಗೌರವ ತಂದುಕೊಟ್ಟಂತಾಗಿದೆ‘ ಎಂದರು.
 ಮತ್ತೊಬ್ಬ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಕಳೆದ ಮೂರು ದಶಕಗಳಲ್ಲಿ ಸಮುದಾಯದೊಳಗಿನ ಲೇಖಕರೇ ಕಥೆ, ಸಾಹಿತ್ಯ ಬರೆಯಲು ಶುರು ಮಾಡಿದರು. ಇದೀಗ ಸಣ್ಣ ಸಮುದಾಯದೊಳಗಿನವರೇ ಆಯಾ ಭಾಷೆಯಲ್ಲಿ ಚಲನಚಿತ್ರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ‘ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ನಟಿ ಉಮಾಶ್ರೀ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿದರು. ಕೆಪಿಸಿಸಿ ಮುಖಂಡ ಬಿ.ಎ. ಹಸನಬ್ಬ ಸ್ವಾಗತಿಸಿದರು. ಪತ್ರಕರ್ತ ಬಿ.ಎಂ. ಹನೀಫ್ ಕಾರ್ಯಕ್ರಮ ನಿರೂಪಿಸಿದರು. ‘ದಕ್ಷಿಣ ಕನ್ನಡಿಗರು‘ ಬಳಗದ ಸಂಚಾಲಕ ಡಾ. ಮಕ್ಸೂದ್ ಅಹ್ಮದ್, ತುಳು ಕೂಟದ ಅಧ್ಯಕ್ಷ ರಮೇಶ್ ಹೆಗಡೆ, ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಫರೂಕ್, ಪ್ರಮುಖ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.
ಕೃತಿ ಚೌರ್ಯ: ಪ್ರತಿಕ್ರಿಯೆ ಇಲ್ಲ
‘ಬ್ಯಾರಿ‘ ಚಲನಚಿತ್ರಕ್ಕೆ ‘ಚಂದ್ರಗಿರಿ ತೀರದಲ್ಲಿ‘ನ ಕಾದಂಬರಿಯ ಕೃತಿಚೌರ್ಯ ಮಾಡಲಾಗಿದೆ ಎಂಬ ಲೇಖಕಿ ಸಾರಾ ಅಬೂಬಕರ್ ಆರೋಪದ ಬಗ್ಗೆ ಚಿತ್ರ ನಿರ್ಮಾಣ ತಂಡದ ಪ್ರಮುಖರು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ.
‘ಸದ್ಯಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಹಾಗೂ ಸಮುದಾಯದ ಪ್ರಮುಖರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ‘ ಎಂದು ಚಲನಚಿತ್ರ ನಿರ್ಮಾಪಕ ಅಲ್ತಾಫ್ ಅವರ ಸಂಬಂಧಿ ಬಿ.ಎ. ಹಸನಬ್ಬ ಪ್ರತಿಕ್ರಿಯಿಸಿದರು

Leave a Reply

Top