ಭಾರತವು ಅಮೆರಿಕಕ್ಕೆ ಬೆದರಿಕೆ: ಪೆನೆಟ್ಟಾ!

ಹೊಸದಿಲ್ಲಿ, ನ.18: ಭಾರತ ಹಾಗೂ ಚೀನವನ್ನು ಜೊತೆ ಸೇರಿಸಿದ ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ ಅವುಗಳು ಬೆಳೆಯುತ್ತಿರುವ ‘ಬೆದರಿಕೆಗಳು’ ಎಂದು ಆರೋಪಿಸಿದ್ದಾರೆ. ಆದರೆ, ಅವರ ಕಚೇರಿಯು ತಕ್ಷಣ ಈ ಹೇಳಿಕೆಯಿಂದ ಹಿಂದೆ ಸರಿದಿದ್ದು, ವಾಶಿಂಗ್ಟನ್ ಭಾರತದೊಂದಿಗಿನ ನಿಕಟ ಬಾಂಧವ್ಯಕ್ಕೆ ಬೆಲೆ ನೀಡುವುದೆಂದು ಹೇಳಿದೆ. ಕನೆಕ್ಟಿಕಟ್‌ನ ಹಡಗುಗಟ್ಟೆಯೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಲಿಖಿತ ಪಠ್ಯದಿಂದ ಹೊರ ಬಂದ ಅವರು ಈ ‘ಕಾಲನ್ನು ಬಾಯಿಗಿಡುವ’ ಕೆಲಸ ಮಾಡಿದ್ದು, ಬೆಳೆಯುತ್ತಿರುವ ಶಕ್ತಿಗಳಾದ ಚೀನ, ಭಾರತ ಹಾಗೂ ಇತರರಿಂದ ತಾವು ಬೆದರಿಕೆ ಎದುರಿಸುತ್ತಿದ್ದೇವೆ.
ತಾವು ಸದಾ ಈ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಾಗೂ ಫೆಸಿಫಿಕ್ ಪ್ರದೇಶದಲ್ಲಿ ಸದಾ ಸಾಕಷ್ಟು ರಕ್ಷಣಾ ಬಲವನ್ನು ಹೊಂದಿರಬೇಕು. ಈ ಮೂಲಕ ತಾವು ಎಲ್ಲಿಗೂ ಹೋಗುವುದಿಲ್ಲವೆಂಬ ಸಂದೇಶವನ್ನು ಅವುಗಳಿಗೆ ನೀಡಬೇಕು ಎಂದಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಯಾಗಿ ಕೇವಲ ದ್ವಿಪಕ್ಷೀಯವಾಗಿ ಮಾತ್ರವಲ್ಲದೆ ಬಹುಪಕ್ಷೀಯ ಮಟ್ಟದಲ್ಲಿ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಸುವ ಬಗ್ಗೆ ಒಪ್ಪಂದ ಮಾಡಿಕೊಂಡ ಸಮಯದಲ್ಲೇ ಪೆನೆಟ್ಟಾರ ಈ ಹೇಳಿಕೆ ಹೊರ ಬಿದ್ದಿದೆ. ಪರಮಾಣು ದಾಳಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಹಡಗು ಗಟ್ಟೆಯ ಕೆಲಸಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಮೆರಿಕಕ್ಕೆ ಇರಾನ್, ಉತ್ತರಕೊರಿಯ ಹಾಗೂ ಸೈಬರ್ ದಾಳಿಕಾರರಿಂದ ಬೆದರಿಕೆ ಬರುತ್ತಿದೆ ಎಂದಿದ್ದಾರೆ.
ತಾನು ಭಾರತದ ಭೇಟಿಯನ್ನು ಎದುರು ನೋಡುತ್ತಿದ್ದೇನೆಂದು ಇತ್ತೀಚೆಗಷ್ಟೇ ಬಹಿರಂಗವಾಗಿ ಹೇಳಿದ್ದ ಮಾಜಿ ಸಿಐಎ ವರಿಷ್ಠ, ಭಾರತ ಹಾಗೂ ಚೀನಗಳನ್ನು ಹೊಸ ಬೆದರಿಕೆಗಳೆನ್ನುವ ಮೂಲಕ ಅಮೆರಿಕದ ವಿದೇಶಾಂಗ ನೀತಿಯಿಂದ ಪಕ್ಕಕ್ಕೆ ಸರಿದಿದ್ದಾರೆ.
ಆದಾಗ್ಯೂ, ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಜಾರ್ಜ್ ಲಿಟ್ಲ್, ತಕ್ಷಣವೇ ಪ್ರಮಾದ ಸರಿಪಡಿಸಲು ಪ್ರಯತ್ನಿಸಿದ್ದು, ಅಮೆರಿಕವು ಭಾರತದೊಂದಿಗಿನ ಸಂಬಂಧಕ್ಕೆ ಅತ್ಯಂತ ವೌಲ್ಯ ನೀಡುತ್ತದೆ ಹಾಗೂ ಹೆಚ್ಚುತ್ತಿರುವ ಪ್ರಾಮುಖ್ಯ ಹಾಗೂ ಶಕ್ತಿಯ ದೇಶವೆಂದು ಪರಿಭಾವಿಸುತ್ತದೆ ಎಂದಿದ್ದಾರೆ. ಪೆನೆಟ್ಟಾ, ಭಾರತದೊಂದಿಗನ ಸೇನಾ ಸಂಬಂಧಕ್ಕೆ ಅತ್ಯಂತ ಬೆಲೆ ನೀಡುತ್ತಾರೆ. ಭಾರತವನ್ನು ಹೆಚ್ಚುತ್ತಿರುವ ಪ್ರಾಮುಖ್ಯ ಹಾಗೂ ಶಕ್ತಿಯ ದೇಶವೆಂದು ಪರಿಗಣಿಸಿದ್ದಾರೆ. ಅವರು ಭಾರತವನ್ನು ಬೆದರಿಕೆಯೆಂದು ಭಾವಿಸುವುದಿಲ್ಲ ಎಂದು ಮುಲಾಮು ಸವರಲು ಯತ್ನಿಸಿದ್ದಾರೆ.

Leave a Reply