ಹೈ-ಕ ವಿಮೋಚನಾ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೆ ನಮ್ಮೆಲ್ಲರ ಕರ್ತವ್ಯ

ಕೊಪ್ಪಳ ಸೆ. ೧೭  : ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರ ತ್ಯಾಗ, ಬಲಿದಾನದಿಂದಾಗಿ ಇಂದು ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುವ ಭಾಗ್ಯ ದೊರೆತಿದೆ.  ಇದರ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ನೋವು, ಅವರ ತ್ಯಾಗ ಮನೋಭಾವ ಅಡಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಭಾಷಣ ಮಾಡಿದರು.
  ಸುದೀರ್ಘ ಹೋರಾಟದ ಫಲವಾಗಿ ನಮ್ಮ ದೇಶ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರ್ಯ ಪಡೆದರೆ, ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕೊಪ್ಪಳ, ರಾಯಚೂರು, ಗುಲಬರ್ಗಾ, ಬೀದರ್ ಹಾಗೂ ಇತರೆ ಪ್ರದೇಶಗಳು ಸ್ವಾತಂತ್ರ್ಯ ಪಡೆಯಲು ಒಂದು ವರ್ಷ ಹೆಚ್ಚು ಕಾಯಬೇಕಾಯಿತು.  ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ, ಈ ಭಾಗದ ಜನರು ರಜಾಕಾರರ ದಬ್ಬಾಳಿಕೆಗೆ ಸಿಕ್ಕಿ ಶೋಷಣೆ ಅನುಭವಿಸುತ್ತಿದ್ದರು.  ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೆ ಮೊಂಡುತನವನ್ನು ಪ್ರದರ್ಶಿಸಿದ ನಿಜಾಮರು, ಉಕ್ಕಿನ ಮನುಷ್ಯರೆಂದೇ ಖ್ಯಾತಿ ಪಡೆದಿದ್ದಂತಹ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ಕ್ರಮದಿಂದಾಗಿ ಶರಣಾದರು.  ಹೈದ್ರಾಬಾದ್-ಕರ್ನಾಟಕ ಪ್ರದೇಶ ೧೯೪೮ ಸೆಪ್ಟಂಬರ್ ೧೭ ರಂದು ಸ್ವಾತಂತ್ರ್ಯ ಪಡೆದು, ಈ ಭಾಗದ ಜನರೂ ಸ್ವಾತಂತ್ರ್ಯದ ಸಂಭ್ರಮ ಸವಿಯುವಂತಾಯಿತು.  ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟಕ್ಕೆ ಪ್ರೇರಣಾ ಶಕ್ತಿಯಾಗಿದ್ದ ಶ್ರೀ ಸ್ವಾಮಿ ರಮಾನಂದ ತೀರ್ಥರು, ಇವರ ಶಕ್ತಿಗೆ ಬೆನ್ನೆಲುಬಾಗಿ ನಿಂತು ಹೋರಾಟದಲ್ಲಿ ತಮ್ಮದೇ ಕೊಡುಗೆ ನೀಡಿದ ಶಿವಮೂರ್ತಿ ಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ವೀರಭದ್ರಪ್ಪ ಶಿರೂರು, ಸಿ.ಎಂ. ಚುರ್ಚಿಹಾಳಮಠ, ಸೋಮಪ್ಪ ಡಂಬಳ, ಯರಾಶಿ ಶಂಕ್ರಪ್ಪ, ಎಂ. ವಿರುಪಾಕ್ಷಪ್ಪ, ನರಸಿಂಗರಾವ್, ಜನಾರ್ಧನರಾವ್ ದೇಸಾಯಿ, ದೇವೇಂದ್ರಕುಮಾರ ಹಕಾರಿ, ಡಾ: ಪಂಚಾಕ್ಷರಿ ಹಿರೇಮಠ ಸೇರಿದಂತೆ ಹಲವಾರು ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ನೆಲೆಗೊಂಡು ಜಿಲ್ಲೆಯ ಸಮಸ್ತ ಜನತೆ ಸಂತೋಷ ಸಮಾಧಾನಗಳಿಂದ ಶಾಂತಿಯುತ ಸಹಬಾಳ್ವೆ ನಡೆಸಲಿ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
  ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಕ್ರೀಡಾಂಗಣದಲ್ಲಿ ತೆರೆದ ಜೀಪಿನಲ್ಲಿ ತೆರಳಿ ಧ್ವಜವಂದನೆ ಸ್ವೀಕರಿಸಿದರು, ನಂತರ ಪೊಲೀಸ್, ಕೆಎಸ್‌ಆರ್‌ಪಿ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತು ಜರುಗಿತು.  ಮಹಾತ್ಮಾಗಾಂಧೀಜಿ ಸೇರಿದಂತೆ ಈ ನಾಡಿನ ಪ್ರಸಿದ್ಧ ಕವಿ, ಸಾಹಿತಿಗಳ ಸ್ತಬ್ದ ಚಿತ್ರಗಳು ಸಾಗಿಬಂದವು.   ಹೈದ್ರಾಬಾದ್-ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಶರಣಪ್ಪ ಉಮಚಗಿ ಅವರು ಹೈದ್ರಾಬಾದ್-ಕರ್ನಾಟಕ ವಿಮೋಚನೆಯ ರೋಚಕ ಘಟನಾವಳಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
  ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಎಂ. ಶರಣಬಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ನಗರದ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.
Please follow and like us:
error