ಬಿಜೆಪಿಯಲ್ಲಿ ತಲ್ಲಣ

 *ರಾಜ್ಯಾಧ್ಯಕ್ಷ ಈಶ್ವರಪ್ಪ ದಿಢೀರ್ ದಿಲ್ಲಿಗೆ ದೌಡು

ಬೆಂಗಳೂರು,ಅ.15:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಹೊಸ ಪಕ್ಷ ಸ್ಥಾಪಿಸುವುದು ಖಚಿತಗೊಳುತ್ತಿದ್ದಂತೆಯೇ ಬಿಜೆಪಿಯಲ್ಲಿ ದಿಢೀರ್ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ.ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಿಜೆಪಿ ಹೈಕಮಾಂಡ್‌ನ ಕರೆಯ ಮೇರೆಗೆ ಹೊಸದಿಲ್ಲಿಗೆ ಏಕಾಏಕಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ, ಪಕ್ಷದ ನೂತನ ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿದ್ದರೆನ್ನಲಾದ ಸಂಸದ ಪ್ರಹ್ಲಾದ್ ಜೋಷಿ ಹಾಗೂ ನಳಿನ್ ಕುಮಾರ್ ಕಟೀಲ್ ಸಹ ದಿಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಹಾಗೂ ಯಡಿಯೂರಪ್ಪ ನೂತನ ಪಕ್ಷ ಕಟ್ಟುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಯವರೊಂದಿಗೆ ಈಶ್ವರಪ್ಪ ಚರ್ಚೆ ನಡೆಸಲಿದ್ದಾರೆ.ಯಡಿಯೂರಪ್ಪನವರಿಂದ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ತುಂಬಿಕೊಳ್ಳುವ ಕಾರ್ಯತಂತ್ರ ರೂಪಿಸುವ ಕುರಿತು ಅವರು ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗಿದೆ.
ಯಡಿಯೂರಪ್ಪ ನೂತನ ಪಕ್ಷ ಸ್ಥಾಪಿಸಿದರೆ ಅವರೊಂದಿಗೆ ಯಾರ್ಯಾರು ತೆರಳಬಹುದು ಹಾಗೂ ಅದರಿಂದ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ಬೇರೆ ಪಕ್ಷದ ಮುಖಂಡರನ್ನು ಕರೆತರುವ ಮೂಲಕ ತುಂಬಿಕೊಳ್ಳವ ಕುರಿತು ಗಡ್ಕರಿಯವರೊಂದಿಗೆ ಮುಖಂಡರು ಚರ್ಚಿಸಲಿದ್ದಾರೆ.
ಯಡಿಯೂರಪ್ಪನವರ ಕೆಜೆಪಿ ಪಕ್ಷದ ಅಧಿಕೃತ ಆರಂಭಕ್ಕೆ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಸಂಬಂಧ ಮುಂದಿನ ಕಾರ್ಯತಂತ್ರ ರೂಪಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Please follow and like us:

Leave a Reply